
ಚೆನ್ನೈ(ಮೇ): ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಬಳಿಕ ತವರಿಗೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಬೆನ್ ಸ್ಟೋಕ್ಸ್ ಅವರ ಅನುಪಸ್ಥಿತಿಯಲ್ಲಿ ಪ್ಲೇ ಆಫ್ ಆಡುವ ಸಾಧ್ಯತೆ ದಟ್ಟವಾಗಿದೆ.
31 ವರ್ಷದ ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಕಳೆದ ಐಪಿಎಲ್ ಆಟಗಾರರ ಮಿನಿ ಹರಾಜಿನಲ್ಲಿ ಬರೋಬ್ಬರಿ 16.25 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಬೆನ್ ಸ್ಟೋಕ್ಸ್ ಕೇವಲ ಮೊದಲೆರಡು ಪಂದ್ಯಗಳನ್ನು ಆಡಲಷ್ಟೇ ಶಕ್ತರಾಗಿದ್ದರು. ಬೆನ್ ಸ್ಟೋಕ್ಸ್ ಮೊದಲ ಪಂದ್ಯದಲ್ಲಿ 7 ಹಾಗೂ ಎರಡನೇ ಪಂದ್ಯದಲ್ಲಿ ಕೇವಲ ಎಂಟು ರನ್ ಗಳಿಸಿದ್ದರು. ಇನ್ನು ಕೇವಲ ಒಂದು ಓವರ್ ಬೌಲಿಂಗ್ ಮಾಡಿ 18 ರನ್ ನೀಡಿ ದುಬಾರಿಯಾಗಿದ್ದರು.
ಮುಂಬರುವ ಜೂನ್ 16ರಿಂದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ತವರಿನಲ್ಲಿ ಆಷಸ್ ಟೆಸ್ಟ್ ಸರಣಿ ಆರಂಭವಾಗುವುದರಿಂದಾಗಿ, ಚೆನ್ನೈ ತಂಡವು ಲೀಗ್ ಹಂತದಲ್ಲಿ ಕೊನೆಯ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಆಡಲಿದೆ. ಈ ಪಂದ್ಯ ಮುಗಿಯುತ್ತಿದ್ದಂತೆಯೇ ಬೆನ್ ಸ್ಟೋಕ್ಸ್, ತವರಿಗೆ ವಾಪಾಸ್ಸಾಗಲಿದ್ದಾರೆ ಎಂದು ಖ್ಯಾತ ಕ್ರಿಕೆಟ್ ವೆಬ್‌ಸೈಟ್ ESPNcricinfo ವರದಿ ಮಾಡಿದೆ.
IPL 2023 ಮುಂಬೈ ಓಟಕ್ಕೆ ಬ್ರೇಕ್ ಹಾಕುತ್ತಾ ಲಖನೌ ಸೂಪರ್‌ಜೈಂಟ್ಸ್?
ಆಷಸ್ ಸರಣಿಗೂ ಮುನ್ನ ಪೂರ್ವಭಾವಿ ಸಿದ್ದತೆಗಾಗಿ ಜೂನ್ 01ರಿಂದ ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಐರ್ಲೆಂಡ್ ವಿರುದ್ದ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ. ಇನ್ನು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಸಾಕಷ್ಟು ಸಮಯದಿಂದ ಮೊಣಕಾಲ ಗಾಯದ ಸಮಸ್ಯೆಯಿಂದ ಬಳಲುತ್ತಾ ಬಂದಿದ್ದಾರೆ. ಅವರು ಆದಷ್ಟು ಬೇಗ ಗಾಯದಿಂದ ಚೇತರಿಸಿಕೊಂಡು ಟೆಸ್ಟ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಬೇಕು ಹಾಗೂ ನಾಲ್ಕನೇ ವೇಗಿಯ ರೂಪದಲ್ಲಿ ತಂಡಕ್ಕೆ ಆಸರೆಯಾಗಬೇಕು ಎಂದು ಬೆನ್ ಸ್ಟೋಕ್ಸ್ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಏಪ್ರಿಲ್ 03ರಂದು ನಡೆದ ಪಂದ್ಯದ ಬಳಿಕ ಬೆನ್ ಸ್ಟೋಕ್ಸ್, ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿರಲಿಲ್ಲ. ಆ ಪಂದ್ಯದ ವೇಳೆ ಸ್ಟೋಕ್ಸ್‌ಗೆ ಮೊಣಕಾಲು ಹೆಬ್ಬೆರಳಿಗೆ ಗಾಯಗೊಂಡಿತ್ತು.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 13 ಪಂದ್ಯಗಳನ್ನಾಡಿ 7 ಗೆಲುವು ಹಾಗೂ 5 ಸೋಲು ಕಂಡಿದೆ. ಇನ್ನೊಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿರಲಿಲ್ಲ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡವು 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನೊಂದು ಗೆಲುವು ದಾಖಲಿಸಿದರೆ ಚೆನ್ನೈ ತಂಡವು ಪ್ಲೇ ಆಫ್‌ಗೆ ಅಧಿಕೃತವಾಗಿ ಲಗ್ಗೆಯಿಡುವುದರ ಜತೆಗೆ ಮೊದಲ ಕ್ವಾಲಿಪೈಯರ್ ಪಂದ್ಯವನ್ನಾಡಲು ಅರ್ಹತೆಗಿಟ್ಟಿಸಿಕೊಳ್ಳಲಿದೆ. ಈಗಾಗಲೇ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಅಧಿಕೃತವಾಗಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದ್ದ, ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆ ಪಡೆದುಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.