ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ಹೊಂದಿರುವ ಕೆಎಲ್ ರಾಹುಲ್, ಮುಂಬೈ ವಿರುದ್ಧ ಹಾಲಿ ಋತುವಿನಲ್ಲಿ 2ನೇ ಶತಕ ಸಿಡಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು.
ಮುಂಬೈ (ಏ.24): ಮುಂಬೈ ಇಂಡಿಯನ್ಸ್ ವಿರುದ್ಧ ತಮ್ಮ ಭರ್ಜರಿ ಫಾರ್ಮ್ ಮುಂದುವರಿಸಿರುವ ಕೆಎಲ್ ರಾಹುಲ್ 15ನೇ ಆವೃತ್ತಿಯ ಐಪಿಎಲ್ ನಲ್ಲಿ ತಮ್ಮ 2ನೇ ಸ್ಪೋಟಕ ಶತಕ ಸಿಡಿಸಿದ್ದಾರೆ. ಬಲಿಷ್ಠ ಮುಂಬೈ ಇಂಡಿಯನ್ಸ್ ಬೌಲಿಂಗ್ ದಾಳಿಯನ್ನು ಏಕಾಂಗಿಯಾಗಿ ದಂಡಿಸಿದ ಕೆಎಲ್ ರಾಹುಲ್ ಸಾಹಸದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸವಾಲಿನ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಇಡೀ ಇನ್ನಿಂಗ್ಸ್ ನಲ್ಲಿ ಮಿಂಚಿದ್ದು ಕೆಎಲ್ ರಾಹುಲ್ ಅವರ ಅದ್ಭುತ ಇನ್ನಿಂಗ್ಸ್. ಈ ವರ್ಷ ವಾಂಖೆಡೆ ಮೈದಾನದಲ್ಲಿ ಆಡಿದ ಪಂದ್ಯದಲ್ಲಿ ಎರಡು ಬಾರಿ ಗೋಲ್ಡನ್ ಡಕ್ ಕುಖ್ಯಾತಿ ಎದುರಿಸಿದ್ದ ಕೆಎಲ್ ರಾಹುಲ್ (103*ರನ್, 62 ಎಸೆತ, 12 ಬೌಂಡರಿ, 4 ಸಿಕ್ಸರ್) ಐಪಿಎಲ್ ನಲ್ಲಿ ಬಾರಿಸಿದ ನಾಲ್ಕನೇ ಶತಕದ ನೆರವಿನಿಂದ 6 ವಿಕೆಟ್ ಗೆ 168 ರನ್ ಪೇರಿಸಿದೆ.
ಬ್ಯಾಟಿಂಗ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಇಡೀ ಇನ್ನಿಂಗ್ಸ್ ಪೂರ್ತಿ ಕೆಎಲ್ ರಾಹುಲ್ ಆಧರಿಸಿದರು. ಕ್ವಿಂಟನ್ ಡಿ ಕಾಕ್ ಹಾಗೂ ಕೆಎಲ್ ರಾಹುಲ್ ಮೊದಲ ವಿಕೆಟ್ ಗೆ 27 ರನ್ ಜೊತೆಯಾಟವಾಡಿ ಬೇರ್ಪಟ್ಟರು. ಕೆಎಲ್ ರಾಹುಲ್ ಗೆ ಎಸೆದ ಓವರ್ ನಲ್ಲಿ ಮುಂಬೈನ ಆಫ್ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಸತತ ನಾಲ್ಕು ಎಸೆತಗಳನ್ನು ಡಾಟ್ ಮಾಡಿದ್ದರು. ನಾಲ್ಕನೇ ಎಸೆತದಲ್ಲಿ ರಾಹುಲ್ ಚೆಂಡನ್ನು ಬೌಂಡರಿಗಟ್ಟಿ ರನ್ ಖಾತೆ ತೆರೆದಿದ್ದರು.
2ನೇ ಓವರ್ ನಲ್ಲಿ ಶೋಕಿನ್ ಕೇವಲ 4 ರನ್ ನೀಡಿದ ಬಳಿಕ, ನಾಲ್ಕನೇ ಓವರ್ ನಲ್ಲಿ ರೋಹಿತ್ ಶರ್ಮ, ಜಸ್ ಪ್ರೀತ್ ಬುಮ್ರಾರನ್ನು ಕಣಕ್ಕಿಳಿಸಿದರು. ಇದಕ್ಕೂ ಮುನ್ನ ಡೇನಿಯಲ್ ಸ್ಯಾಮ್ಸ್ ಎಸೆದ ಮೂರನೇ ಓವರ್ ನಲ್ಲಿ ರಾಹುಲ್ ಸತತ ಎರಡು ಬೌಂಡರಿ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದ್ದರು. ಬುಮ್ರಾ ಎಸೆದ ಓವರ್ ನಲ್ಲಿ ಆಕರ್ಷಕ ಸಿಕ್ಸರ್ ಸಿಡಿಸಿದ ಕ್ವಿಂಟನ್ ಡಿ ಕಾಕ್, ಲೋ ಫುಲ್ ಟಾಸ್ ಆಗಿ ಬಂದಮರು ಎಸೆತವನ್ನು ಕವರ್ಸ್ ನತ್ತ ಬಾರಿಸಿದ್ದರು. ರೋಹಿತ್ ಇದನ್ನು ಕ್ಯಾಚ್ ಪಡೆದುಕೊಳ್ಳುವ ಮೂಲಕ ಮೊದಲ ವಿಕೆಟ್ ಜೊತೆಯಾಟಕ್ಕೆ ತೆರೆಬಿದ್ದಿತು.
ಡಿ ಕಾಕ್ ನಿರ್ಗಮನದ ಬಳಿಕ ನಾಯಕ ಕೆಎಲ್ ರಾಹುಲ್ ಗೆ ಜೊತೆಯಾದ ಮನೀಷ್ ಪಾಂಡೆ (22 ರನ್, 22 ಎಸೆತ, 1 ಸಿಕ್ಸರ್) 2ನೇ ವಿಕೆಟ್ ಗೆ ಈ ಜೋಡಿ ಅಮೂಲ್ಯ 63 ರನ್ ಗಳ ಜೊತೆಯಾಟವಾಡಿತು. ಇದರಲ್ಲಿ ಪ್ರಮುಖ ಕಾಣಿಕೆ ನೀಡಿದ ಕೆಎಲ್ ರಾಹುಲ್ ಮುಂಬೈ ಇಂಡಿಯನ್ಸ್ ನ ಎಲ್ಲಾ ಬೌಲರ್ ಗಳನ್ನು ದಂಡಿಸಿದರು. ಎಚ್ಚರಿಕೆಯ ಬ್ಯಾಟಿಂಗ್ ಮೂಲಕ ರನ್ ಬಾರಿಸುತ್ತಿದ್ದ ಈ ಜೋಡಿಯನ್ನು 12ನೇ ಓವರ್ ನಲ್ಲಿ ಪೊಲ್ಲಾರ್ಡ್, ಮನೀಷ್ ಪಾಂಡೆಯನ್ನು ಔಟ್ ಮಾಡುವ ಮೂಲಕ ಬೇರ್ಪಡಿಸಿದರು.
IPL 2022 ರಾಹುಲ್ ಶತಕಕ್ಕೆ ಒಲಿದ ಗೆಲುವು, ಮುಂಬೈಗೆ ಸತತ 6ನೇ ಸೋಲು!
ತಂಡದ ಮೊತ್ತ 100ರ ಗಡಿ ದಾಟುವ ತನಕ ಕೆಎಲ್ ರಾಹುಲ್ ಗೆ ಜೊತೆಯಾದ ಮಾರ್ಕಸ್ ಸ್ಟೋಯಿನಿಸ್ ಶೂನ್ಯಕ್ಕೆ ಔಟಾದರು. ಇದರ ಬೆನ್ನಲ್ಲಿಯೇ ಕೃನಾಲ್ ಪಾಂಡ್ಯ ಕೂಡ ಪೊಲ್ಲಾರ್ಡ್ ಗೆ ಔಟಾದ ವೇಳೆಗೆ ಲಕ್ನೋ ತಂಡ 4 ವಿಕೆಟ್ ಗೆ 103 ರನ್ ಬಾರಿಸಿತ್ತು. 9 ಎಸೆತಗಳಲ್ಲಿ 10ರನ್ ಬಾರಿಸಿದ ದೀಪಕ್ ಹೂಡಾ ತಂಡದ ಮೊತ್ತ 120ರ ಗಡಿ ದಾಟುವ ತನಕ ಕ್ರೀಸ್ ನಲ್ಲಿದ್ದರು. 16ನೇ ಓವರ್ ನಲ್ಲಿ ಮೆರಿಡಿತ್, ದೀಪಕ್ ಹೂಡಾರನ್ನು ಔಟ್ ಮಾಡಿದ ಬಳಿಕ ತಂಡದ ಮೊತ್ತವನ್ನು ಏರಿಸುವ ಜವಾಬ್ದಾರಿ ಕೆಎಲ್ ರಾಹುಲ್ ಮೇಲಿತ್ತು. ಅದನ್ನು ಅವರು ಯಶಸ್ವಿಯಾಗಿ ನಿಭಾಯಿಸಿದರು.
ಹಸಮಣೆ ಏರಲಿದ್ದಾರೆ ಕರ್ನಾಟಕದ ನಟಿ- ಟೀಂ ಇಂಡಿಯಾ ಕ್ರಿಕೆಟಿಗ, ವಿಂಟರ್‌ನಲ್ಲಿ ವಿವಾಹ.?
ಐಪಿಎಲ್ ನಲ್ಲಿ 4ನೇ ಶತಕ ಸಿಡಿಸಿದ ಕೆಎಲ್ ರಾಹುಲ್
ಐಪಿಎಲ್ ನಲ್ಲಿ ಕೆಎಲ್ ರಾಹುಲ್ ಬಾರಿಸಿದ ನಾಲ್ಕನೇ ಶತಕ ಇದಾಗಿದೆ. ಆ ಮೂಲಕ ಗರಿಷ್ಠ ಶತಕ ಬಾರಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದರು. ಕ್ರಿಸ್ ಗೇಲ್ 141 ಇನ್ನಿಂಗ್ಸ್ ಗಳಲ್ಲಿ 6 ಶತಕ ಸಿಡಿಸಿದರೆ, ವಿರಾಟ್ ಕೊಹ್ಲಿ 207 ಇನ್ನಿಂಗ್ಸ್ ಗಳಿಂದ 5 ಶತಕ ಬಾರಿಸಿದ್ದಾರೆ, ಜೋಸ್ ಬಟ್ಲರ್ ಕೇವಲ 71 ಇನ್ನಿಂಗ್ಸ್ ಗಳಲ್ಲಿ 4 ಶತಕ ಸಿಡಿಸಿದ್ದರೆ, ಕೆಎಲ್ ರಾಹುಲ್ 93 ಇನ್ನಿಂಗ್ಸ್ ಗಳಿಂದ 4 ಶತನ ಬಾರಿಸಿದ್ದಾರೆ.