
ಮುಂಬೈ (ಏ.5): ಚೇಸಿಂಗ್ ನ ನಡುವೆ ಕೇವಲ 7 ರನ್ ಗಳ ಅಂತರದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸೋಲುವ ಭೀತಿಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ ರಾಯಲ್ 4 ವಿಕೆಟ್ ಗೆಲುವು ದಾಖಲಿಸಿದೆ. ಇದಕ್ಕೆ ಕಾರಣವಾಗಿದ್ದು ಸೂಪರ್ ಆಲ್ರೌಂಡರ್ ಶಾಬಾಜ್ ಅಹ್ಮದ್ (Shahbaz Ahmed) ಹಾಗೂ ಐಸ್ ಕೂಲ್ ದಿನೇಶ್ ಕಾರ್ತಿಕ್ (Dinesh Karthik).
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ, ಕಳೆದ ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸಿ ಮಿಂಚಿದ್ದ ಜೋಸ್ ಬಟ್ಲರ್ 70 ರನ್ ಗಳ (47 ಎಸೆತ, 6 ಬೌಂಡರಿ) ಅರ್ಧಶತಕ ಹಾಗೂ ಶಿಮ್ರೋನ್ ಹೆಟ್ಮೆಯರ್ 42 ರನ್ (31 ಎಸೆತ, 4 ಬೌಂಡರಿ, 2 ಸಿಕ್ಸರ್) ಸಾಹಸದಿಂದ 3 ವಿಕೆಟ್ ಗೆ 169 ರನ್ ಪೇರಿಸಿತ್ತು. ಪ್ರತಿಯಾಗಿ ಆರ್ ಸಿಬಿ 19.1 ಓವರ್ ಗಳಲ್ಲಿ 6 ವಿಕೆಟ್ ಗೆ 173 ರನ್ ಬಾರಿಸಿ ಗೆಲುವು ಕಂಡಿತು.
ಆರಂಭದಲ್ಲಿಯೇ ಅಪಾಯಕ್ಕೆ ಒಳಗಾಗಿದ್ದ ಆರ್ ಸಿಬಿ ತಂಡಕ್ಕೆ ಶಾಬಾಜ್ ಅಹ್ಮದ್ (45 ರನ್, 26 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ದಿನೇಶ್ ಕಾರ್ತಿಕ್ (44*ರನ್, 23 ಎಸೆತ, 7 ಬೌಂಡರಿ, 1 ಸಿಕ್ಸರ್) 6ನೇ ವಿಕೆಟ್ ಗೆ ಕೇವಲ 33 ಎಸೆತಗಳಲ್ಲಿ 67 ರನ್ ಗಳ ಜೊತೆಯಾಟವಾಡಿ ತಂಡದ ಅಭೂತಪೂರ್ವ ಗೆಲುವಿಗೆ ಕಾರಣರಾದರು. ಇದು ಲೀಗ್ ನಲ್ಲಿ ಆರ್ ಸಿಬಿ ತಂಡಕ್ಕೆ 2ನೇ ಗೆಲುವಾಗಿದ್ದರೆ, ಅಗ್ರಸ್ಥಾನಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮೊದಲ ಸೋಲು ಎನಿಸಿದೆ.
ಚೇಸಿಂಗ್ ಆರಂಭಿಸಿದ ಆರ್ ಸಿಬಿ ತಂಡಕ್ಕೆ ಮೊದಲ ವಿಕೆಟ್ ಗೆ ನಾಯಕ ಫಾಫ್ ಡು ಪ್ಲೆಸಿಸ್ (29ರನ್, 20 ಎಸೆತ, 5 ಬೌಂಡರಿ) ಹಾಗೂ ಅನುಜ್ ರಾವತ್ (26 ರನ್, 25 ಎಸೆತ, 4 ಬೌಂಡರಿ) ಅರ್ಧಶತಕದ ಜೊತೆಯಾಟವಾಡಿದ್ದರು. ಟ್ರೆಂಟ್ ಬೌಲ್ಟ್ ಹಾಗೂ ಪ್ರಸಿದ್ಧ ಕೃಷ್ಣ ಅವರ ಬೌಲಿಂಗ್ ಅನ್ನು ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿ 42 ಎಸೆತಗಳಲ್ಲಿ 55 ರನ್ ಜೊತೆಯಾಟವಾಡುವ ಮೂಲಕ ಚೇಸಿಂಗ್ ಗೆ ವೇದಿಕೆ ನಿರ್ಮಿಸಿತ್ತು. ಪವರ್ ಪ್ಲೇ ಮುಗಿದ ಬಳಿಕ, ಚಾಹಲ್ ಎಸೆತದಲ್ಲಿ ಫಾಫ್ ಡು ಪ್ಲೆಸಿಸ್, ಬೌಲ್ಟ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದಾಗ ಆರ್ ಸಿಬಿ ಮೊದಲ ಆಘಾತ ಕಂಡಿತು.
ಆದರೆ, ಈ ಮೊತ್ತಕ್ಕೆ 6 ರನ್ ಸೇರಿಸುವ ವೇಳೆಗೆ ಅಜುಜ್ ರಾವತ್, ಸೈನಿ ಎಸೆತದಲ್ಲಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಗೆ ವಿಕೆಟ್ ನೀಡಿದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ (5) ಮತ್ತೊಮ್ಮೆ ವೈಫಲ್ಯ ಎದುರಿಸಿದರು. 6 ಎಸೆತ ಎದುರಿಸಿದ ವಿರಾಟ್ ಕೊಹ್ಲಿ, ಯಜುವೇಂದ್ರ ಚಾಹಲ್ ಮಾಡಿದ ಆಕರ್ಷಕ ರನೌಟ್ ಗೆ ಡಗ್ ಔಟ್ ಸೇರಿದರು. ಬಡ್ತಿ ಪಡೆದು ಬಂದು ಆಡಿದ ಡೇವಿಡ್ ವಿಲ್ಲಿ ಕೇವಲ 2 ಎಸೆತಗಳಿಗೆ ತಮ್ಮ ಆಟ ಮುಗಿಸಿದಾಗ ಆರ್ ಸಿಬಿ 62 ರನ್ ಗೆ 4 ವಿಕೆಟ್ ಕಳೆದುಕೊಂಡು ಆಘಾತ ಕಂಡಿತು.
IPL 2022 ಜೋಸ್ ಬಟ್ಲರ್ ಬೊಂಬಾಟ್ ಬ್ಯಾಟಿಂಗ್, ಸಿಕ್ಸರ್ ಗಳ ಮೂಲಕವೇ ಅಬ್ಬರಿಸಿದ ರಾಜಸ್ಥಾನ ಬ್ಯಾಟ್ಸ್ ಮನ್ !
ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 55 ರನ್ ಬಾರಿಸಿದ್ದ ಆರ್ ಸಿಬಿ ಈ ಮೊತ್ತಕ್ಕೆ 7 ರನ್ ಸೇರಿಸುವ ವೇಳೆಗೆ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಸಂಕಷ್ಟದ ಸಮಯದಲ್ಲಿ ಜೊತೆಯಾದ ಶೆರ್ಫಾನೆ ರುದರ್ಫೋರ್ಡ್ ಹಾಗೂ ಶಾಬಾಜ್ ಅಹ್ಮದ್ ಅಮೂಲ್ಉ 25 ರನ್ ಕೂಡಿಸಿ ತಂಡದ ಹೋರಾಟವನ್ನು ಜೀವಂತವಾಗಿಟ್ಟಿದ್ದರು. ಇದರಲ್ಲಿ ಪ್ರಮುಖ ರನ್ ಗಳನ್ನು ಶಾಬಾಜ್ ಅಹ್ಮದ್ ಅವರೇ ಬಾರಿಸಿದ್ದರು.
ಸಿಎಸ್ಕೆ ನಾಯಕ ಯಾರು..ಬರೀ ಟಾಸ್ಗೆ ಮಾತ್ರ ಸೀಮಿತವಾದ್ರಾ ಜಡೇಜಾ?
ರುದರ್ಫೋರ್ಡ್ ನಿರ್ಗಮನದ ಬೆನ್ನಲ್ಲಿಯೇ ಮೈದಾನಕ್ಕಿಳಿದ ದಿನೇಶ್ ಕಾರ್ತಿಕ್ ತಾವು ಎದುರಿಸಿದ 11 ಎಸೆತಗಳಲ್ಲೇ 28 ರನ್ ಚಚ್ಚಿದ್ದರು. ಅಶ್ವಿನ್ ಅವರಿಗೆ 2 ಸಿಕ್ಸರ್ ಹಾಗೂ 2 ಬೌಂಡರಿಗಳನ್ನು ಸಿಡಿಸಿ ಅಬ್ಬರಿಸಿದ್ದರು. ಸೈನಿಗೂ ಇದೇ ರೀತಿಯ ಆಟವಾಡುವ ಮೂಲಕ ಆರ್ ಸಿಬಿಯನ್ನು ಮತ್ತೆ ಗೆಲುವಿನ ಹೋರಾಟಕ್ಕೆ ತಂದು ನಿಲ್ಲಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.