
ಬೆಂಗಳೂರು(ಏ.19): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ (Faf du Plessis) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 16 ರನ್‌ಗಳ ಗೆಲುವು ದಾಖಲಿಸುವ ಮೂಲಕ ನಾಲ್ಕನೇ ಗೆಲುವು ತನ್ನದಾಗಿಸಿಕೊಂಡಿದೆ. ಇದೀಗ ಅದೇ ಲಯವನ್ನು ಆರ್‌ಸಿಬಿ ಮುಂದುವರೆಸಿಕೊಂಡು ಹೋಗಲು ಸಜ್ಜಾಗಿದ್ದು, ಮಂಗಳವಾರ ನವಿ ಮುಂಬೈನ ಡಾ. ಡಿವೈ ಪಾಟೀಲ್ ಅಕಾಡೆಮಿಯ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಲಖನೌ ಸೂಪರ್ ಜೈಂಟ್ಸ್ (Lucknow Super Giants) ತಂಡವನ್ನು ಎದುರಿಸಲು ಸಜ್ಜಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಎದುರಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಹಾಗೂ ಜೋಶ್ ಹೇಜಲ್‌ವುಡ್ (Josh Hazlewood) ಅಮೋಘ ಪ್ರದರ್ಶನದ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆರ್‌ಸಿಬಿ ಅಗ್ರಕ್ರಮಾಂಕದಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿ ಬರದೇ ಇರುವುದು ತಂಡದ ತಲೆನೋವು ಹೆಚ್ಚಾಗುವಂತೆ ಮಾಡಿದೆ. ಇದೀಗ ಲಖನೌ ಸೂಪರ್ ಜೈಂಟ್ಸ್ ವಿರುದ್ದದ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ.
1. ಫಾಫ್ ಡು ಪ್ಲೆಸಿಸ್: ಆರ್‌ಸಿಬಿ ನಾಯಕ ಫಾಫ್ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಇದಾದ ಬಳಿಕ ಫಾಫ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದರು. ಇದೀಗ ಲಖನೌ ಎದುರು ನಾಯಕನಾಟವಾಡಲು ಸಜ್ಜಾಗಿದ್ದು, ತಂಡ ಡು ಪ್ಲೆಸಿಸ್ ಅವರಿಂದ ದೊಡ್ಡ ಇನಿಂಗ್ಸ್ ನಿರೀಕ್ಷಿಸುತ್ತಿದೆ.
2. ಅನೂಜ್ ರಾವತ್: ಭರವಸೆಯ ಯುವ ಆಟಗಾರ ಅನೂಜ್ ರಾವತ್, ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಚೊಚ್ಚಲ ಐಪಿಎಲ್ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದರು. ಆದರೆ ಅದೇ ಫಾರ್ಮ್ ಮುಂದುವರೆಸಿಕೊಂಡು ಹೋಗಲು ವಿಫಲವಾಗಿದ್ದರು. ಹೀಗಿದ್ದೂ ಇಂದಿನ ಪಂದ್ಯಕ್ಕೆ ಅನೂಜ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು.
3. ವಿರಾಟ್ ಕೊಹ್ಲಿ: ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರನ್ ಬರ ಅನುಭವಿಸುತ್ತಿದ್ದಾರೆ. ಆಡಿದ ಆರು ಪಂದ್ಯಗಳ ಪೈಕಿ ಕೇವಲ 2 ಬಾರಿ ಮಾತ್ರ ಕೊಹ್ಲಿ 40+ ರನ್ ಬಾರಿಸಿದ್ದಾರೆ. ಕೊಹ್ಲಿ ಕೊಂಚ ಅಬ್ಬರಿಸಿದರೂ ಸಾಕು, ಲಖನೌ ಮೇಲೆ ಆರ್‌ಸಿಬಿ ಹಿಡಿತ ಗಟ್ಟಿಯಾಗಲಿದೆ.
IPL 2022: ಲಖನೌ ಸೂಪರ್ ಜೈಂಟ್ಸ್ ಸವಾಲು ಗೆಲ್ಲುತ್ತಾ ಆರ್‌ಸಿಬಿ..?
4. ಗ್ಲೆನ್ ಮ್ಯಾಕ್ಸ್‌ವೆಲ್: ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಮ್ಯಾಕ್ಸ್‌ವೆಲ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದರು. ಆರ್‌ಸಿಬಿ ಪರ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಸರೆಯಾಗುತ್ತಿರುವ ಮ್ಯಾಕ್ಸಿ, ತಮ್ಮ ಫಾರ್ಮ್ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.
5. ಶಾಬಾಜ್ ಅಹಮ್ಮದ್: ಈ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಶಾಬಾಜ್ ಅಹಮ್ಮದ್ ಉತ್ತಮ ಆಲ್ರೌಂಡರ್ ಆಗಿ ಗಮನ ಸೆಳೆಯುತ್ತಿದ್ದಾರೆ. ಈ ಬಾರಿ ಶಾಬಾಜ್ ಬೌಲಿಂಗ್‌ಗಿಂತ ಬ್ಯಾಟಿಂಗ್‌ನಲ್ಲಿ ಮಿಂಚಿದ್ದೇ ಹೆಚ್ಚು. ಆರ್‌ಸಿಬಿ ಪರ ದಿನೇಶ್ ಕಾರ್ತಿಕ್ ಜತೆಗೂಡಿ ಮ್ಯಾಚ್ ಫಿನಿಶರ್ ಆಗಿಯೂ ಸೈ ಎನಿಸಿಕೊಂಡಿದ್ದಾರೆ.
6. ಸುಯಶ್ ಪ್ರಭುದೇಸಾಯಿ: ಆರ್‌ಸಿಬಿ ತಂಡದ ಯುವ ಪ್ರತಿಭಾನ್ವಿಯ ಬ್ಯಾಟರ್ ಸುಯಾಶ್, ಅನಾಯಾಸವಾಗಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸುವ ಕ್ಷಮತೆ ಹೊಂದಿದ್ದಾರೆ. ಒತ್ತಡದ ಪರಿಸ್ಥಿತಿಯಲ್ಲೂ ತಾಳ್ಮೆಯಿಂದಿದ್ದು ಸ್ಪೋಟಕವಾಗಿ ಬ್ಯಾಟ್ ಬೀಸುವ ಕಲೆಯನ್ನು ಪ್ರಭುದೇಸಾಯಿ ಕರಗತ ಮಾಡಿಕೊಂಡಿದ್ದಾರೆ.
7. ದಿನೇಶ್ ಕಾರ್ತಿಕ್: ಆರ್‌ಸಿಬಿ ತಂಡದ ಆಪತ್ಭಾಂದವ ಎನಿಸಿರುವ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ಆಡಿದ 6 ಪಂದ್ಯಗಳಲ್ಲಿ 190+ ಸ್ಟ್ರೈಕ್‌ರೇಟ್‌ನಲ್ಲಿ 197 ರನ್ ಬಾರಿಸಿದ್ದಾರೆ. ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುವ ಡಿಕೆ, ಕಳೆದ ಪಂದ್ಯದಲ್ಲಿ ಅಜೇಯ 66 ರನ್ ಗಳಿಸಿದ್ದರು.
8. ವನಿಂದು ಹಸರಂಗ: ಲಂಕಾದ ಸ್ಪಿನ್ನರ್ ವನಿಂದು ಹಸರಂಗ ಆರ್‌ಸಿಬಿ ಬೌಲಿಂಗ್ ಜೀವಾಳ ಎನಿಸಿದ್ದಾರೆ. ಇಲ್ಲಿಯವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಹಸರಂಗ 11 ವಿಕೆಟ್ ಕಬಳಿಸಿದ್ದಾರೆ.
9. ಹರ್ಷಲ್ ಪಟೇಲ್: ಕಳೆದ ಆವೃತ್ತಿಯಂತೆ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಹರ್ಷಲ್ ಪಟೇಲ್, ಆರ್‌ಸಿಬಿ ತಂಡದ ಪರ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಡೆತ್ ಓವರ್‌ಗಳಲ್ಲಿ ವೇಗದಲ್ಲಿ ಏರಿಳಿತ ಮಾಡುವ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ತಬ್ಬಿಬ್ಬು ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
10. ಮೊಹಮ್ಮದ್ ಸಿರಾಜ್: ಕಳೆದ ಕೆಲ ಪಂದ್ಯಗಳಲ್ಲಿ ದುಬಾರಿ ಎನಿಸಿದ್ದ ವೇಗಿ ಸಿರಾಜ್, ಪಂದ್ಯ ಸಾಗುತ್ತಿದ್ದಂತೆಯೇ ತಮ್ಮ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಪಂದ್ಯದಲ್ಲಿ ಮಿಂಚಿದ್ದ ಸಿರಾಜ್, ತಮ್ಮ ಮಾರಕ ದಾಳಿ ಸಂಘಟಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
11. ಜೋಶ್ ಹೇಜಲ್‌ವುಡ್: ಆಸ್ಟ್ರೇಲಿಯಾದ ಮಾರಕ ವೇಗಿ ಹೇಜಲ್‌ವುಡ್ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 3 ವಿಕೆಟ್ ಕಬಳಿಸಿ ಮಿಂಚಿದ್ದರು. ತಮ್ಮ ಲಯವನ್ನು ಮುಂದುವರೆಸಿಕೊಂಡು ಹೋಗಲು ಹೇಜಲ್‌ವುಡ್ ಎದುರು ನೋಡುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.