
ಮುಂಬೈ(ಮೇ.21): ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ತವರಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದ್ದು, ಪ್ಲೇ ಆಫ್ ಪ್ರವೇಶಿಸುವ ದೃಷ್ಟಿಯಿಂದ ರೋಹಿತ್ ಶರ್ಮಾ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ಈಗಾಗಲೇ ಪ್ಲೇ ಆಫ್ ರೇಸ್‌ನಿಂದ್ ಹೊರಬಿದ್ದಿದ್ದು, ಇದೀಗ ತನ್ನ ಜತೆಗೆ ಮುಂಬೈ ಇಂಡಿಯನ್ಸ್ ತಂಡವನ್ನು ಮುಳುಗಿಸಲು ಸಜ್ಜಾಗಿದೆ.
ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ ಆತಿಥ್ಯ ವಹಿಸಿದೆ. ಇದೀಗ ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಅಭಿಮಾನಿಗಳ ಚಿತ್ತ ಈ ಪಂದ್ಯದತ್ತ ನೆಟ್ಟಿದೆ. ಒಂದು ವೇಳೆ ಈ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಜಯಿಸಿದರೆ, ರಾಜಸ್ಥಾನ ರಾಯಲ್ಸ್ ತಂಡವು ಪ್ಲೇ ಆಫ್ ರೇಸ್‌ನಿಂದ ಹೊರಬೀಳಲಿದೆ. ಇನ್ನು ಮುಂಬೈ ಇಂಡಿಯನ್ಸ್ ಗೆದ್ದರೇ, ಆರ್‌ಸಿಬಿ ತಂಡವು ಗುಜರಾತ್ ಟೈಟಾನ್ಸ್ ಎದುರು ಯಾವ ಅಂತರದಲ್ಲಿ ಗೆಲ್ಲಬೇಕು ಎನ್ನುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯಲಿದೆ. ಹೀಗಾಗಿ ಈ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ.
ಪ್ಲೇ ಆಫ್ ಹೊಸ್ತಿಲಲ್ಲಿ ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಸದ್ಯ 13 ಪಂದ್ಯಗಳನ್ನಾಡಿ 7 ಗೆಲುವು ಹಾಗೂ 6 ಸೋಲು ಸಹಿತ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇನ್ನು ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕೂಡಾ ಇಷ್ಟೇ ಗೆಲುವು ಹಾಗೂ ಸೋಲು ಅನುಭವಿಸಿದ್ದರೂ, ನೆಟ್ ರನ್‌ರೇಟ್ ಉತ್ತಮವಾಗಿದ್ದರಿಂದಾಗಿ ಅಂಕಪಟ್ಟಿಯಲ್ಲಿ ಕ್ರಮವಾಗಿ 4 ಹಾಗೂ 5ನೇ ಸ್ಥಾನದಲ್ಲಿವೆ. ಒಂದು ವೇಳೆ ಮುಂಬೈ ಇಂಡಿಯನ್ಸ್ ತಂಡವು, ಇಂದು ಸನ್‌ರೈಸರ್ಸ್ ಎದುರು ಗೆಲುವು ಸಾಧಿಸಿ, ಆರ್‌ಸಿಬಿ ತಂಡವು ಗುಜರಾತ್ ಎದುರು ಮುಗ್ಗರಿಸಿದರೆ, ರೋಹಿತ್ ಶರ್ಮಾ ಪಡೆ 4ನೇ ತಂಡವಾಗಿ ಐಪಿಎಲ್ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ.
ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್‌ಗಿಂತ ಸಾಕಷ್ಟು ಸಮತೋಲಿತವಾಗಿ ಕಂಡು ಬರುತ್ತಿದೆ. ಬ್ಯಾಟಿಂಗ್‌ನಲ್ಲಿ ಮುಂಬೈ ತಂಡವು ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ನಾಯಕ ರೋಹಿತ್ ಶರ್ಮಾ ಹಾಗೂ ಕ್ಯಾಮರೋನ್ ಗ್ರೀನ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಇನ್ನು ಬೌಲಿಂಗ್‌ನಲ್ಲಿ ಕ್ರಿಸ್ ಜೋರ್ಡನ್, ಪೀಯೂಸ್ ಚಾವ್ಲಾ ಹಾಗೂ ಜೇಸನ್ ಬೆಹ್ರನ್‌ಡ್ರಾಫ್ ಮಾರಕ ದಾಳಿ ನಡೆಸಲು ಸಜ್ಜಾಗಿದ್ದಾರೆ.
IPL 2023 ಗುಜರಾತ್ ಮಣಿಸಿ ಪ್ಲೇ-ಆಫ್‌ಗೇರುವ ತವಕದಲ್ಲಿ ಆರ್‌ಸಿಬಿ!
ಸನ್‌ರೈಸರ್ಸ್ ಹೈದರಾಬಾದ್ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಬಲಿಷ್ಠ ಮುಂಬೈ ತಂಡವನ್ನು ಅವರದ್ದೇ ಮೈದಾನದಲ್ಲಿ ಮಣಿಸಿ ಗೆಲುವಿನೊಂದಿಗೆ ಅಭಿಯಾನ ಮುಗಿಸಲು ಹಾತೊರೆಯುತ್ತಿದೆ. ಬಲಿಷ್ಠ ಮುಂಬೈ ಇಂಡಿಯನ್ಸ್ ಎದುರು ಗೆಲುವು ಸಾಧಿಸಬೇಕಿದ್ದರೇ ಆರೆಂಜ್ ಆರ್ಮಿ ಸಂಘಟಿತ ಪ್ರದರ್ಶನ ತೋರಬೇಕಿದೆ. ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಾಯಕ ಏಯ್ಡನ್ ಮಾರ್ಕ್‌ರಮ್ ಜತೆಗೆ ವಿಕೆಟ್ ಕೀಪರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಮತ್ತೊಮ್ಮೆ ಜವಾಬ್ದಾರಿಯುತ ಆಟವಾಡಬೇಕಿದೆ. ಇನ್ನು ಭುವನೇಶ್ವರ್ ಕುಮಾರ್, ಮಯಾಂಕ್ ದಾಗರ್ ಜತೆಗೆ ಮಾರಕ ವೇಗಿ ಉಮ್ರಾನ್ ಮಲಿಕ್ ಕೂಡಾ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದ್ದು, ಮುಂಬೈ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸವಾಲು ಮುಂದಿದೆ.
ಸಂಭವನೀಯ ತಂಡಗಳು ಹೀಗಿವೆ ನೋಡಿ
ಮುಂಬೈ ಇಂಡಿಯನ್ಸ್:
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡನ್, ವಿಷ್ಣು ವಿನೋದ್, ಪೀಯೂಸ್ ಚಾವ್ಲಾ, ಜೇಸನ್ ಬೆಹನ್‌ಡ್ರಾಫ್, ಕುಮಾರ್ ಕಾರ್ತಿಕೇಯ.
ಸನ್‌ರೈಸರ್ಸ್ ಹೈದರಾಬಾದ್:
ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್‌ರಮ್(ನಾಯಕ), ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಫ್ಸ್, ಅಬ್ದುಲ್ ಸಮದ್, ಉಮ್ರಾನ್ ಮಲಿಕ್, ಮಯಾಂಕ್ ದಾಗರ್, ಭುವನೇಶ್ವರ್ ಕುಮಾರ್, ನಿತೀಶ್ ರೆಡ್ಡಿ.
ಪಂದ್ಯ ಆರಂಭ: ಮಧ್ಯಾಹ್ನ 3.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಸಿನಿಮಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.