
ಮುಂಬೈ (ಏ.7): ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್ ಮನ್ ಕ್ವಿಂಟನ್ ಡಿ ಕಾಕ್ (80ರನ್, 52 ಎಸೆತ, 9 ಬೌಂಡರಿ, 2 ಸಿಕ್ಸರ್) ಐಪಿಎಲ್ ನಲ್ಲಿ ಬಾರಿಸಿದ 18ನೇ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಸೋಲಿನಿಂದಿಗೆ ಹಾಲಿ ಅವೃತ್ತಿಯ ಅಭಿಯಾನ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) 6 ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಗೆಲುವು ಕಂಡಿತು.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ (KL Rahul) ಬೌಲಿಂಗ್ ಆಯ್ದುಕೊಂಡರು. ಪೃಥ್ವಿ ಷಾ (61ರನ್, 34 ಎಸೆತ, 9 ಬೌಂಡರಿ, 2 ಸಿಕ್ಸರ್) ಸ್ಪೋಟಕ ಅರ್ಧಶತಕದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸಲು ಪರದಾಟ ನಡೆಸಿದ್ದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡ 3 ವಿಕೆಟ್ ಗೆ 149 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ಪ್ರತಿಯಾಗಿ ಲಕ್ನೋ ಸೂಪರ್ ಜೈಂಟ್ಸ್ (LSG)ಮೊದಲ ವಿಕೆಟ್ ಗೆ ಕೆಎಲ್ ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ ಹಾಕಿಕೊಟ್ಟ 73 ರನ್ ಗಳ ಜೊತೆಯಾಟದ ನೆರವಿನಿಂದ 19.4 ಓವರ್ ಗಳಲ್ಲಿ 4 ವಿಕೆಟ್ ಗೆ 155 ರನ್ ಕಲೆಹಾಕಿ ಗೆಲುವು ಕಂಡಿತು. ಕಳೆದ ಮೂರು ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಮಣಿಸಿದಂತಾಗಿದೆ.
ಚೇಸಿಂಗ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ವೇಗವಾಗಿ ಮೊತ್ತ ಬೆನ್ನಟ್ಟಬೇಕು ಎನ್ನುವ ಇರಾದೆ ತೋರಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಅನ್ನು ಬಹಳ ಎಚ್ಚರಿಕೆಯಿಂದಲೇ ಎದುರಿಸಿದ ಕೆಎಲ್ ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ (Quinton de Kock) ಜೋಡಿ ಮೊದಲ ವಿಕೆಟ್ ಗೆ 58 ಎಸೆತಗಳಲ್ಲಿ73 ರನ್ ಜೊತೆಯಾಟವಾಡಿತು. ಕೆಎಲ್ ರಾಹುಲ್ 24 ರನ್ (25 ಎಸೆತ, 1 ಬೌಂಡರಿ, 1 ಸಿಕ್ಸರ್) ಎಚ್ಚರಿಕೆಯ ಬ್ಯಾಟಿಂಗ್ ಮಾಡಿದರೆ, ಜೊತೆಯಾಟದ ಬಹುಪಾಲು ರನ್ ಗಳನ್ನು ಕ್ವಿಂಟನ್ ಡಿ ಕಾಕ್ ಬಾರಿಸಿದರು.
ಮೊದಲ ನಾಲ್ಕು ಓವರ್ ಗಳ ಆಟದಲ್ಲಿ ಕೇವಲ 2 ಬೌಂಡರಿ ಬಾರಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕರಿಗೆ ರಿಸ್ಕ್ ತೆಗೆದುಕೊಳ್ಳುವ ಯಾವ ಅಗತ್ಯವೂ ಕಂಡಿರಲಿಲ್ಲ. ಇಬ್ಬನಿಯ ಕಾರಣದಿಂದಾಗಿ ಚೆಂಡನ್ನು ಹಿಡಿಯಲು ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಗಳು ಪರದಾಟ ನಡೆಸಿದರು. ಸೊಂಟದ ಶಸ್ತ್ರಚಿಕಿತ್ಸೆಯ ಬಳಿಕ ಹಾಲಿ ಐಪಿಎಲ್ ನಲ್ಲಿ ಮೊದಲ ಪಂದ್ಯ ಆಡಿದ ದಕ್ಷಿಣ ಆಫ್ರಿಕಾದ ಸ್ಟಾರ್ ವೇಗಿ ಆನ್ರಿಚ್ ನೋಕಿಯೆ, ತಮ್ಮ ಮೊದಲ ಓವರ್ ನಲ್ಲಿಯೇ ಧಾರಳವಾಗಿ ರನ್ ಬಿಟ್ಟುಕೊಟ್ಟರು. ನೋಕಿಯೆ ಎಸೆತದಲ್ಲಿ ಅವರ ದಕ್ಷಿಣ ಅಫ್ರಿಕಾ ಸಹ ಆಟಗಾರ ಕ್ವಿಂಟರ್ ಡಿ ಕಾಕ್ 19 ರನ್ ಸಿಡಿಸಿದರು. ಇದು ಐಪಿಎಲ್ ನಲ್ಲಿ ನೋಕಿಯೆ ಅವರ ಜಂಟಿ ಗರಿಷ್ಠ ದುಬಾರಿ ಓವರ್ ಎನಿಸಿದೆ.
IPL 2022 ಲಕ್ನೋಗೆ ಸವಾಲಿನ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್!
10ನೇ ಓವರ್ ನಲ್ಲಿ ದಾಳಿಗೆ ಬಂದ ಕುಲದೀಪ್ ಯಾದವ್ ಗೆ ಒಂದೆರಡು ಬೌಂಡರಿ ಬಾರಿಸುವ ಯತ್ನದಲ್ಲಿದ್ದ ಕೆಎಲ್ ರಾಹುಲ್, ಲಾಂಗ್ ಆಫ್ ನಲ್ಲಿ ಪೃಥ್ವಿ ಷಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಚೆಂಡು ಹಿಡಿಯಲು ಹರಸಾಹಸ ಪಡುತ್ತಿದ್ದ ನಡುವೆಯೂ ಕುಲದೀಪ್ ಯಾದವ್ ತಂಡಕ್ಕೆ ಮೊದಲ ಯಶಸ್ಸು ನೀಡಿದ್ದರು. ರಾಹುಲ್ ನಿರ್ಗಮನದ ಬಳಿಕ ಕ್ರಿಸ್ ಗೆ ಇಳಿದ ಎವಿನ್ ಲೆವಿಸ್, ಬ್ಯಾಟಿಂಗ್ ಮಾಡಲು ಕಷ್ಟಪಟ್ಟರು. ಸ್ಪಿನ್ ಎಸೆತ ಹಾಗೂ ಪಿಚ್ ನ ನಿಧಾನಗತಿಯ ವರ್ತನೆಯಿಂದಾಗಿ ಕೆಟ್ಟ ಶಾಟ್ ಬಾರಿಸಿದ ಲೆವಿಸ್, 13 ಎಸೆತಗಳಲ್ಲಿ 5 ರನ್ ಬಾರಿಸಿ ಲಲಿತ್ ಯಾದವ್ ಗೆ ವಿಕೆಟ್ ನೀಡಿದರು. ಗೆಲುವಿಗೆ 28 ರನ್ ಗಳು ಬೇಕಿದ್ದಾಗ ಡಿ ಕಾಕ್ ವಿಕೆಟ್ ಒಪ್ಪಿಸಿದರೆ, ಆ ಬಳಿಕ, ಶಾರ್ದೂಲ್ ಠಾಕೂರ್ ಹಾಗೂ ಮುಸ್ತಾಫಿಜುರ್ ಕಡಿವಾಣ ಹಾಕುವ ಪ್ರಯತ್ನ ಮಾಡಿದರು. ಆದರೆ, ಇದಕ್ಕೆ ದೀಪಕ್ ಹೂಡಾ ಹಾಗೂ ಕೃನಾಲ್ ಪಾಂಡ್ಯ ಅವಕಾಶ ನೀಡಲಿಲ್ಲ.
Indo Pak ties ರಾಜಕೀಯ ಬದಿಗಿಟ್ಟು ಅಭಿಮಾನಿಗಳೇಕೆ ಇಂಡೋ ಪಾಕ್ ಪಂದ್ಯ ಆನಂದಿಸಬಾರದು? ಪಿಸಿಬಿ ಪ್ರಶ್ನೆ
ಎರಡು ಬೀಮರ್ ಎಸೆದ ಆನ್ರಿಚ್: ತಮ್ಮ 2.2 ಓವರ್ ಗಳ ಕೋಟಾದಲ್ಲಿ 36 ರನ್ ಗಳನ್ನು ನೀಡಿ ದುಬಾರಿಯಾಗಿದ್ದು ಮಾತ್ರವಲ್ಲದೆ, ಆನ್ರಿಚ್ ನೋಕಿಯೇ, ಸತತ ಎರಡು ಬೀಮರ್ ಗಳನ್ನು ಎಸೆದ ಕಾರಣ ಅವರನ್ನು ಬೌಲಿಂಗ್ ನಿಂದ ನಿಷೇಧಿಸಲಾಯಿತು. ಮೊದಲ ಬೀಮರ್ ಎಸೆತವನ್ನು ಡಿ ಕಾಕ್ ಸಿಕ್ಸರ್ ಗೆ ಅಟ್ಟಿದರೆ, 2ನೇ ಬೀಮರ್ ಎಸೆತವನ್ನು ಹೂಡಾ ಕವರ್ಸ್ ನತ್ತ ಬಾರಿಸಿದರು. ಇದರ ಬೆನ್ನಲ್ಲೇ ಅಂಪೈರ್ ಗಳು ಆನ್ರಿಚ್ ಗೆ ಬೌಲಿಂಗ್ ನೀಡಲು ನಿರಾಕರಿಸಿದ್ದರಿಂದ ಕುಲದೀಪ್ ಯಾದವ್ ಉಳಿದ ನಾಲ್ಕು ಎಸೆತಗಳನ್ನು ಹಾಕಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.