IPL 2022: ಪ್ಯಾಟ್ ಕಮಿನ್ಸ್ ಆರ್ಭಟಕ್ಕೆ ಮುಂಬೈ ಇಂಡಿಯನ್ಸ್ ಧೂಳೀಪಟ...!

Published : Apr 07, 2022, 07:30 AM IST
IPL 2022: ಪ್ಯಾಟ್ ಕಮಿನ್ಸ್ ಆರ್ಭಟಕ್ಕೆ ಮುಂಬೈ ಇಂಡಿಯನ್ಸ್ ಧೂಳೀಪಟ...!

ಸಾರಾಂಶ

* ಮುಂಬೈ ಇಂಡಿಯನ್ಸ್ ಎದುರು ಭರ್ಜರಿ ಗೆಲುವು ದಾಖಲಿಸಿದ ಕೋಲ್ಕತಾ ನೈಟ್ ರೈಡರ್ಸ್‌ * ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಗಮನ ಸೆಳೆದ ಕಮಿನ್ಸ್ * ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್  

ಪುಣೆ(ಏ.07): ಐಪಿಎಲ್‌ನಲ್ಲಿ ಯಾವುದೂ ಅಸಾಧ್ಯವಲ್ಲ. ಪಂದ್ಯ ಮುಗಿಯುವವರೆಗೂ ಏನನ್ನೂ ನಿರ್ಧರಿಸಲು ಸಾಧ್ಯವಿಲ್ಲ. ಬುಧವಾರ ಅಪರೂಪದ ಪಂದ್ಯಕ್ಕೆ ಐಪಿಎಲ್‌ 15ನೇ (IPL 2022) ಆವೃತ್ತಿ ಸಾಕ್ಷಿಯಾಯಿತು. ಮೊದಲು ಕೀರನ್‌ ಪೊಲ್ಲಾರ್ಡ್‌ (Kieron Pollard) 5 ಎಸೆತದಲ್ಲಿ 22 ರನ್‌ ಚಚ್ಚಿ 150 ರನ್‌ ಸಹ ದಾಟುವುದು ಕಷ್ಟ ಎನಿಸಿದ್ದ ಮುಂಬೈ 161 ರನ್‌ ಕಲೆಹಾಕುವಂತೆ ಮಾಡಿದರೆ, ಗೆಲ್ಲಲು ಕೊನೆ 30 ಎಸೆತಗಳಲ್ಲಿ 35 ರನ್‌ ಬೇಕಿದ್ದಾಗ ಪ್ಯಾಟ್‌ ಕಮಿನ್ಸ್‌ (Pat Cummins) ಒಂದೇ ಓವರಲ್ಲಿ 35 ರನ್‌ ಚಚ್ಚಿ ಕೆಕೆಆರ್‌ ಅನ್ನು ಇನ್ನೂ 4 ಓವರ್‌ ಬಾಕಿ ಇರುವಂತೆಯೇ ಜಯದ ದಡ ಸೇರಿಸಿದರು.

ಪಾಕಿಸ್ತಾನ ಪ್ರವಾಸ ಮುಗಿಸಿ ಭಾರತಕ್ಕೆ ಬಂದಿಳಿದ ಕಮಿನ್ಸ್‌ ಕ್ವಾರಂಟೈನ್‌ ಪೂರೈಸಿ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದರು. ಅವರ ಪವಾಡ ರೀತಿ ಇನ್ನಿಂಗ್ಸ್‌ ನಿಂದ 5 ವಿಕೆಟ್‌ ಜಯ ಸಾಧಿಸಿದ ಕೆಕೆಆರ್‌(KKR), ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು. ಇನ್ನೂ ಗೆಲುವಿನ ಖಾತೆಯನ್ನೇ ತೆರೆಯದ ಮುಂಬೈ 9ನೇ ಸ್ಥಾನದಲ್ಲೇ ಉಳಿದಿದೆ.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೆಕೆಆರ್‌, ನಿರೀಕ್ಷಿತ ಆರಂಭ ಪಡೆಯಲಿಲ್ಲ. ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್ (Shreyas Iyer), ಬಿಲ್ಲಿಂಗ್ಸ್‌  ವೈಫಲ್ಯ ಅನುಭವಿಸಿದರು. 14ನೇ ಓವರಲ್ಲಿ ಆ್ಯಂಡ್ರೆ ರಸೆಲ್‌ ಔಟಾಗಿ ಪೆವಿಲಿಯನ್‌ಗೆ ವಾಪಸಾದರು. ಗೆಲುವಿನ ಹಾದಿ ಸುಗಮಗೊಂಡಿತು ಎನ್ನುವ ಲೆಕ್ಕಾಚಾರದಲ್ಲಿದ್ದ ಮುಂಬೈಗೆ ಕೆಲವೇ ನಿಮಿಷಗಳಲ್ಲಿ ಸೋಲು ಬಂದಪ್ಪಳಿಸಿತು. ಒಂದು ಬದಿಯಲ್ಲಿ ವೆಂಕಟೇಶ್‌ ಅಯ್ಯರ್‌(50) ನೆಲೆಯೂರಿದರೆ, ಕ್ರೀಸ್‌ಗಿಳಿಯುತ್ತಿದ್ದಂತೆ ಸ್ಫೋಟಿಸಿದ ಕಮಿನ್ಸ್‌, ಡೇನಿಯಲ್‌ ಸ್ಯಾಮ್ಸ್‌ ಎಸೆದ 16ನೇ ಓವರಲ್ಲಿ 4 ಸಿಕ್ಸ್‌, 2 ಬೌಂಡರಿ ಸಿಡಿಸಿದರು. 5ನೇ ಎಸೆತದಲ್ಲಿ ನೋಬಾಲ್‌ ಜೊತೆಗೆ 2 ರನ್‌ ಸಹ ದೊರೆಯಿತು. ಕಮಿನ್ಸ್‌ 15 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ 56 ರನ್‌ ಸಿಡಿಸಿ ಐಪಿಎಲ್‌ನಲ್ಲಿ ಅವಿಸ್ಮರಣೀಯ ಇನ್ನಿಂಗ್ಸ್‌ವೊಂದನ್ನು ದಾಖಲಿಸಿದರು.

ಪೊಲ್ಲಾರ್ಡ್‌ ಆಸರೆ: ಮೊದಲು ಬ್ಯಾಟ್‌ ಮಾಡಿದ ಮುಂಬೈ 11 ಓವರ್‌ ಮುಕ್ತಾಯಕ್ಕೆ 3 ವಿಕೆಟ್‌ಗೆ 55 ರನ್‌ ಗಳಿಸಿತು. ಉಮೇಶ್‌ ಯಾದವ್‌ ಮತ್ತೊಮ್ಮೆ ಅಕರ್ಷಕ ಸ್ಪೆಲ್‌ ಹಾಕಿದರು. ಸೂರ್ಯಕುಮಾರ್‌(52), ತಿಲಕ್‌ ವರ್ಮಾ(38) 4ನೇ ವಿಕೆಟ್‌ಗೆ 8.1 ಓವರಲ್ಲಿ 83 ರನ್‌ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಕಮಿನ್ಸ್‌ ಎಸೆದ 20ನೇ ಓವರಲ್ಲಿ ಪೊಲ್ಲಾರ್ಡ್‌ 3 ಸಿಕ್ಸರ್‌ ಸಿಡಿಸಿ ತಂಡ 161 ರನ್‌ಗಳ ಗೌರವ ಮೊತ್ತ ತಲುಪಲು ನೆರವಾದರು.

ರಾಹುಲ್‌ ದಾಖಲೆ ಸರಿಗಟ್ಟಿದ ಕಮಿನ್ಸ್‌

2018ರಲ್ಲಿ ಡೆಲ್ಲಿ ವಿರುದ್ಧ ಪಂಜಾಬ್‌ನ ಕೆ.ಎಲ್‌.ರಾಹುಲ್‌ (KL Rahul) ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಐಪಿಎಲ್‌ನ ವೇಗದ ಅರ್ಧಶತಕದ ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಕಮಿನ್ಸ್‌ ಸರಿಗಟ್ಟಿದರು. ತಾವೆದುರಿಸಿದ 13ನೇ ಎಸೆತದಲ್ಲಿ ಕಮಿನ್ಸ್‌ ಸಿಕ್ಸರ್‌ ಬಾರಿಸುವ ಯತ್ನ ನಡೆಸಿದರು. ಆದರೆ ಸೂರ್ಯಕುಮಾರ್‌ ಅವರ ಅದ್ಭುತ ಕ್ಷೇತ್ರರಕ್ಷಣೆಯಿಂದಾಗಿ ರಾಹುಲ್‌ ದಾಖಲೆ ಮುರಿಯುವ ಅವಕಾಶ ಕಮಿನ್ಸ್‌ ಕೈತಪ್ಪಿತು.

ಓವರಲ್ಲಿ 35 ರನ್‌: 2ನೇ ದುಬಾರಿ ಓವರ್‌!

ಐಪಿಎಲ್‌ ಇತಿಹಾಸದಲ್ಲಿ ಅತಿ ದುಬಾರಿ ಓವರ್‌ಗಳ ಪಟ್ಟಿಯಲ್ಲಿ ಸ್ಯಾಮ್ಸ್‌ನ 35 ರನ್‌ ಓವರ್‌ 2ನೇ ಸ್ಥಾನ ಪಡೆದಿದೆ. 2011ರಲ್ಲಿ ಆರ್‌ಸಿಬಿ ವಿರುದ್ಧ ಕೊಚ್ಚಿ ತಂಡದ ಪ್ರಶಾಂತ್‌ ಪರಮೇಶ್ವರನ್‌ 37 ರನ್‌ ಬಿಟ್ಟುಕೊಟ್ಟಿದ್ದರು. 2021ರಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿಯ ಹರ್ಷಲ್‌ ಪಟೇಲ್‌ ಸಹ 37 ರನ್‌ ಚಚ್ಚಿಸಿಕೊಂಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!