IPL 2022: RCB ಕಾಲೆಳೆಯಲು ಹೋಗಿ ತಾನೇ ಟ್ರೋಲ್ ಆದ ರಾಜಸ್ಥಾನ ರಾಯಲ್ಸ್..!

By Naveen KodaseFirst Published Apr 6, 2022, 1:30 PM IST
Highlights

* ರಾಜಸ್ಥಾನ ರಾಯಲ್ಸ್ ಎದುರು ಭರ್ಜರಿ ಗೆಲುವು ದಾಖಲಿಸಿದ ಆರ್‌ಸಿಬಿ

* ಟೂರ್ನಿಯಲ್ಲಿ ಮೊದಲ ಸೋಲು ಕಂಡ ರಾಜಸ್ಥಾನ ರಾಯಲ್ಸ್

* ಆರ್‌ಸಿಬಿ ಟ್ರೋಲ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ರಾಯಲ್ಸ್‌

ಬೆಂಗಳೂರು(ಏ.06): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಹೈವೋಲ್ಟೇಜ್‌ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸುವಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ಯಶಸ್ವಿಯಾಗಿದೆ. ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅಹಮ್ಮದ್ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಬೆಂಗಳೂರು ತಂಡಕ್ಕೆ ಭರ್ಜರಿ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. 

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್‌ ತಂಡವು, ಆರ್‌ಸಿಬಿ ತಂಡಕ್ಕೆ ಗೆಲ್ಲಲು 170 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂದು ಹಂತದಲ್ಲಿ 12.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 87 ರನ್‌ಗಳಿಸಿ ಸೋಲಿನತ್ತ ಮುಖ ಮಾಡಿತ್ತು. ಈ ವೇಳೆ ಸುಮ್ಮನಿರದ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಆರ್‌ಸಿಬಿ ತಂಡಕ್ಕೆ 48 ಎಸೆತಗಳಲ್ಲಿ 84 ರನ್ ಬೇಕಿದೆ. ಹೇಗನಿಸುತ್ತಿದೆ ನಿಮಗೆ ಈಗ ಎಂದು ಟ್ವೀಟ್‌ ಮಾಡುವ ಮೂಲಕ ಕಾಲೆಳೆದಿತ್ತು. ಬಹುತೇಕ ಎಲ್ಲರೂ ಈ ಪಂದ್ಯವು ಆರ್‌ಸಿಬಿ ಕೈಜಾರಿ ರಾಯಲ್ಸ್ ತೆಕ್ಕೆಗೆ ಸೇರಲಿದೆ ಎಂದೇ ಭಾವಿಸಿದ್ದರು.

Latest Videos

ಆದರೆ ಆರನೇ ವಿಕೆಟ್‌ಗೆ ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅಹಮ್ಮದ್‌ ಭರ್ಜರಿ ಜತೆಯಾಟ ನಡೆಸುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರಾಜಸ್ಥಾನ ರಾಯಲ್ಸ್ ಕಾಲೆಳೆದ ಟ್ವೀಟ್‌ಗೆ ಪಂದ್ಯ ಮುಕ್ತಾಯದ ಬಳಿಕ ಪ್ರತಿಕ್ರಿಯೆ ನೀಡಿದ ಆರ್‌ಸಿಬಿ, ನಾವು ಚೆನ್ನಾಗಿಯೇ ಆಡಿದೆವು. ಧನ್ಯವಾದಗಳು ಎನ್ನುವ ಮೂಲಕ ರಾಯಲ್ಸ್ ಪಡೆಯನ್ನು ಟ್ರೋಲ್ ಮಾಡಿದೆ. 

We’re doing great! Thank you. 🤩 https://t.co/3fgQMsVZFX

— Royal Challengers Bangalore (@RCBTweets)

ಡಿಕೆ, ಶಾಬಾಜ್‌ ಅಬ್ಬರಕ್ಕೆ ರಾಯಲ್ಸ್‌ ಠುಸ್‌!

ದಿನೇಶ್‌ ಕಾರ್ತಿಕ್‌ ಹಾಗೂ ಶಾಬಾಜ್‌ ಅಹ್ಮದ್‌ ಹೋರಾಟದ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಲೆಂಜ​ರ್‍ಸ್ ಬೆಂಗಳೂರು 4 ವಿಕೆಟ್‌ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಸೋತಿದ್ದ ಆರ್‌ಸಿಬಿ ಬಳಿಕ ಸತತ 2ನೇ ಗೆಲುವು ಸಾಧಿಸಿದರೆ, ರಾಜಸ್ಥಾನ 3 ಪಂದ್ಯಗಳಲ್ಲಿ ಮೊದಲ ಸೋಲು ಕಂಡಿತು. ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ ಜೋಸ್‌ ಬಟ್ಲರ್‌ ಹಾಗೂ ಶಿಮ್ರೋನ್‌ ಹೆಟ್ಮೇಯರ್‌ ಹೋರಾಟದ ನೆರವಿನಿಂದ 20 ಓವರಲ್ಲಿ 3 ವಿಕೆಟ್‌ಗೆ 169 ರನ್‌ ಕಲೆ ಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆರ್‌ಸಿಬಿ 19.1 ಓವರಲ್ಲಿ ಜಯ ಸಾಧಿಸಿತು.

ನಾಯಕ ಫಾಫ್‌ ಡು ಪ್ಲೆಸಿ ಹಾಗೂ ಅನುಜ್‌ ರಾವತ್‌ ಮೊದಲ ವಿಕೆಟ್‌ಗೆ 55 ರನ್‌ ಜೊತೆಯಾಟವಾಡಿದರು. ಡು ಪ್ಲೆಸಿ 29 ರನ್‌ಗೆ ವಿಕೆಟ್‌ ಒಪ್ಪಿಸಿದರೆ, ರಾವತ್‌ 26 ರನ್‌ ಗಳಿಸಿದರು. ಆದರೆ ಇವರಿಬ್ಬರ ನಿರ್ಗಮನದ ಬಳಿಕ ತಂಡ ದಿಢೀರ್‌ ಕುಸಿತ ಕಂಡಿತು. 5 ರನ್‌ ಗಳಿಸಿದ್ದ ವಿರಾಟ್‌ ಕೊಹ್ಲಿಯನ್ನು ಯಜುವೇಂದ್ರ ಚಹಲ್‌ ರನ್‌ ಮೂಲಕ ಪೆವಿಲಿಯನ್‌ಗೆ ಅಟ್ಟಿದರು. ಡೇವಿಡ್‌ ವಿಲ್ಲಿ ಶೂನ್ಯ ಸುತ್ತಿದರೆ, ಶೆರ್ಫಾನೆ ರುಥರ್‌ಫೋರ್ಡ್‌ 5 ರನ್‌ ಗಳಿಸಿ ನಿರ್ಗಮಿಸಿದರು. ವಿಕೆಟ್‌ ನಷ್ಟವಿಲ್ಲದೇ 55 ರನ್‌ ಗಳಿಸಿದ್ದ ತಂಡ 62 ರನ್‌ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ಒಂದು ಹಂತದಲ್ಲಿ ತಂಡ ಸೋಲಿನತ್ತ ಮುಖ ಮಾಡಿದ್ದರೂ ಕಾರ್ತಿಕ್‌ ಹಾಗೂ ಶಾಬಾಜ್‌ ತಂಡವನ್ನು ಮೇಲೆತ್ತಿದರು. ಇವರಿಬ್ಬರು 6ನೇ ವಿಕೆಟ್‌ಗೆ 67 ರನ್‌ ಜೊತೆಯಾಟವಾಡಿ ತಂಡದ ಗೆಲುವಿನತ್ತ ಕೊಂಡೊಯ್ದರು. 26 ಎಸೆತದಲ್ಲಿ 45 ರನ್‌ ಸಿಡಿಸಿದ್ದ ಶಾಬಾಜ್‌ ಬೌಲ್ಟ್‌ ಎಸೆತದಲ್ಲಿ ಬೌಲ್ಡ್‌ ಆಗಿ ಪೆವಿಲಿಯನ್‌ಗೆ ಮರಳಿದರು. 23 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ ನೆರವಿನಿಂದ ಅಜೇಯ 44 ರನ್‌ ಗಳಿಸಿದ ಕಾರ್ತಿಕ್‌ ಮತ್ತೊಮ್ಮೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹರ್ಷಲ್‌ ಪಟೇಲ್‌(4 ಎಸೆತದಲ್ಲಿ 9) ಸಿಕ್ಸರ್‌ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.

IPL 2022 'ಕೊನೇ ಪ್ಲೇಸ್ ಅಲ್ಲಿ ಇರೋಕೆ ಲಾಯಕ್ಕು ನೀವು..' ಗೇಲಿ ಮಾಡಲು ಹೋಗಿ ತಾವೇ ತಮಾಷೆಯಾದ ರಾಜಸ್ಥಾನ ರಾಯಲ್ಸ್!

ಜೋಸ್ ಬಟ್ಲರ್‌ ಮಿಂಚು

ಯಶಸ್ವಿ ಜೈಸ್ವಾಲ್‌(06) ಅವರನ್ನು ಕಡಿಮೆ ಮೊತ್ತಕ್ಕೆ ಕಳೆದುಕೊಂಡ ತಂಡಕ್ಕೆ ದೇವದತ್ತ ಪಡಿಕ್ಕಲ್‌ ಹಾಗೂ ಜೋಸ್‌ ಬಟ್ಲರ್‌ ಚೇತರಿಕೆ ನೀಡಿದರು. 2 ವಿಕೆಟ್‌ಗೆ ಈ ಜೋಡಿ 70 ರನ್‌ ಜೊತೆಯಾಟವಾಡಿತು. ಪಡಿಕ್ಕಲ್‌ 37 ರನ್‌ಗೆ ಔಟಾದರೆ, ನಾಯಕ ಸಂಜು ಸ್ಯಾಮ್ಸನ್‌ ಕೇವಲ 8 ರನ್‌ಗೆ ವಿಕೆಟ್‌ ಒಪ್ಪಿಸಿದರು. ಆದರೆ ಮುರಿಯದ 4ನೇ ವಿಕೆಟ್‌ಗೆ ಬಟ್ಲರ್‌ ಹಾಗೂ ಶಿಮ್ರೋನ್‌ ಹೆಟ್ಮೇಯರ್‌ 83 ರನ್‌ ಜೊತೆಯಾಟವಾಡಿ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದಲು ನೆರವಾದರು. ಹೆಟ್ಮೇಯರ್‌ ಔಟಾಗದೆ 42 ರನ್‌ ಗಳಿಸಿದರೆ, ಕಳೆದ ಪಂದ್ಯದ ಹೀರೋ ಜೋಸ್‌ ಬಟ್ಲರ್‌ 47 ಎಸೆತಗಳಲ್ಲಿ 70 ರನ್‌ ಸಿಡಿಸಿದರು.


 

click me!