
ಲಖನೌ(ಫೆ.15): ಎರಡು ಗೆಲುವುಗಳೊಂದಿಗೆ 16ನೇ ಆವೃತ್ತಿ ಐಪಿಎಲ್ ಅನ್ನು ಭರ್ಜರಿಯಾಗಿ ಆರಂಭಿಸಿದ್ದ ಪಂಜಾಬ್ ಕಿಂಗ್ಸ್ ಆ ನಂತರ ಸತತ 2 ಸೋಲು ಕಂಡು ಒತ್ತಡಕ್ಕೆ ಒಳಗಾದಂತೆ ಕಾಣುತ್ತಿದೆ. ಶನಿವಾರ ತಂಡಕ್ಕೆ ಲಖನೌ ಸೂಪರ್ ಜೈಂಟ್ಸ್ ಸವಾಲು ಎದುರಾಗಲಿದ್ದು, ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳುವ ವಿಶ್ವಾಸದಲ್ಲಿ ಶಿಖರ್ ಧವನ್ ಪಡೆ ಇದೆ.
ಲಖನೌ ತಂಡ ಸೂಕ್ತ ಸಂಯೋಜನೆಯನ್ನು ಕಂಡುಕೊಂಡಂತೆ ಕಾಣುತ್ತಿದ್ದು ಉತ್ತಮವಾಗಿ ರೂಪುಗೊಳ್ಳುತ್ತಿದೆ. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಲಖನೌ ತಂಡದಿಂದ ಪಂಜಾಬ್‌ಗೆ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ. ಲಖನೌ ಈ ಪಂದ್ಯ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಲಖನೌ ತಂಡದ ಪರ ಮೊದಲೆರಡು ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದ ಕೈಲ್ ಮೇಯರ್ಸ್, ಇದಾದ ಬಳಿಕ ಉಳಿದೆರಡು ಪಂದ್ಯಗಳಲ್ಲಿ ಕ್ರಮವಾಗಿ 13 ಹಾಗೂ ಶೂನ್ಯ ಸಂಪಾದನೆ ಮಾಡಿದ್ದರು. ಇನ್ನು ಬೌಲಿಂಗ್‌ನಲ್ಲಿಯೂ ಪರಿಣಾಮಕಾರಿಯಾಗಿರಲಿಲ್ಲ. ಹೀಗಾಗಿ ಕೈಲ್ ಮೇಯರ್ಸ್ ಬದಲಿಗೆ ಕ್ವಿಂಟನ್ ಡಿ ಕಾಕ್, ಲಖನೌ ಸೂಪರ್ ಜೈಂಟ್ಸ್ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ಸಾಧ್ಯತೆಯಿದೆ.
ಇನ್ನುಳಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯದಲ್ಲಿ ಲಖನೌ ಪರ ಮಾರ್ಕಸ್ ಸ್ಟೋನಿಸ್ ಹಾಗೂ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಇದರ ಜತೆಗೆ ರಾಹುಲ್, ದೀಪಕ್ ಹೂಡಾ ಕೂಡಾ ಕೂಡಿಕೊಂಡರೆ, ಲಖನೌ ಬ್ಯಾಟಿಂಗ್ ಪಡೆ ನಿಯಂತ್ರಿಸುವುದು ಪಂಜಾಬ್ ತಂಡದ ಪಾಲಿಗೆ ಸವಾಲೆನಿಸುವ ಸಾಧ್ಯತೆಯಿದೆ.
IPL 2023 ಕುಗ್ಗಿರುವ ಡೆಲ್ಲಿಯನ್ನು ಬಗ್ಗುಬಡಿಯುತ್ತಾ ಆರ್‌ಸಿಬಿ?
ಮತ್ತೊಂದೆಡೆ ಪಂಜಾಬ್ ಮಧ್ಯ ಓವರ್‌ಗಳಲ್ಲಿ ನಿಧಾನಗತಿಯ ಆಟವಾಡುತ್ತಿದ್ದು, ಈ ಆವೃತ್ತಿಯಲ್ಲಿ ಅತಿಹೆಚ್ಚು ಡಾಟ್ ಬಾಲ್‌ಗಳನ್ನಾಡಿದ ತಂಡಗಳಲ್ಲಿ ಒಂದೆನಿಸಿದೆ. ಹೀಗಾಗಿ ಬ್ಯಾಟರ್‌ಗಳ ಸಾಧಾರಣ ಆಟವು, ಬೌಲರ್‌ಗಳನ್ನು ಒತ್ತಡಕ್ಕೆ ಸಿಲುಕಿಸುತ್ತಿದೆ. ಪಂಜಾಬ್ ಕಿಂಗ್ಸ್ ತಂಡವು ಗೆಲುವಿನ ಹಳಿಗೆ ಮರಳಬೇಕಿದ್ದರೇ, ಶಿಖರ್ ಧವನ್, ಭಾನುಕಾ ರಾಜಪಕ್ಸಾ, ಮ್ಯಾಥ್ಯೂ ಶಾರ್ಟ್, ಶಾರುಕ್ ಖಾನ್ ಸ್ಪೋಟಕ ಬ್ಯಾಟಿಂಗ್ ನಡೆಸಬೇಕಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಕಗಿಸೋ ರಬಾಡ, ಆರ್ಶದೀಪ್ ಸಿಂಗ್, ಸ್ಯಾಮ್ ಕರ್ರನ್ ಮತ್ತಷ್ಟು ಮಾರಕ ದಾಳಿಯನ್ನು ಸಂಘಟಿಸಬೇಕಿದೆ.
ಮುಖಾಮುಖಿ: 01
ಪಂಜಾಬ್: 00
ಲಖನೌ: 01
ಸಂಭವನೀಯ ಆಟಗಾರರ ಪಟ್ಟಿ
ಪಂಜಾಬ್: ಶಿಖರ್ ಧವನ್(ನಾಯಕ), ಪ್ರಭ್‌ಸಿಮ್ರನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ಸ್ಯಾಮ್ ಕರ್ರನ್, ಶಾರೂಖ್ ಖಾನ್, ಹಪ್ರೀರ್ತ್ ಬ್ರಾರ್, ರಿಷಿ ಧವನ್, ಅಶ್‌ರ್‍ದೀಪ್ ಸಿಂಗ್, ಕಗಿಸೋ ರಬಾಡ.
ಲಖನೌ: ಕ್ವಿಂಟನ್ ಡಿ ಕಾಕ್, ಕೆ ಎಲ್ ರಾಹುಲ್(ನಾಯಕ), ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ಕೆ.ಗೌತಮ್, ಆಯುಷ್ ಬದೋನಿ, ಆವೇಶ್ ಖಾನ್, ರವಿ ಬಿಷ್ಣೋಯ್, ಮಾರ್ಕ್ ವುಡ್.
ಪಂದ್ಯ: ಸಂಜೆ.7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಚ್
ಏಕನಾ ಕ್ರೀಡಾಂಗಣದ ಪಿಚ್ ಸ್ಪಿನ್ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಕಡಿಮೆ. 2ನೇ ಇನ್ನಿಂಗ್‌್ಸ ವೇಳೆ ಬ್ಯಾಟಿಂಗ್ ಕಷ್ಟವಾಗಬಹುದು. ಹೀಗಾಗಿ ಮತ್ತೊಮ್ಮೆ ಟಾಸ್ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.