
ಲಖನೌ(ಮೇ.16): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೂಲಕ ಅರ್ಜುನ್ ತೆಂಡುಲ್ಕರ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರಿನ ಪಂದ್ಯಕ್ಕೂ ಮುನ್ನ ದಿನ ಅರ್ಜುನ್ ತೆಂಡುಲ್ಕರ್‌ಗೆ ನಾಯಿ ಕಚ್ಚಿರುವ ವಿಚಾರ ಬಹಿರಂಗಗೊಂಡಿದೆ.
ಹೌದು, ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಅರ್ಜುನ್ ತೆಂಡುಲ್ಕರ್, ಲಖನೌ ಜೈಂಟ್ಸ್ ಎದುರಿನ ಪಂದ್ಯದ ಮುನ್ನ ದಿನ ಲಖನೌ ಆಟಗಾರ ಯಧುವೀರ್ ಸಿಂಗ್ ಬಳಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ತಮಗೆ ನಾಯಿ ಕಚ್ಚಿದ್ದಾಗಿ ಹೇಳುವ ವಿಡಿಯೋ ತುಣುಕನ್ನು ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಅರ್ಜುನ್ ತೆಂಡುಲ್ಕರ್ ಹಾಗೂ ಯಧುವೀರ್ ಸಿಂಗ್ ಮುಖಾಮುಖಿಯಾದಾಗ, ಯಧುವೀರ್ ಸಿಂಗ್, ಅರ್ಜುನ್‌ಗೆ ಹೇಗಿದ್ದೀಯಾ ಎಂದು ಕೇಳುತ್ತಾರೆ. ಆಗ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ತಾವು ಬೌಲಿಂಗ್ ಮಾಡುವ ಎಡಗೈ ತೋರಿಸಿ, ನಾಯಿ ಕಚ್ಚಿದ್ದಾಗಿ ಹೇಳುತ್ತಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
'ನಾನು ಕೊನೆಯುಸಿರೆಳೆಯುವ ಮುನ್ನ ಈ 2 ಕ್ಷಣಗಳನ್ನು ನೋಡಬೇಕು'; ಕೊನೆಯಾಸೆ ಬಿಚ್ಚಿಟ್ಟ ಸುನಿಲ್ ಗವಾಸ್ಕರ್
ಹೀಗಿತ್ತು ನೋಡಿ ಆ ವಿಡಿಯೋ:
ಸಾಕಷ್ಟು ವರ್ಷಗಳ ಕಾಯುವಿಕೆಯ ಬಳಿಕ ಅರ್ಜುನ್ ತೆಂಡುಲ್ಕರ್, ಕೊನೆಗೂ ಈ ಆವೃತ್ತಿಯಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅರ್ಜುನ್ ತೆಂಡುಲ್ಕರ್, 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪರ 4 ಪಂದ್ಯಗಳನ್ನಾಡಿ ಮೂರು ವಿಕೆಟ್ ಕಬಳಿಸಿದ್ದಾರೆ. ಇನ್ನು ಒಮ್ಮೆ ಮಾತ್ರ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಅರ್ಜುನ್ ತೆಂಡುಲ್ಕರ್ 13 ರನ್ ಬಾರಿಸಿದ್ದಾರೆ.
ಲಖನೌದಲ್ಲಿಂದು ಮುಂಬೈ-ಸೂಪರ್‌ಜೈಂಟ್ಸ್ ಹೈವೋಲ್ಟೇಜ್ ಕದನ
ಪ್ಲೇ-ಆಫ್ ಹಂತ ಪ್ರವೇಶಕ್ಕೆ ಪೈಪೋಟಿ ತೀವ್ರಗೊಂಡಿದ್ದು, ಆರಂಭಿಕ ಹಿನ್ನಡೆಯ ಹೊರತಾಗಿಯೂ ಸತತ ಗೆಲುವುಗಳ ಮೂಲಕ ಮುನ್ನುಗ್ಗುತ್ತಿರುವ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಅಗ್ರ-4ರಲ್ಲಿ ಸ್ಥಾನ ಪಡೆದು ಪ್ಲೇ-ಆಫ್‌ಗೇರಲು ಎದುರು ನೋಡುತ್ತಿದೆ. ಲಖನೌ ಸೂಪರ್‌ಜೈಂಟ್ಸ್ ಕೂಡ ಪ್ಲೇ-ಆಫ್ ರೇಸ್‌ನಲ್ಲಿದ್ದು, ಉಭಯ ತಂಡಗಳು ಮಂಗಳವಾರ ಪರಸ್ಪರ ಎದುರಾಗಲಿವೆ.
12 ಪಂದ್ಯಗಳಿಂದ ಮುಂಬೈ 14 ಅಂಕ ಕಲೆಹಾಕಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಅಷ್ಟೇ ಪಂದ್ಯಗಳಿಂದ 13 ಅಂಕ ಗಳಿಸಿರುವ ಲಖನೌ 4ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇ-ಆಫ್‌ಗೇರುವ ಅವಕಾಶವನ್ನು ಗಟ್ಟಿಗೊಳಿಸಿಕೊಳ್ಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.