
ಬೆಂಗಳೂರು(ಏ.15): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 20ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಉಭಯ ತಂಡಗಳಲ್ಲೂ ಮಹತ್ವದ ಬದಲಾವಣೆ ಮಾಡಲಾಗಿದೆ
ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಮೈದಾನ ಆತಿಥ್ಯವನ್ನು ವಹಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ರೋವ್ಮನ್ ಪೋವೆಲ್ ಬದಲಿಗೆ ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್ ಮಿಚೆಲ್ ಮಾರ್ಷ್ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ಆರ್‌ಸಿಬಿ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಡೇವಿಡ್ ವಿಲ್ಲಿ ಬದಲಿಗೆ ಮಿಸ್ಟ್ರಿ ಸ್ಪಿನ್ನರ್ ವನಿಂದು ಹಸರಂಗ ತಂಡ ಕೂಡಿಕೊಂಡಿದ್ದಾರೆ. ಇನ್ನು ಕನ್ನಡದ ವೇಗಿ ವೈಶಾಖ್ ವಿಜಯ್‌ಕುಮಾರ್ ತಂಡ ಕೂಡಿಕೊಂಡಿದ್ದಾರೆ
ಕನ್ನಡಿಗ ಐಪಿಎಲ್‌ಗೆ ಪಾದಾರ್ಪಣೆ: ಕರ್ನಾಟಕದ ದೇಶಿ ಪ್ರತಿಭೆ ವೈಶಾಖ್ ವಿಜಯ್ ಕುಮಾರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಕರ್ಣ್ ಶರ್ಮಾ ಬದಲಿಗೆ ವೈಶಾಖ್ ವಿಜಯ್‌ಕುಮಾರ್ ಆರ್‌ಸಿಬಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಅಭೂತಪೂರ್ವ ಲಯದಲ್ಲಿದ್ದು, ತವರಿನ ಅಭಿಮಾನಿಗಳ ಮುಂದೆ ಮತ್ತೊಮ್ಮೆ ರನ್ ಹೊಳೆ ಹರಿಸಲು ಸಜ್ಜಾಗಿದ್ದಾರೆ.
IPL 2023 ಕುಗ್ಗಿರುವ ಡೆಲ್ಲಿಯನ್ನು ಬಗ್ಗುಬಡಿಯುತ್ತಾ ಆರ್‌ಸಿಬಿ?
ಒಂದು ಕಡೆ ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿದ ಮೊದಲ 4 ಪಂದ್ಯಗಳಲ್ಲೂ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದು, ಮೊದಲ ಗೆಲುವಿನ ಕನವರಿಕೆಯಲ್ಲಿದೆ. ಇನ್ನೊಂದೆಡೆ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತಾದರೂ, ಇದಾದ ಬಳಿಕ ಆಡಿದ ಕಳೆದೆರಡು ಪಂದ್ಯಗಳಲ್ಲಿ ರೋಚಕ ಸೋಲು ಅನುಭವಿಸಿದೆ. ಹೀಗಾಗಿ ಇದೀಗ ಆರ್‌ಸಿಬಿ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.
ತಂಡಗಳು ಹೀಗಿವೆ ನೋಡಿ
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್, ಶಾಬಾಜ್ ಅಹಮ್ಮದ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ವೈಶಾಖ್ ವಿಜಯ್‌ಕುಮಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.
ಡೆಲ್ಲಿ: ಡೇವಿಡ್ ವಾರ್ನರ್(ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಯಶ್ ಧುಳ್, ಅಭಿಷೇಕ್ ಪೋರೆಲ್, ಕುಲ್ದೀಪ್ ಯಾದವ್, ಏನ್ರಿಚ್ ನೋಕಿಯ, ಮುಸ್ತಾಫಿಜುರ್ ರೆಹಮಾನ್, ಮುಕೇಶ್ ಕುಮಾರ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.