* 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಸಿದ್ದತೆ ನಡೆಸುತ್ತಿರುವ ಬಿಸಿಸಿಐ
* ಮಾರ್ಚ್ 27ರಿಂದ ಮೇ 28ರ ವರೆಗೂ ಐಪಿಎಲ್ ಟೂರ್ನಿ ಜರುಗುವ ಸಾಧ್ಯತೆ
* ಐಪಿಎಲ್‌ನಲ್ಲಿ ಈ ಬಾರಿ ಒಟ್ಟು 74 ಪಂದ್ಯಗಳು ನಡೆಯಲಿವೆ
ನವದೆಹಲಿ(ಫೆ.20): ಕೋವಿಡ್ ಪರಿಸ್ಥಿತಿಯನ್ನು (COVID 19) ಗಮನದಲ್ಲಿಟ್ಟುಕೊಂಡು 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಸಂಪೂರ್ಣ ಟೂರ್ನಿಯಲ್ಲಿ ಭಾರತದ 5 ಸ್ಟೇಡಿಯಂಗಳಲ್ಲಿ ಆಯೋಜಿಸಲು ಬಿಸಿಸಿಐ (BCCI) ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯು ಮಾರ್ಚ್ 27ರಿಂದ ಮೇ 28ರ ವರೆಗೂ ನಡೆಯಲಿದ್ದು, ಮಹಾರಾಷ್ಟ್ರದ 5 ಹಾಗೂ ಅಹಮದಾಬಾದ್‌ನ ಒಂದು ಕ್ರೀಡಾಂಗಣಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಮುಂದಿನ ವಾರ ಐಪಿಎಲ್ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹೊಸದಾಗಿ ಎರಡು ತಂಡಗಳು ಸೇರ್ಪಡೆಯಾಗಿರುವುದರಿಂದ, ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿರುವ ಐಪಿಎಲ್‌ನಲ್ಲಿ ಈ ಬಾರಿ ಒಟ್ಟು 74 ಪಂದ್ಯಗಳು ನಡೆಯಲಿವೆ. 2021ನೇ ಸಾಲಿನ ಐಪಿಎಲ್ ಟೂರ್ನಿಯನ್ನು ಭಾರತದಲ್ಲಿಯೇ ಆಯೋಜಿಸಲಾಗಿತ್ತು. ಆದರೆ ಟೂರ್ನಿಯ ಮಧ್ಯ ಭಾಗದಲ್ಲಿ ಬಯೋ ಬಬಲ್‌ನೊಳಗೆ ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ಆದರೆ ಈ ಬಾರಿ ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಸಿಹಿ ಸುದ್ದಿ ನೀಡಿದ್ದು, 15ನೇ ಆವೃತ್ತಿಯ ಸಂಪೂರ್ಣ ಐಪಿಎಲ್ ಟೂರ್ನಿ ಭಾರತದಲ್ಲೇ ನಡೆಸಲು ಮುಂದಾಗಿದೆ.
ಮುಂಬೈನ ವಾಂಖೇಡೆ, ಬ್ರಾಬೊರ್ನ್, ಡಿ.ವೈ.ಪಾಟೀಲ್ ಕ್ರೀಡಾಂಗಣಗಳ ಜೊತೆ ಪುಣೆಯ ಎಂಸಿಎ ಕ್ರೀಡಾಂಗಣ ಹಾಗೂ ನವಿ ಮುಂಬೈನ ಜಿಯೋ ಕ್ರೀಡಾಂಗಣದಲ್ಲಿ ಲೀಗ್ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಫೈನಲ್ ಸೇರಿ ಪ್ಲೇ-ಆಫ್ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎನ್ನಲಾಗಿದೆ. ಐಪಿಎಲ್ ಟೂರ್ನಿಯು ಮಾರ್ಚ್ 27ರಿಂದ ಮೇ 28ರ ವರೆಗೂ ನಡೆಯಲು ಬಿಸಿಸಿಐ ತೀರ್ಮಾನಿಸಿದ್ದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಸದ್ಯದಲ್ಲಿಯೇ ಈ ಕುರಿತಂತೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಸಹ ಸ್ಪೋರ್ಟ್ಸ್‌ಸ್ಟಾರ್ ವರದಿ ಮಾಡಿದೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಫೆಬ್ರವರಿ ತಿಂಗಳಾಂತ್ಯದಲ್ಲಿ ವಿವರವಾಗಿ ಘೋಷಿಸಲಿದೆ ಎಂದು ವರದಿಯಾಗಿದೆ.
IPL Auction 2022: ಹರಾಜಿನ ಬಳಿಕ ಐಪಿಎಲ್ ತಂಡಗಳ ಬಲಾಬಲ ಹೇಗಿದೆ..?
ಇದೇ ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ 15ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಎರಡು ದಿನ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿವೆ. ಮೆಗಾ ಹರಾಜಿನಲ್ಲಿ (IPL Mega Auction) ಒಟ್ಟು 600 ಆಟಗಾರರು ಪಾಲ್ಗೊಂಡಿದ್ದರು, ಈ ಪೈಕಿ 204 ಆಟಗಾರರು ಬಿಕರಿಯಾಗಿದ್ದಾರೆ. ಹೊಸದಾಗಿ ಈ ಬಾರಿಯ ಐಪಿಎಲ್ ಟೂರ್ನಿಯುಲ್ಲಿ ಸೇರ್ಪಡೆಯಾಗಿರುವ ಲಖನೌ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಸೇರಿದಂತೆ ಒಟ್ಟು 10 ತಂಡಗಳು ಈ ಬಾರಿ ಪ್ರಶಸ್ತಿಗಾಗಿ ಕಾದಾಡಲಿವೆ.
ಏಷ್ಯನ್ ಗೇಮ್ಸ್ ಕ್ರಿಕೆಟ್: ಭಾರತ ಆಡುವುದು ಡೌಟ್
ನವದೆಹಲಿ: ಇದೇ ವರ್ಷ ಸೆಪ್ಟೆಂಬರ್ 10ರಿಂದ ಸೆಪ್ಟೆಂಬರ್ 25ರ ವರೆಗೂ ಚೀನಾದ ಹಾಂಗ್ಝೂ ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡಗಳು (Indian Cricket Teams) ಪಾಲ್ಗೊಳ್ಳುವುದು ಅನುಮಾನವೆನಿಸಿದೆ.
ಏಷ್ಯನ್ ಗೇಮ್ಸ್ ನಡೆಯುವ ಸಮಯದಲ್ಲೇ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಇತರ ಸರಣಿಗಳಲ್ಲಿ ಆಡಬೇಕಿರುವ ಕಾರಣ, ಜೊತೆಗೆ ನವೆಂಬರ್‌ನಲ್ಲಿ ಐಸಿಸಿ ಪುರುಷರ ಟಿ20 ವಿಶ್ವಕಪ್ ಇರುವ ಕಾರಣ ಚೀನಾಕ್ಕೆ ತಂಡಗಳನ್ನು ಕಳುಹಿಸುವುದು ಕಷ್ಟ ಎನ್ನುವ ಚರ್ಚೆ ಬಿಸಿಸಿಐನಲ್ಲಿ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ‍್ಯದರ್ಶಿ ಜಯ್ ಶಾ, ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.