IPL 2022: ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್‌ಸಿಬಿ ನಾಯಕನಾಗಲಾರ ಎಂದ ಡೇನಿಯಲ್ ವೆಟ್ಟೋರಿ

Published : Mar 08, 2022, 05:08 PM IST
IPL 2022: ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್‌ಸಿಬಿ ನಾಯಕನಾಗಲಾರ ಎಂದ ಡೇನಿಯಲ್ ವೆಟ್ಟೋರಿ

ಸಾರಾಂಶ

* 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಮಾರ್ಚ್‌ 26ರಿಂದ ಆರಂಭ * ಹೊಸ ನಾಯಕನ ಹುಡುಕಾಟದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು * ಈಗಾಗಲೇ ಆರ್‌ಸಿಬಿ ನಾಯಕತ್ವಕ್ಕೆ ಗುಡ್ ಬೈ ಹೇಳಿರುವ ವಿರಾಟ್ ಕೊಹ್ಲಿ

ಬೆಂಗಳೂರು(ಮಾ.08): ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2022) ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. 2021ನೇ ಸಾಲಿನ ಐಪಿಎಲ್ ಟೂರ್ನಿ ಮುಕ್ತಾಯವಾಗುತ್ತಿದ್ದಂತೆಯೇ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ (Virat Kohli) ಗುಡ್‌ ಬೈ ಹೇಳಿದ್ದರು. ಇದೀಗ ಆರ್‌ಸಿಬಿ ಫ್ರಾಂಚೈಸಿಯು ಹೊಸ ನಾಯಕನ ಹುಡುಕಾಟದಲ್ಲಿದೆ. ಒಂದು ವೇಳೆ ಸೂಕ್ತ ನಾಯಕ ಸಿಗದಿದ್ದರೆ, ಆರ್‌ಸಿಬಿ ಫ್ರಾಂಚೈಸಿಯು ಮತ್ತೊಮ್ಮೆ ವಿರಾಟ್ ಕೊಹ್ಲಿ ಮನವೊಲಿಸಿ ನಾಯಕ ಪಟ್ಟ ನೀಡುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬಂದಿವೆ.

ಇದೆಲ್ಲದರ ನಡುವೆ ಆರ್‌ಸಿಬಿ (RCB) ತಂಡದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ಆಗಿದ್ದ ನ್ಯೂಜಿಲೆಂಡ್‌ನ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ (Daniel Vettori) ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದು, ವಿರಾಟ್ ಕೊಹ್ಲಿ ಮತ್ತೊಮ್ಮೆ ಅರ್‌ಸಿಬಿ ತಂಡದ ನಾಯಕನಾಗಲಾರ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಡೇವಿಡ್ ವಾರ್ನರ್ (David Warner), ಶ್ರೇಯಸ್ ಅಯ್ಯರ್ (Shreyas Iyer) ಅವರಂತಹ ನಾಯಕತ್ವದ ಗುಣಗಳನ್ನು ಹೊಂದಿರುವ ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ವಿಫಲವಾಗಿತ್ತು. ಹೀಗಾಗಿ ಆರ್‌ಸಿಬಿ ಫ್ರಾಂಚೈಸಿಯು ಈ ಬಾರಿ ಫಾಫ್ ಡು ಪ್ಲೆಸಿಸ್ ಇಲ್ಲವೇ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಗೆ ನಾಯಕತ್ವ ಪಟ್ಟ ಕಟ್ಟುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಖ್ಯಾತ ಕ್ರಿಕೆಟ್ ವೆಬ್‌ಸೈಟ್ ESPNCricinfo ಜತೆ ಮಾತನಾಡಿದ ಡೇನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಲಾರ. ಇದಂತೂ ಶತಸಿದ್ದ. ಒಮ್ಮೆ ನಾಯಕತ್ವ ತೊರೆದ ಬಳಿಕ ಮತ್ತೆ ಆತನಿಗೆ ನಾಯಕತ್ವ ನೀಡಿ ಯಶಸ್ವಿಯಾಗಿದ್ದು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಲಾಜಿಕ್ ಯಶಸ್ವಿಯಾಗಿಲ್ಲ. ಒಮ್ಮೆ ನಾಯಕ ತಮ್ಮ ಸ್ಥಾನವನ್ನು ತೊರೆದ ಎಂದ ಮೇಲೆ ಅದನ್ನು ಅಲ್ಲಿಗೆ ಬಿಟ್ಟು ಬಿಡಬೇಕು, ಪುನಃ ಅವರಿಗೆ ನಾಯಕ ಪಟ್ಟ ಕಟ್ಟುವುದು ಸರಿಯಲ್ಲವೆಂದು ವೆಟ್ಟೋರಿ ಹೇಳಿದ್ದಾರೆ. 

IPL 2022: ಮಾರ್ಚ್‌ 12ಕ್ಕೆ RCB ಹೊಸ ನಾಯಕನ ಘೋಷಣೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸಾಕಷ್ಟು ಅನುಭವಿ ನಾಯಕತ್ವ ಗುಣಗಳನ್ನು ಹೊಂದಿರುವವ ಆಟಗಾರರಿದ್ದಾರೆ. ಈ ಪೈಕಿ ಫಾಫ್ ಡು ಪ್ಲೆಸಿಸ್ (Faf du Plessis), ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಸ್ವತಃ ವಿರಾಟ್ ಕೊಹ್ಲಿ ಸೇರಿದಂತೆ ಸಾಕಷ್ಟು ಒಳ್ಳೆಯ ಆಟಗಾರರಿದ್ದಾರೆ. ಗ್ಲೆನ್‌ ಮ್ಯಾಕ್ಸ್‌ವೆಲ್ (Glenn Maxwell) ವೈಯುಕ್ತಿಕ ಕಾರಣಗಳಿಂದಾಗಿ ಆರಂಭಿಕ ಕೆಲ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ಹೀಗಾಗಿ ಮ್ಯಾಕ್ಸ್‌ವೆಲ್ ಬದಲಿಗೆ ಫಾಫ್ ಡು ಪ್ಲೆಸಿಸ್‌ಗೆ ಆರ್‌ಸಿಬಿ ನಾಯಕತ್ವ ಪಟ್ಟ ಕಟ್ಟುವ ಸಾಧ್ಯತೆಯಿದೆ. ಒಂದು ವೇಳೆ ಡು ಪ್ಲೆಸಿಸ್‌ ನಾಯಕನಾಗಿ ಮೊದಲ ಮೂರು ಪಂದ್ಯಗಳನ್ನು ಗೆಲ್ಲಿಸಿದರೆ, ಅವರೇ ಆರ್‌ಸಿಬಿ ನಾಯಕರಾಗಿ ಮುಂದುವರೆಯುವ ಸಾಧ್ಯತೆಯಿದೆ ಎಂದು ಡೇನಿಯಲ್ ವೆಟ್ಟೋರಿ ಹೇಳಿದ್ದಾರೆ.

ದೀರ್ಘಕಾಲಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾದ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ನಾಯಕ ಪಟ್ಟ ಕಟ್ಟುವುದು ಒಳಿತು ಎಂದು ಡೇನಿಯಲ್ ವೆಟ್ಟೋರಿ ಅಭಿಪ್ರಾಯಪಟ್ಟಿದ್ದಾರೆ. ಗ್ಲೆನ್‌ ಮ್ಯಾಕ್ಸ್‌ವೆಲ್ ಈಗಾಗಲೇ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಮೆಲ್ಬೊರ್ನ್‌ ಸ್ಟಾರ್ಸ್‌ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ಧಾರೆ. ಟಿ20 ಫ್ರಾಂಚೈಸಿ ಲೀಗ್‌ನಲ್ಲಿ ಅಪಾರ ಅನುಭವ ಹೊಂದಿರುವ ಮ್ಯಾಕ್ಸ್‌ವೆಲ್‌ಗೆ ನಾಯಕತ್ವ ಪಟ್ಟ ಕಟ್ಟುವುದು ಒಳಿತು ಎಂದು ವೆಟ್ಟೋರಿ ಅಭಿಪ್ರಾಯಪಟ್ಟಿದ್ದಾರೆ.

ಮ್ಯಾಕ್ಸ್‌ವೆಲ್ ದೀರ್ಘಕಾಲಿಕ ನಾಯಕರಾಗಲು ಸೂಕ್ತ. ಐಪಿಎಲ್‌ನಲ್ಲಿ ಮೂರು ವರ್ಷ ಎನ್ನುವುದು ಸಾಕಷ್ಟು ದೀರ್ಘಕಾಲಿಕ ಸಮಯ. ಕಳೆದ ವರ್ಷದಂತೆ ಈ ವರ್ಷವೂ ಮ್ಯಾಕ್ಸ್‌ವೆಲ್ ಉತ್ತಮ ಪ್ರದರ್ಶನ ತೋರಿದರೆ, ಖಂಡಿತವಾಗಿಯೂ ಮೂರು ವರ್ಷಗಳ ಕಾಲ ಅವರು ಆರ್‌ಸಿಬಿ ತಂಡದಲ್ಲೇ ಮುಂದುವರೆಯಬಲ್ಲರು. ಅವರು ಮೂರು ವರ್ಷ ನಾಯಕನಾಗಿ ಆರ್‌ಸಿಬಿ ತಂಡವನ್ನು ಮುನ್ನಡೆಸಬಲ್ಲರು ಎಂದು ಡೇನಿಯಲ್ ವೆಟ್ಟೋರಿ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2025ರಲ್ಲಿ ಪಾಕಿಸ್ತಾನಿಯರು ಗೂಗಲ್‌ ಸರ್ಚ್‌ನಲ್ಲಿ ಹುಡುಕಿದ್ದು ಟೀಂ ಇಂಡಿಯಾದ ಈ ಆಟಗಾರನನ್ನು! ಆದ್ರೆ ಅದು ಕೊಹ್ಲಿ, ರೋಹಿತ್ ಅಲ್ಲ!
IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್