IPL 2022 ಲಕ್ನೋಗೆ ಸವಾಲಿನ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್!

By Suvarna NewsFirst Published Apr 7, 2022, 9:16 PM IST
Highlights

ಆರಂಭದಲ್ಲಿ ಪೃಥ್ವಿ ಷಾ ಸ್ಫೋಟಕ ಬ್ಯಾಟಿಂಗ್ ಬಳಿಕ, ಹಿನ್ನಡೆ ಕಾಣುವ ಭೀತಿ ಎದುರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 4ನೇ ವಿಕೆಟ್ ಗೆ ರಿಷಭ್ ಪಂತ್ ಹಾಗೂ ಸರ್ಫ್ರಾಜ್ ಖಾನ್ ಸೂಪರ್ ಇನ್ನಿಂಗ್ಸ್ ಆಡುವ ಮೂಲಕ ಆಧರಿಸಿದರು.

ಮುಂಬೈ (ಏ.7): ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಆಸರೆಯಾದ ನಾಯಕ ರಿಷಭ್ ಪಂತ್ (Rishabh Pant) ಹಾಗೂ ಸರ್ಫ್ರಾಜ್ ಖಾನ್ (Sarfaraz Khan) ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಲಕ್ನೋ ಸೂಪರ್ ಜೈಂಟ್ಸ್ (LSG)ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದಾರೆ. 

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ (DY Patil Sports Academy) ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ನಾಯಕ ಕೆಎಲ್ ರಾಹುಲ್ (KL Rahul), ಬೌಲಿಂಗ್ ನಿರ್ಧಾರ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ, ಪೃಥ್ವಿ ಷಾ (Prithvi Shaw) ಸ್ಫೋಟಕ ಅರ್ಧ ಶತಕ, ಕೊನೆಯಲ್ಲಿ ನಾಯಕ ರಿಷಭ್ ಪಂತ್ (39*ರನ್, 36 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ಸರ್ಫ್ರಾಜ್ ಖಾನ್ (36*ರನ್, 28 ಎಸೆತ, 3 ಬೌಂಡರಿ) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 3 ವಿಕೆಟ್ ಗೆ 149  ರನ್ ಕಲೆಹಾಕಿದೆ.

11ನೇ ಓವರ್ ವೇಳೆಗೆ 3 ವಿಕೆಟ್ ಗೆ 74 ರನ್ ಬಾರಿಸಿ ಅಲ್ಪ ಮೊತ್ತದ ಹಾದಿಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 4ನೇ ವಿಕೆಟ್ ಗೆ ರಿಷಭ್ ಪಂತ್ ಹಾಗೂ  ಸರ್ಫ್ರಾಜ್ ಖಾನ್ 57 ಎಸೆತಗಳಲ್ಲಿ 75 ರನ್ ಜೊತೆಯಾಟವಾಡುವ ಮೂಲಕ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು.

ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಹಾಲಿ ಐಪಿಎಲ್ ನಲ್ಲಿ ಮೊದಲ ಬಾರಿಗೆ ಕಣಕ್ಕಿಳಿದ ಡೇವಿಡ್ ವಾರ್ನರ್ ಗೆ ಜೊತೆಯಾಗಿ ಪೃಥ್ವಿ ಷಾ ಆಡಲು ಮೈದಾನಕ್ಕೆ ಇಳಿದರು. ಮೊದಲ ಮೂರು ಓವರ್ ಗಳ ಆಟದಲ್ಲಿ ವಾರ್ನರ್ 6 ಎಸೆತಗಳಲ್ಲಿ ಕೇವಲ 3 ರನ್ ಬಾರಿಸಿದರೆ, ಪೃಥ್ವಿ ಷಾ ಮಾತ್ರ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಲು ಇಳಿದರು. ತಾವು ಎದುರಿಸಿದ ಮೊದಲ 12 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 1 ಸಿಕ್ಸರ್ ಇದ್ದ  22 ರನ್ ಬಾರಿಸಿ ಮಿಂಚಿದ್ದರು.

ಲಕ್ನೋ ತಂಡದ ಎಲ್ಲಾ ಬೌಲಿಂಗ್ ತಂತ್ರವನ್ನು ವಿಫಲ ಮಾಡಿದ ಪೃಥ್ವಿ ಷಾ, ಪವರ್ ಪ್ಲೇ ಅಂತ್ಯದ ವೇಳೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊತ್ತವನ್ನು ವಿಕೆಟ್ ನಷ್ಟವಿಲ್ಲದೆ 52 ರನ್ ಗೆ ಏರಿಸಿದ್ದರು. ಇದರಲ್ಲಿ ವಾರ್ನರ್ ಪಾಲು ಕೇವಲ 3 ರನ್ ಆಗಿದ್ದವು. ತಮ್ಮ ಥ್ರಿಲ್ಲಿಂಗ್ ಇನ್ನಿಂಗ್ಸ್ ನಲ್ಲಿ 61 ರನ್ (34 ಎಸೆತ, 9 ಬೌಂಡರಿ, 2 ಸಿಕ್ಸರ್) ಸಿಡಿಸಿದ್ದ ಪೃಥ್ವಿ ಷಾ, ಕೆ.ಗೌತಮ್ ಅವರ ಆಕರ್ಷಕ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಗೌತಮ್ ಎಸೆದ 8ನೇ ಓವರ್ ನಲ್ಲಿ ಒಂದು ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದ್ದ ಪೃಥ್ವಿ ಷಾ 3ನೇ ಎಸೆತದಲ್ಲಿ, ಡಿ ಕಾಕ್ ಗೆ ಕ್ಯಾಚ್ ನೀಡಿ ಹೊರನಡೆದರು. ಪೃಥ್ವಿ ಷಾ ಔಟಾದ ಬೆನ್ನಲ್ಲಿಯೇ ರೋವ್ ಮನ್ ಪಾವೆಲ್ ಗೆ ಬಡ್ತಿ ನೀಡಿ ಡೆಲ್ಲಿ ಮೈದಾನಕ್ಕೆ ಇಳಿಸಿತು.

ಪೃಥ್ವಿ ಷಾ ನಿರ್ಗಮನದ ಬಳಿಕ ಡೇವಿಡ್ ವಾರ್ನರ್ ಅವರಿಂದ ಇದೇ ರೀತಿಯ ಆಟದ ನಿರೀಕ್ಷೆಯಲ್ಲಿದ್ದ ಡೆಲ್ಲಿ ಅಭಿಮಾನಿಗಳಿಗೆ ನಿರಾಸೆಯಾಯಿತು. ಎಡಗೈ ಬ್ಯಾಟ್ಸ್ ಮನ್ ಗಳಿಗೆ ಆಕರ್ಷಕವಾಗಿ ದಾಳಿ ನಡೆಸುವ ರವಿ ಬಿಷ್ಣೋಯಿ ಎಸೆತದಲ್ಲಿ ಥರ್ಡ್ ಮ್ಯಾನ್ ನತ್ತ ಚೆಂಡನ್ನು ತಳ್ಳಿದರು. ಆಯುಷ್ ಬದೋನಿ ಕ್ಯಾಚ್ ಪಡೆದುಕೊಳ್ಳುವ ಮೂಲಕ ಡೇವಿಡ್ ವಾರ್ನರ್ ಆಟ ಕೊನೆಯಾಯಿತು.

Anushka to Aditi: ಸ್ಟಾರ್ ಕ್ರಿಕೆಟರ್ಸ್‌ನ ಹಾಟ್‌ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್‌

ಮೊದಲ 10 ಓವರ್ ಗಳ ಆಟದಲ್ಲಿ ಡೆಲ್ಲಿ ಬಾರಿಡಿದ 71 ರನ್ ಗಳ ಪೈಕಿ 61 ರನ್ ಗಳನ್ನು ಪೃಥ್ವಿ ಷಾ ಕೇವಲ 34 ಎಸೆತಗಳಲ್ಲಿ ಬಾರಿಸಿದ್ದರೆ, ಉಳಿದ ಬ್ಯಾಟ್ಸ್ ಮನ್ ಗಳು ಕೇವಲ 10 ರನ್ ಬಾರಿಸಿದ್ದರು. 10 ಎಸೆತಗಳಲ್ಲಿ ರನ್ ಗಳಿಸಲು ಪರದಾಟ ನಡೆಸಿದ್ದ ರೋವ್ ಮನ್ ಪಾವೆಲ್, ಬಿಷ್ಣೋಯಿ ಎಸೆದ  ಸಖತ್ ಗೂಗ್ಲಿಗೆ ಬೌಲ್ಡ್ ಆಗಿ ನಿರ್ಗಮಿಸಿದರು.

IPL 2022 ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಟಾಸ್ ಗೆದ್ದ ಲಖನೌ, ತಂಡದಲ್ಲಿ ಒಂದು ಬದಲಾವಣೆ!

ಲಖನೌ ತಂಡದಲ್ಲಿ ಪಂದ್ಯಕ್ಕಾಗಿ ಒಂದು ಬದಲಾವಣೆ ಮಾಡಲಾಗಿತ್ತು. ಕನ್ನಡಿಗ ಮನೀಶ್ ಪಾಂಡೆ ಬದಲು ಮತ್ತೊರ್ವ ಕನ್ನಡಿಗ ಕೆ ಗೌತಮ್‌ಗೆ ಸ್ಥಾನ ನೀಡಲಾಗಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ಟಿಮ್ ಸೈಫರ್ಟ್ ಬದಲು ಡೇವಿಡ್ ವಾರ್ನರ್ ತಂಡ ಸೇರಿಕೊಂಡಿದ್ದಾರೆ. ಖಲೀಲ್ ಅಹಮ್ಮದ್ ಬದಲು ಆನ್ರಿಚ್ ನೋಕಿಯೇ ತಂಡ ಸೇರಿಕೊಂಡರೆ, ಮಂದೀಪ್ ಸಿಂಗ್ ಬದಲು ಸರ್ಫರಾಜ್ ತಂಡ ಸೇರಿಕೊಂಡಿದ್ದಾರೆ. 

click me!