
ನವದೆಹಲಿ(ಮೇ.07): ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ 7 ಸಾವಿರ ರನ್ ಬಾರಿಸಿದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆ ನಿರ್ಮಿಸಿದ್ದಾರೆ
ಐಪಿಎಲ್ ವೃತ್ತಿಜೀವನದ 233ನೇ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ, ತಮ್ಮ ತವರಿನ ಮೈದಾನದಲ್ಲಿ ಈ ಐತಿಹಾಸಿಕ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾದರು. ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್, ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, 213 ಐಪಿಎಲ್ ಪಂದ್ಯಗಳನ್ನಾಡಿ 6,536 ರನ್ ಬಾರಿಸಿದ್ದಾರೆ. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್(6189 ರನ್, 171 ಪಂದ್ಯ) ಮತ್ತು ರೋಹಿತ್ ಶರ್ಮಾ(6063 ರನ್, 237 ಪಂದ್ಯ) ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಒಂದೇ ಐಪಿಎಲ್ ಆವೃತ್ತಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನ್ನುವ ದಾಖಲೆಯೂ ವಿರಾಟ್ ಕೊಹ್ಲಿ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿದೆ. ವಿರಾಟ್ ಕೊಹ್ಲಿ, 2016ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ 16 ಪಂದ್ಯಗಳನ್ನಾಡಿ 4 ಶತಕ ಸಹಿತ 973 ರನ್ ಚಚ್ಚಿದ್ದರು. ಈ ದಾಖಲೆ ಸದ್ಯಕ್ಕಂತೂ ಬ್ರೇಕ್ ಆಗುವುದು ಅನುಮಾನ ಎನಿಸಿದೆ.
ಇನ್ನು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಯೂ ವಿರಾಟ್ ಕೊಹ್ಲಿ ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿದ್ದಾರೆ. ಇದುವರೆಗೂ ವಿರಾಟ್ ಕೊಹ್ಲಿ 10 ಐಪಿಎಲ್ ಪಂದ್ಯಗಳನ್ನಾಡಿ 46.56ರ ಬ್ಯಾಟಿಂಗ್ ಸರಾಸರಿಯಲ್ಲಿ 5 ಅರ್ಧಶತಕ ಸಹಿತ 419 ರನ್ ಸಿಡಿಸಿದ್ದಾರೆ. ಈ ಮೂಲಕ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸದ್ಯ ವಿರಾಟ್ ಕೊಹ್ಲಿ, ನಾಲ್ಕನೇ ಸ್ಥಾನದಲ್ಲಿದ್ದಾರೆ.
ಗುಜರಾತ್ vs ಲಖನೌ: ಸೋದರರ ಸವಾಲ್‌ಗೆ ಮೋದಿ ಸ್ಟೇಡಿಯಂ ರೆಡಿ!
ಐಪಿಎಲ್‌ನಲ್ಲಿ 50 ಫಿಫ್ಟಿ ಪೂರೈಸಿದ ಕೊಹ್ಲಿ
ಡೆಲ್ಲಿ ವಿರುದ್ಧ ಬಾರಿಸಿದ ಅರ್ಧಶತಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ದಾಖಲಿಸಿದ 50ನೇ ಅರ್ಧಶತಕವೆನಿಸಿತು. ಈ ಸಾಧನೆ ಮಾಡಿದ ಕೇವಲ 2ನೇ ಬ್ಯಾಟರ್ ಎನ್ನುವ ಹಿರಿಮೆಗೆ ಕೊಹ್ಲಿ ಪಾತ್ರರಾದರು. ಡೇವಿಡ್ ವಾರ್ನರ್ 59 ಅರ್ಧಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಶಿಖರ್ ಧವನ್ 49ನೇ ಅರ್ಧಶತಕ ಬಾರಿಸಿ 3ನೇ ಸ್ಥಾನ ಪಡೆದಿದ್ದಾರೆ.
ಡೆಲ್ಲಿ ಎದುರು ಆರ್‌ಸಿಬಿಗೆ ಸೋಲು:
ಕೊಹ್ಲಿ, ಡು ಪ್ಲೆಸಿ ಹಾಗೂ ಲೊಮ್ರೊರ್ ಹೋರಾಟದಿಂದಾಗಿ ಆರ್ಸಿಬಿ 20 ಓವರಲ್ಲಿ ಗಳಿಸಿದ್ದು 4 ವಿಕೆಟ್ಗೆ 181 ರನ್. ಇನ್ನಿಂಗ್‌್ಸ ಬಳಿಕ 160 ಉತ್ತಮ ಮೊತ್ತ ಎಂದು ಕೊಹ್ಲಿಯೇ ಹೇಳಿದ್ದರಿಂದ ತಂಡದ ಜಯದ ಆಸೆ ಹೆಚ್ಚಾಗಿತ್ತು. ಆದರೆ ಯಾರೂ ನಿರೀಕ್ಷಿಸದ ರೀತಿ ಡೆಲ್ಲಿ 16.4 ಓವರಲ್ಲೇ ಗುರಿ ತಲುಪಿತು.
ಮೊದಲ ಎಸೆತದಿಂದಲೇ ಆರ್ಭಟಿಸಲು ಶುರುವಿಟ್ಟವಾರ್ನರ್(22) ಹಾಗೂ ಸಾಲ್ಟ್ ಜೋಡಿ ಪವರ್-ಪ್ಲೇ ಮುಕ್ತಾಯದ ವೇಳೆಗೆ 70 ರನ್ ದೋಚಿತು. 6ನೇ ಓವರಲ್ಲಿ ವಾರ್ನರ್ ಔಟಾದ ಬಳಿಕ ಮಿಚೆಲ್ ಮಾಷ್‌ರ್ 26 ರನ್ ಸಿಡಿಸಿ ರನ್ ಗಳಿಕೆಯ ವೇಗ ಹೆಚ್ಚಿಸಿದರೆ, ರುಸ್ಸೌ(33) ಅಬ್ಬರ ಆರ್‌ಸಿಬಿಗೆ ಮತ್ತಷ್ಟುಆಘಾತ ನೀಡಿತು. ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಸಾಲ್ಟ್ 45 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ನೊಂದಿಗೆ 87 ರನ್ ಸಿಡಿಸಿ ಔಟಾದರು. ಆದರೆ ಆ ವೇಳೆಗಾಗಲೇ ಗೆಲುವು ಆರ್ಸಿಬಿ ಕೈ ಜಾರಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.