
ಬೆಂಗಳೂರು(ಮಾ.28): 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಗೆ ಹೊಸದಾಗಿ ಸೇರ್ಪಡೆಯಾಗಿರುವ ಲಖನೌ ಸೂಪರ್ ಜೈಂಟ್ಸ್ (Lucknow Super Giants) ಹಾಗೂ ಗುಜರಾತ್ ಟೈಟಾನ್ಸ್ (Gujarat Titans) ತಂಡಗಳು ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ಪಾದಾರ್ಪಣೆ ಮಾಡಲು ರೆಡಿಯಾಗಿವೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಕೆ.ಎಲ್. ರಾಹುಲ್ (KL Rahul) ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ಸವಾಲು ಸ್ವೀಕರಿಸಲು ಸಜ್ಜಾಗಿದ್ದು, ಉಭಯ ತಂಡಗಳು ಮೊದಲ ಪಂದ್ಯದಲ್ಲೇ ಗೆಲುವಿನ ಖಾತೆ ತೆರೆಯಲು ಎದುರು ನೋಡುತ್ತಿವೆ.
ಐಪಿಎಲ್ ಆಟಗಾರರ ಮೆಗಾ ಹರಾಜಿಗೂ ಮುನ್ನ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಹಾಗೂ ಶುಭ್‌ಮನ್ ಗಿಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇನ್ನು ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಕೆ.ಎಲ್. ರಾಹುಲ್, ಮಾರ್ಕಸ್ ಸ್ಟೋನಿಸ್ ಹಾಗೂ ರವಿ ಬಿಷ್ಣೋಯಿ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಇದಾದ ಬಳಿಕ ಉಭಯ ಫ್ರಾಂಚೈಸಿಗಳು ಐಪಿಎಲ್ ಮೆಗಾ ಹರಾಜಿನಲ್ಲಿ ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು.
ರಾಹುಲ್, ದಕ್ಷಿಣ ಆಫ್ರಿಕಾ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಜೊತೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕರ್ನಾಟಕದ ಮನೀಶ್ ಪಾಂಡೆಗೆ ದೀಪಕ್ ಹೂಡಾ ಕೂಡಾ ಉತ್ತಮ ಬೆಂಬಲ ನೀಡಬೇಕಿದೆ. ತಂಡದಲ್ಲಿ ಆಸ್ಪ್ರೇಲಿಯಾದ ಮಾರ್ಕಸ್ ಸ್ಟೋಯ್ನಿಸ್, ಕೃನಾಲ್ ಪಾಂಡ್ಯ ಸೇರಿದಂತೆ ಹಲವು ಆಲ್ರೌಂಡರ್‌ಗಳಿದ್ದು, ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಟಿ20 ತಜ್ಞ ಜೇಸನ್ ಹೋಲ್ಡರ್ ಬ್ಯಾಟಿಂಗ್ ಜೊತೆ ಬೌಲಿಂಗ್‌ನಲ್ಲೂ ತಂಡದ ಟ್ರಂಪ್‌ಕಾರ್ಡ್ ಎನಿಸಿದ್ದಾರೆ. ಬೌಲಿಂಗ್ ಪಡೆಯನ್ನು ಕಳೆದ ಬಾರಿ 2ನೇ ಗರಿಷ್ಠ ವಿಕೆಟ್ ಸರದಾರ ಆವೇಶ್ ಖಾನ್ ಮುನ್ನಡೆಸಲಿದ್ದು, ಮಾರ್ಕ್ ವುಡ್ ಅನುಪಸ್ಥಿತಿಯಲ್ಲಿ ಶ್ರೀಲಂಕಾದ ದುಶ್ಮುಂತಾ ಚಮೀರ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಸ್ಪಿನ್ನರ್ ರವಿ ಬಿಷ್ಣೋಯ್ ಸ್ಪಿನ್ ಮೋಡಿ ಮಾಡಲು ಕಾಯುತ್ತಿದ್ದಾರೆ.
GT vs LSG: ಐಪಿಎಲ್‌ಗಿಂದು ಲಖನೌ-ಗುಜರಾತ್ ತಂಡಗಳ ಎಂಟ್ರಿ..!
ಇನ್ನು ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭ್‌ಮನ್ ಗಿಲ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಎನಿಸಿದ್ದು, ಅವರ ಜೊತೆ ಆಫ್ಘಾನಿಸ್ತಾನದ ರಹ್ಮಾನುಲ್ಲಾ ಗುರ್ಬಜ್ ಆರಂಭಿಕನಾಗಿ ಕಣಕ್ಕಿಳಿಯಬಹುದು. ಕರ್ನಾಟಕದ ಬ್ಯಾಟರ್ ಅಭಿನವ್ ಮನೋಹರ್ ಐಪಿಎಲ್ ಪಾದಾರ್ಪಣೆ ನಿರೀಕ್ಷೆಯಲ್ಲಿದ್ದು, ವಿಜಯ್ ಶಂಕರ್, ಡೇವಿಡ್ ಮಿಲ್ಲರ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ರಾಹುಲ್ ತೆವಾಟಿಯಾ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಹೊಣೆ ನಿಭಾಯಿಸಬೇಕಿದೆ. ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ಅನುಭವಿ ವೇಗಿಗಳಾದ ಮೊಹಮದ್ ಶಮಿ, ಲಾಕಿ ಫಗ್ರ್ಯೂಸನ್ ಜೊತೆ ಸಾಯಿ ಕಿಶೋರ್ ಕೂಡಾ ಸ್ಥಾನ ಗಿಟ್ಟಿಸುವ ತವಕದಲ್ಲಿದ್ದಾರೆ. ರಶೀದ್ ಖಾನ್ ತಮ್ಮ ಸ್ಪಿನ್ ಅಸ್ತ್ರದ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ.
ಪಿಚ್ ರಿಪೋರ್ಟ್: ಮುಂಬೈನ ವಾಂಖೆಡೆ ಮೈದಾನವು ಈಗಾಗಲೇ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಮೊದಲ ಪಂದ್ಯದಲ್ಲೇ ವಾಂಖೆಡೆ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ ಎನ್ನುವುದು ಸಾಬೀತಾಗಿದೆ. ಪಿಚ್‌ಗೆ ಹೊಂದಿಕೊಂಡು ಬ್ಯಾಟ್ ಬೀಸಿದರೆ ಮಾತ್ರ ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆಹಾಕಬಹುದಾಗಿದೆ. ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಆಯ್ದುಕೊಳ್ಳುವುದು ಉತ್ತಮ ಆಯ್ಕೆಯಾಗಬಲ್ಲದು
ಇಂದಿನ ಪಂದ್ಯವನ್ನು ಗೆಲ್ಲೋರು ಯಾರು?: ಐಪಿಎಲ್‌ನ ಎರಡು ಹೊಸ ತಂಡಗಳು ಮೇಲ್ನೋಟಕ್ಕೆ ಸಮಬಲದಂತೆ ಕಂಡುಬಂದಿದ್ದರೂ ಸಹಾ, ನಾಯಕತ್ವದ ಅಪಾರ ಅನುಭವ ಹೊಂದಿರುವ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದೆ. ಒಂದು ವೇಳೆ ಲಖನೌ ತಂಡಕ್ಕೆ 160 ರನ್‌ಗಳ ಗುರಿ ಸಿಕ್ಕಿದರೂ ಕೂಡಾ ಚೇಸ್ ಮಾಡಬಲ್ಲ ಬ್ಯಾಟಿಂಗ್ ಲೈನ್‌ಅಪ್ ರಾಹುಲ್ ಪಡೆಗಿದೆ.
ಸಂಭಾವ್ಯ ತಂಡ
ಲಖನೌ: ಕೆ.ಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೋಯ್ನಿಸ್, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್, ದುಶ್ಮಂತಾ ಚಮೀರ , ರವಿ ಬಿಷ್ಣೋಯ್, ಆವೇಶ್ ಖಾನ್
ಗುಜರಾತ್: ಶುಭ್‌ಮನ್ ಗಿಲ್, ರೆಹಮನುಲ್ಲಾ ಗುರ್ಬಜ್, ಅಭಿನವ್ ಮನೋಹರ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಹಾರ್ದಿಕ್ ಪಾಂಡ್ಯ, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫಗ್ರ್ಯೂಸನ್, ಸಾಯಿ ಕಿಶೋರ್
ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.