IPL 2023 ಸನ್‌ರೈಸರ್ಸ್‌ ಚಾಲೆಂಜ್‌ ಗೆಲ್ಲುವ ವಿಶ್ವಾಸದಲ್ಲಿ ರಾಜಸ್ಥಾನ ರಾಯಲ್ಸ್

By Naveen KodaseFirst Published May 7, 2023, 11:37 AM IST
Highlights

ಜೈಪುರದಲ್ಲಿಂದು ರಾಜಸ್ಥಾನಕ್ಕೆ ಹೈದರಾಬಾದ್‌ ಸವಾಲು
ಕೊನೆ 5ರಲ್ಲಿ ತಲಾ 1 ಪಂದ್ಯ ಗೆದ್ದಿ​ರುವ ಇತ್ತಂಡ​ಗ​ಳು
ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ರಾಯಲ್ಸ್

ಜೈಪು​ರ(ಮೇ.07): ಕಳೆದ 5 ಪಂದ್ಯ​ಗ​ಳಲ್ಲಿ ಕೇವಲ 1 ಜಯ​ದೊಂದಿಗೆ ಪ್ಲೇ-ಆಫ್‌ ರೇಸ್‌​ನಿಂದಲೇ ಹೊರ​ಬೀ​ಳುವ ಆತಂಕಕ್ಕೆ ಗುರಿ​ಯಾ​ಗಿ​ರುವ ರಾಜ​ಸ್ಥಾನ ರಾಯಲ್ಸ್‌, ಭಾನು​ವಾರ ಸನ್‌​ರೈ​ಸರ್ಸ್‌ ಹೈದ​ರಾ​ಬಾದ್‌ ವಿರುದ್ಧ ಸೆಣ​ಸ​ಲಿದ್ದು, ಸುಧಾರಿತ ಪ್ರದರ್ಶನದೊಂದಿಗೆ ಹ್ಯಾಟ್ರಿಕ್‌ ಸೋಲು ತಪ್ಪಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಜೊತೆಗೆ ನೆಟ್‌ ರನ್‌ರೇಟ್‌ ಉತ್ತಮಗೊಳಿಸಿಕೊಳ್ಳುವುದರ ಕಡೆಗೂ ಗಮನ ಹರಿ​ಸ​ಬೇ​ಕಿದೆ. 

ಅತ್ತ ಸನ್‌ರೈಸರ್ಸ್‌ ಹೈದ್ರಾ​ಬಾದ್‌ ಕೂಡಾ ಕಳೆದ 5 ಪಂದ್ಯ​ದಲ್ಲಿ 4ರಲ್ಲಿ ಸೋತಿದೆ. ತಂಡ ಪ್ಲೇ-ಆಫ್‌ ರೇಸ್‌​ನಿಂದ ಬಹುತೇಕ ಹೊರ​ಬಿ​ದ್ದಿದೆ. ಬಾಕಿ ಇರುವ 5 ಪಂದ್ಯಗಳಲ್ಲಿ ಗೆದ್ದರೂ, ಕಳಪೆ ನೆಟ್‌ ರನ್‌ರೇಟ್‌ನ ಕಾರಣ ಪ್ಲೇ-ಆಫ್‌ ರೇಸ್‌ನಿಂದ ಹೊರಬೀಳುವ ಸಾಧ್ಯತೆಯೇ ಹೆಚ್ಚು. ಆದರೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ತಪ್ಪಿಸಿಕೊಳ್ಳಲು ಸನ್‌ರೈಸ​ರ್ಸ್‌ ಹೋರಾಡಬೇಕಿದೆ.

Latest Videos

ಮೇಲ್ನೋಟಕ್ಕೆ ಸನ್‌ರೈಸರ್ಸ್‌ ಹೈದರಾಬಾದ್‌ಗಿಂತ ರಾಜಸ್ಥಾನ ರಾಯಲ್ಸ್ ತಂಡವೇ ಕೊಂಚ ಬಲಿಷ್ಠವಾಗಿ ಕಂಡು ಬರುತ್ತಿದೆ. ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ದೇವದತ್ ಪಡಿಕ್ಕಲ್, ಶಿಮ್ರೊನ್ ಹೆಟ್ಮೇಯರ್ ಅವರಂತ ಟಿ20 ಸ್ಪೆಷಲಿಸ್ಟ್ ಬ್ಯಾಟರ್‌ಗಳು ರಾಯಲ್ಸ್ ಪಡೆಯಲಿದ್ದಾರೆ. ಇನ್ನು ಅಶ್ವಿನ್, ಚಹಲ್, ಜಂಪಾ ಹೀಗೆ ವಿಶ್ವದರ್ಜೆಯ ಮೂವರು ಸ್ಪಿನ್ನರ್‌ಗಳ ಜತೆಗೆ ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್ ಕೂಡಾ ಮಾರಕ ದಾಳಿ ನಡೆಸಲು ಸಜ್ಜಾಗಿದ್ದಾರೆ..

ಇನ್ನೊಂದೆಡೆ ಪ್ರತಿಭಾನ್ವಿತ ಆಟಗಾರರನ್ನೇ ಹೊಂದಿರುವ ಸನ್‌ರೈಸರ್ಸ್‌ ಹೈದರಾಬಾದ್ ಪರ ತಂಡದ ಆಟಗಾರರ ಸ್ಥಿರ ಪ್ರದರ್ಶನ ತೋರಲು ವಿಫಲವಾಗುತ್ತಿದ್ದಾರೆ. ಕನ್ನಡಿಗ ಮಯಾಂಕ್ ಅಗರ್‌ವಾಲ್, ಹ್ಯಾರಿ ಬ್ರೂಕ್ ಫಾರ್ಮ್‌ ಆರೆಂಜ್‌ ಆರ್ಮಿ ತಲೆನೋವು ಹೆಚ್ಚಿಸಿದೆ. ರಾಹುಲ್ ತ್ರಿಪಾಠಿ, ಹೆನ್ರಿಚ್ ಕ್ಲಾಸೇನ್ ಜತೆಗೆ ನಾಯಕ ಏಯ್ಡನ್ ಮಾರ್ಕ್‌ರಮ್ ಜವಾಬ್ದಾರಿಯುತ ಆಟವಾಡಬೇಕಿದೆ. ಇನ್ನು ಭುವನೇಶ್ವರ್ ಕುಮಾರ್, ಟಿ ನಟರಾಜನ್ ಹಾಗೂ ಕಾರ್ತಿಕ್‌ ತ್ಯಾಗಿ ಮಾರಕ ದಾಳಿ ನಡೆಸಿದರೆ, ಬಲಾಢ್ಯ ರಾಯಲ್ಸ್‌ಗೆ ತಿರುಗೇಟು ನೀಡಲು ಸಾಧ್ಯವಾಗಲಿದೆ.

IPL 2023: ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ..!

ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ತಂಡಗಳು 17 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ರಾಜಸ್ಥಾನ ರಾಯಲ್ಸ್ ಕೊಂಚ ಮೇಲುಗೈ ಸಾಧಿಸಿದೆ. 17 ಪಂದ್ಯಗಳ ಪೈಕಿ ರಾಜಸ್ಥಾನ ರಾಯಲ್ಸ್ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ 8 ಪಂದ್ಯಗಳಲ್ಲಿ ಗೆಲುವಿನ ಕೇಕೆ ಹಾಕಿದೆ.

ಸಂಭವನೀಯ ಆಟಗಾರರ ಪಟ್ಟಿ

ರಾಜ​ಸ್ಥಾ​ನ ರಾಯಲ್ಸ್: ಯಶಸ್ವಿ ಜೈಸ್ವಾಲ್‌, ಜೋಸ್ ಬಟ್ಲರ್‌, ಸಂಜು ಸ್ಯಾಮ್ಸನ್‌ ​(​ನಾ​ಯ​ಕ), ದೇವ​ದ​ತ್‌ ಪಡಿಕ್ಕಲ್, ಶಿಮ್ರೊನ್ ಹೆಟ್ಮೇ​ಯರ್‌, ದೃವ್ ಜುರೆಲ್‌, ರಿಯಾನ್‌ ಪರಾಗ್, ರವಿಚಂದ್ರನ್ ಅಶ್ವಿನ್‌, ಟ್ರೆಂಟ್ ಬೌಲ್ಟ್‌, ಆಡಂ ಜಂಪಾ, ಸಂದೀಪ್‌ ಶರ್ಮಾ, ಯುಜುವೇಂದ್ರ ಚಹ​ಲ್‌.

ಸನ್‌ರೈಸರ್ಸ್‌ ಹೈದ್ರಾ​ಬಾ​ದ್‌: ಮಯಾಂಕ್‌ ಅಗರ್‌ವಾಲ್, ಅಭಿಷೇಕ್‌ ಶರ್ಮಾ, ಏಯ್ಡನ್ ಮಾರ್ಕ್​ರ​ಮ್‌​(​ನಾ​ಯ​ಕ), ರಾಹುಲ್ ತ್ರಿಪಾಠಿ, ಹೆನ್ರಿಚ್ ಕ್ಲಾಸೆನ್‌, ಹ್ಯಾರಿ ಬ್ರೂಕ್‌, ಅಬ್ದುಲ್ ಸಮದ್‌, ಮಾರ್ಕೊ ಯಾನ್ಸೆನ್‌, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಕಾರ್ತಿಕ್ ತ್ಯಾಗಿ, ಟಿ ನಟ​ರಾ​ಜ​ನ್‌.

ಪಂದ್ಯ: ಸಂಜೆ 7.30ರಿಂದ, ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೋ ಸಿನಿಮಾ

ಪಿಚ್‌ ರಿಪೋ​ರ್ಚ್‌

ಜೈಪುರ ಪಿಚ್‌ ಸ್ಪರ್ಧಾ​ತ್ಮಕ ಕ್ರಿಕೆ​ಟ್‌ಗೆ ಹೆಸ​ರು​ವಾಸಿ. ಈ ವರ್ಷ ಇಲ್ಲಿ ನಡೆದಿರುವ 3 ಪಂದ್ಯಗಳ 6 ಇನ್ನಿಂಗ್ಸಲ್ಲಿ ಒಮ್ಮೆ ಮಾತ್ರ 200+ ರನ್‌ ದಾಖಲಾಗಿದೆ. ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟ್‌ ಮಾಡಿದರೆ ಲಾಭ ಹೆಚ್ಚು.

click me!