
ಬೆಂಗಳೂರು(ಮಾ.28): 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಮೊದಲ ಪಂದ್ಯದಲ್ಲೇ ಪಂಜಾಬ್ ಕಿಂಗ್ಸ್ (Punjab Kings) ಎದುರು ಆಘಾತಕಾರಿ ಸೋಲು ಕಂಡಿದೆ. ಮೊದಲು ಬ್ಯಾಟ್ ಮಾಡಿ ಬೃಹತ್ ಮೊತ್ತ ಕಲೆಹಾಕಿದ ಆರ್‌ಸಿಬಿ (RCB) ತಂಡವು, ಫೀಲ್ಡಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಾಡಿದ ಕೆಲ ಯಡವಟ್ಟುಗಳಿಂದಾಗಿ ಪಂದ್ಯ ಕೈಚೆಲ್ಲಿದ್ದಾರೆ. ಆದರೆ ಇದೇ ಪಂದ್ಯದಲ್ಲಿ ಆರ್‌ಸಿಬಿ ತಂಡವು ಉಳಿದ ತಂಡಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದೆ.
ಹೌದು, ಕಳೆದ 14 ಆವೃತ್ತಿಯ ಐಪಿಎಲ್ ಟೂರ್ನಿಗಳಲ್ಲಿ ಕಪ್ ಗೆಲ್ಲಲು ವಿಫಲವಾಗುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಈ ಬಾರಿಯ ಮೆಗಾ ಹರಾಜಿನಲ್ಲಿ ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಭಾಂಧವ ಎನಿಸಿದ್ದ ಎಬಿ ಡಿವಿಲಿಯರ್ಸ್ ಐಪಿಎಲ್ ಟೂರ್ನಿಗೂ ಮುನ್ನವೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಆರ್‌ಸಿಬಿ ಪಾಲಿಗೆ ದೊಡ್ಡ ಹಿನ್ನೆಡೆಯಾಗಿ ಪರಿಣಮಿಸಿತ್ತು. ಹೀಗಾಗಿ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಸೂಕ್ತ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಲ್ಲದೇ ಪಂದ್ಯ ಕೈಚೆಲ್ಲಲಿದೆ ಎಂದು ಹಲವರು ಭಾವಿಸಿದ್ದರು. ಆರ್‌ಸಿಬಿ ಮಧ್ಯಮ ಕ್ರಮಾಂಕ ವೀಕ್ ಆಗಿದೆ. ಯಾವುದೇ ಮ್ಯಾಚ್ ಫಿನಿಶರ್‌ಗಳಿಲ್ಲ ಎಂದು ಟೀಕೆಗಳನ್ನು ಎದುರಿಸಿತ್ತು. ಆದರೆ ಈ ಎಲ್ಲಾ ಟೀಕೆಗಳಿಗೆ ಆರ್‌ಸಿಬಿ ಮೊದಲ ಪಂದ್ಯದಲ್ಲೇ ಉತ್ತರ ನೀಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದೆ.
ಈ ಮೊದಲು ಕೂಡಾ ಆರ್‌ಸಿಬಿ ತಂಡದ ಅಗ್ರ ಮೂವರು ಬ್ಯಾಟರ್‌ಗಳ ವಿಕೆಟ್ ಕಬಳಿಸಿದರೆ, ಅಲ್ಪಮೊತ್ತಕ್ಕೆ ಬೆಂಗಳೂರು ತಂಡವನ್ನು ಕಟ್ಟಿಹಾಕಬಹುದು ಎನ್ನುವಷ್ಟರ ಮಟ್ಟಿಗೆ ಲೆಕ್ಕಾಚಾರ ಹಾಕಲಾಗುತ್ತಿತ್ತು. ಆದರೆ ಪಂಜಾಬ್ ಎದರಿನ ಪಂದ್ಯದಲ್ಲಿ ಈ ಟೀಕೆಗೆ ಉತ್ತರ ನೀಡಿದ್ದಷ್ಟೇ ಅಲ್ಲದೇ ಉಳಿದ ತಂಡಗಳಿಗೂ ತಮ್ಮ ಮಧ್ಯಮ ಕ್ರಮಾಂಕ ಎಷ್ಟು ಬಲಿಷ್ಠವಾಗಿದೆ ಎನ್ನುವುದರ ಕುರಿತಂತೆ ಆರ್‌ಸಿಬಿ ಸ್ಪಷ್ಟ ಸಂದೇಶ ರವಾನಿಸಿದೆ.
IPL 2022 PBKS vs RCB ಕನ್ನಡಿಗ ಮಾಯಾಂಕ್ ನೇತೃತ್ವದ ಪಂಜಾಬ್ ಎದುರು ಆರ್ ಸಿಬಿಗೆ ಸೋಲು!
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೂತನ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ಅನೂಜ್ ರಾವತ್ 50 ರನ್‌ಗಳ ಜತೆಯಾಟವಾಡಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಫಾಫ್ ಡು ಪ್ಲೆಸಿಸ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ 118 ರನ್‌ಗಳ ಜತೆಯಾಟ ನಿಭಾಯಿಸಿದರು. ಫಾಫ್ ಡು ಪ್ಲೆಸಿಸ್ 57 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 88 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನೊಂದು ತುದಿಯಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ 41 ರನ್ ಚಚ್ಚಿದರು. ಇನ್ನು ಫಾಫ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ದಿನೇಶ್ ಕಾರ್ತಿಕ್ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ತಾವೆಷ್ಟು ಡೇಂಜರಸ್ ಬ್ಯಾಟರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ದಿನೇಶ್ ಕಾರ್ತಿಕ್ ಕೇವಲ 14 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 32 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.
ಗ್ಲೆನ್ ಮ್ಯಾಕ್ಸ್‌ವೆಲ್ ಇಲ್ಲದೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅನಾಯಾಸವಾಗಿ ಮೊದಲ ಪಂದ್ಯದಲ್ಲೇ ಇನ್ನೂರರ ಗಡಿ ದಾಟಿದೆ. ಒಂದು ವೇಳೆ ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡಾ ಸೇರಿಕೊಂಡರೇ ಬೆಂಗಳೂರು ತಂಡ ಮತ್ತಷ್ಟು ಬಲಶಾಲಿಯಾಗಲಿದೆ. ಇದರ ಜತೆಗೆ ಮುಂಬರುವ ಪಂದ್ಯಗಳಲ್ಲಿ ಆರ್‌ಸಿಬಿ ರನ್ ಹೊಳೆ ಹರಿಸುವ ಮುನ್ಸೂಚನೆ ನೀಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.