ಜೋಸ್ ಬಟ್ಲರ್ ಇರುವವರೆಗೂ ಚೇಸಿಂಗ್ ಮಾಡುವ ಧೈರ್ಯ ಹೊಂದಿದ್ದ ರಾಜಸ್ಥಾನ ರಾಯಲ್ಸ್ ತಂಡ ಆ ಬಳಿಕ ಗುಜರಾತ್ ಟೈಟಾನ್ಸ್ ನ ಬಿಗಿ ಬೌಲಿಂಗ್ ಗೆ ಸೋಲು ಕಂಡಿತು. 37 ರನ್ ಗಳ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಮುಂಬೈ (ಏ.14): ಹಾರ್ದಿಕ್ ಪಾಂಡ್ಯ (Hardik Pandya), ಅಭಿನವ್ ಮನೋಹರ್ (Abhinav Manohar) ಹಾಗೂ ಡೇವಿಡ್ ಮಿಲ್ಲರ್ (David Miller) ಅವರ ಆಕರ್ಷಕ ಬ್ಯಾಟಿಂಗ್ ಬಳಿಕ ಬೌಲರ್ ಗಳು ತೋರಿದ ಸಂಘಟಿತ ಪ್ರಯತ್ನದಿಂದ ಗುಜರಾತ್ ಟೈಟಾನ್ಸ್ (Gujarat Titans) ತಂಡ 15ನೇ ಆವೃತ್ತಿಯ ಐಪಿಎಲ್ ನ (IPL 2022) 24ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ತಂಡವನ್ನು 37 ರನ್ ಗಳಿಂದ ಮಣಿಸಿದೆ. ಅದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಡಿವೈ ಪಾಟೀಲ್ ಸ್ಟೇಡಿಯಂನ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ (GT) ತಂಡ , ಹಾರ್ದಿಕ್ ಪಾಂಡ್ಯ (87 *ರನ್, 52 ಎಸೆತ, 8 ಬೌಂಡರಿ, 4 ಸಿಕ್ಸರ್) ಅಭಿನವ್ ಮನೋಹರ್ (43 ರನ್, 28 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್ (31* ರನ್, 14 ಎಸೆತ, 5 ಬೌಂಡರಿ, 1 ಸಿಕ್ಸರ್) ಉತ್ತಮ ಇನ್ನಿಂಗ್ಸ್ ಗಳಿಂದ 4 ವಿಕೆಟ್ ಗೆ 192 ರನ್ ಕಲೆಹಾಕಿತು.
ಪ್ರತಿಯಾಗಿ ರಾಜಸ್ಥಾನ ರಾಯಲ್ಸ್ (RR) ತಂಡ ಜೋಸ್ ಬಟ್ಲರ್ (54ರನ್, 24 ಎಸೆತ, 8 ಬೌಂಡರಿ, 3 ಸಿಕ್ಸರ್) ಸ್ಪೋಟಕ ಅರ್ಧಶತಕದ ಮೂಲಕ ಹೋರಾಟ ತೋರಿದರೂ, ಲಾಕಿ ಫರ್ಗುಸನ್ (23ಕ್ಕೆ 3) ಯಶ್ ದಯಾಳ್ 9 ವಿಕೆಟ್ ಗೆ 155 ರನ್ ಗಳಿಸಿ ಸೋಲು ಕಂಡಿತು.
ಚೇಸಿಂಗ್ ಆರಂಭಿಸಿದ ರಾಜಸ್ಥಾನ ತಂಡ ಕೆಟ್ಟ ಆರಂಭ ಪಡೆದುಕೊಂಡಿತು. ಪವರ್ ಪ್ಲೇಯ ಮೊದಲ ಆರು ಓವರ್ ಗಳಲ್ಲಿ 65 ರನ್ ಪೇರಿಸಿತಾದರೂ, ಇದಕ್ಕಾಗಿ ಪ್ರಮುಖ ಮೂರು ವಿಕೆಟ್ ಗಳನ್ನು ಕಳೆದುಕೊಂಡಿತು. ಅರಲ್ಲೂ ಈ 65 ರನ್ ಗಳ ಪೈಕಿ 54 ರನ್ ಗಳನ್ನು ಒಬ್ಬರೇ ಬಾರಿಸಿದ್ದ ಜೋಸ್ ಬಟ್ಲರ್ (Jose Buttler) 6ನೇ ಓವರ್ ನ ಕೊನೆಯ ಎಸೆತದಲ್ಲಿ ಔಟಾಗಿದ್ದು ರಾಜಸ್ಥಾನ ತಂಡದ ಹಿನ್ನಡೆಗೆ ಕಾರಣವೆನಿಸಿತು.
ತಾವು ಎದುರಿಸಿದ 24 ಎಸೆತಗಳಲ್ಲಿ 8 ಮನಮೋಹಕ ಬೌಂಡರಿಗಳು ಹಾಗೂ ಮೂರು ಅತ್ಯಾಕರ್ಷಕ ಸಿಕ್ಸರ್ ಸಿಡಿಸಿದ್ದ ಬಟ್ಲರ್, 6ನೇ ಓವರ್ ನ ಕೊನೇ ಎಸೆತದಲ್ಲಿ ಲಾಕಿ ಫರ್ಗುಸನ್ ಗೆ ಬೌಲ್ಡ್ ಆದರೆ, ಅದೇ ಓವರ್ ನ ಮೊದಲ ಎಸೆತದಲ್ಲಿ ವನ್ ಡೌನ್ ಆಟಗಾರನಾಗಿ ಬಂದಿದ್ದ ರವಿಚಂದ್ರನ್ ಅಶ್ವಿನ್ (8) 8 ಎಸೆತಗಳನ್ನು ಎದುರಿಸಿ ಡಗ್ ಔಟ್ ಸೇರಿದ್ದರು. ಕರ್ನಾಟಕದ ಯುವ ಬ್ಯಾಟ್ಸ್ ಮನ್ ದೇವದತ್ ಪಡಿಕ್ಕಲ್, ತಾವು ಎದುರಿಸಿದ ಮೊದಲ ಎಸೆತದಲ್ಲೇ ಔಟಾಗಿ ನಿರಾಸೆ ಮೂಡಿಸಿದರು. ಪಡಿಕ್ಕಲ್ ಔಟಾಗುವ ವೇಳೆ ರಾಜಸ್ಥಾನ ತಂಡ 24 ರನ್ ಬಾರಿಸಿತ್ತು.
IPL 2022 ಹಾರ್ದಿಕ್ ಪಾಂಡ್ಯ ಪವರ್ ಫುಲ್ ಬ್ಯಾಟಿಂಗ್, ರಾಜಸ್ಥಾನಕ್ಕೆ 193 ರನ್ ಟಾರ್ಗೆಟ್!
ರಾಹುಲ್ ಟೇವಾಟಿಯಾ ಎಸೆದ 7ನೇ ಓವರ್ ನ ಮೊದಲ ಎಸೆತವನ್ನು ಸಿಕ್ಸರ್ ಗಟ್ಟಿ ಗಮನಸೆಳೆದಿದ್ದ ನಾಯಕ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ಔಟಾದರು. 11 ಎಸೆತಗಳಲ್ಲಿ 11 ರನ್ ಬಾರಿಸಿದ್ದ ಸ್ಯಾಮ್ಸನ್, ಫರ್ಗುಸನ್ ಎಸೆತದಲ್ಲಿ ಮಿಡ್ ಆಫ್ ನಲ್ಲಿ ಒಂದು ರನ್ ಕದಿಯುವ ಯತ್ನದಲ್ಲಿ ಎಡವಿದರು. ಹಾರ್ದಿಕ್ ಪಾಂಡ್ಯ ಎಸೆದ ನಿಖರ ಥ್ರೋ ಗೆ ಸ್ಯಾಮ್ಸನ್ ಡಗ್ ಔಟ್ ಸೇರಿಕೊಂಡರು. ಬಟ್ಲರ್ ಇರುವಷ್ಟು ಹೊತ್ತು ಬೌಂಡರಿಗಳ ಮೂಲಕವೇ ರನ್ ಗಳಿಸಿದ್ದ ರಾಜಸ್ಥಾನ, ಸ್ಯಾಮ್ಸನ್ ಔಟಾದ ನಂತರ ಸತತ ಮೂರು ಓವರ್ ಗಳಲ್ಲಿ ಕನಿಷ್ಠ 1 ಬೌಂಡರಿ ಬಾರಿಸಲು ವಿಫಲವಾಯಿತು. ಅದರ ಜೊತೆಗೆ ರಸ್ಸಿ ವಾನ್ ಡರ್ ಡಸೆನ್ ಕೂಡ ಔಟಾಗಿದ್ದರಿಂದ 11 ಓವರ್ ಗಳ ವೇಳೆಗೆ ರಾಜಸ್ಥಾನ 5 ವಿಕೆಟ್ ಗೆ 90 ರನ್ ಬಾರಿಸಿತ್ತು.
ದೀಪಕ್ ಚಹಾರ್ 4 ತಿಂಗಳು ಕ್ರಿಕೆಟ್‌ನಿಂದ ಔಟ್..! ಟಿ20 ವಿಶ್ವಕಪ್‌ಗೂ ಅನುಮಾನ..!
ಆದರೆ, ಹೆಟ್ಮೆಯರ್ ಇರುವವರೆಗೂ ರಾಜಸ್ಥಾನ ತಂಡ ಚೇಸಿಂಗ್ ನ ಆಸೆ ಕೈಬಿಟ್ಟಿರಲಿಲ್ಲ. ಮೊಹಮದ್ ಶಮಿ ಎಸೆತದಲ್ಲಿ ಒಂದು ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದ್ದ ಹೆಟ್ಮೆಯರ್, ರಾಜಸ್ಥಾನದ ಹೋರಾಟವನ್ನು ಜೀವಂತವಾಗಿರಿಸಿದ್ದರು. ಆದರೆ, ಅದೇ ಓವರ್ ನಲ್ಲಿ ಮತ್ತೊಂದು ದೊಡ್ಡ ಶಾಟ್ ಬಾರಿಸಲು ಯತ್ನಿಸಿದ ಹೆಟ್ಮೆಯರ್ ಲಾಂಗ್ ಆನ್ ನಲ್ಲಿದ್ದ ಟೆವಾಟಿಯಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅದರೊಂದಿಗೆ ಅವರ 17 ಎಸೆತಗಳ 29 ರನ್ ಹೋರಾಟ ಕೊನೆಯಾಯಿತು. 116 ರನ್ ಗೆ 6 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ರಿಯಾನ್ ಪರಾಗ್ (18) ಹಾಗೂ ಜೇಮ್ಸ್ ನೀಶಾಮ್ (17) ಕೆಲ ಹೊತ್ತು ಆಡಿದರೂ ಅದು ಪ್ರಯೋಜನಕ್ಕೆ ಬರಲಿಲ್ಲ. 10 ರನ್ ಗಳ ಅಂತರದಲ್ಲಿ ರಿಯಾನ್ ಪರಾಗ್ ಹಾಗೂ ಜೇಮ್ಸ್ ನೀಶಾಮ್ ಔಟಾದಾಗ ರಾಜಸ್ಥಾನದ ಹೋರಾಟವೂ ಕೊನೆಗೊಂಡಿತ್ತು