
ಪುಣೆ (ಏ. 6): ಗಾಯದಿಂದ ಚೇತರಿಸಿಕೊಂಡು ಹಾಲಿ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ತನ್ನ ಮೊದಲ ಪಂದ್ಯವಾಡಿದ ಸೂರ್ಯಕುಮಾರ್ ಯಾದವ್ (Suryakumar Yadav) ಬಾರಿಸಿದ ಸ್ಪೋಟಕ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ (Mumbai Indians)ತಂಡ, ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡದ ಗೆಲುವಿಗೆ ಸವಾಲಿನ ಗುರಿ ನೀಡಿದೆ. ಐಪಿಎಲ್ ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಮುಂಬೈ ಹ್ಯಾಟ್ರಿಕ್ ಸೋಲನ್ನು ತಪ್ಪಿಸಿಕೊಳ್ಳುವ ಗುರಿಯಲ್ಲಿದೆ.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್. 11 ಓವರ್ ಗಳಲ್ಲಿ 55 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಈ ವೇಳೆ ಸೂರ್ಯ ಕುಮಾರ್ ಯಾದವ್ (52 ರನ್, 36 ಎಸೆತ, 5 ಬೌಂಡರಿ, 2 ಸಿಕ್ಸರ್ ) ಹಾಗೂ ತಿಲಕ್ ವರ್ಮ (38*ರನ್, 27 ಎಸೆತ, 3 ಬೌಂಡರಿ, 2 ಸಿಕ್ಸರ್) 4ನೇ ವಿಕೆಟ್ ಗೆ ಸೇರಿಸಿದ 49 ಎಸೆತಗಳ 83 ರನ್ ಗಳ ಜೊತೆಯಾಟದ ನೆರವಿನಿಂದ 4 ವಿಕೆಟ್ ಗೆ 161 ರನ್ ಕಲೆಹಾಕಿತು. ಮೊದಲ ಬೌಂಡರಿ ಬಾರಿಸಲು 18 ಎಸೆತ ಆಡಿದ್ದ ಸೂರ್ಯಕುಮಾರ್ ಯಾದವ್, ನಂತರ ತಾವು ಎದುರಿಸಿದ 17 ಎಸೆತಗಳಲ್ಲಿ 4 ಬೌಂಡರಿ, ಹಾಗೂ 2 ಸಿಕ್ಸರ್ ಗಳನ್ನು ಸಿಡಿಸಿ ಗಮನಸೆಳೆದಿದ್ದರು.
ಮುಂಬೈ ಇಂಡಿಯನ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಕೆಕೆಆರ್ ತಂಡದ ಆರಂಭಿಕ ವೇಗದ ಬೌಲರ್ ಗಳಾಗಿದ್ದ ಉಮೇಶ್ ಯಾದವ್ (Umesh Yadav) ಹಾಗೂ ರಸೀಖ್ ಸಲಾಮ್ (Rasikh Salam), ಮುಂಬೈ ಇಂಡಿಯನ್ಸ್ ತಂಡ ಒಂದೊಂದು ರನ್ ಗೂ ಪರದಾಟ ನಡೆಸುವಂತೆ ಮಾಡಿದರು. ಈವರೆಗೂ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿರುವ ನಾಯಕ ರೋಹಿತ್ ಶರ್ಮ, 12 ಎಸೆತಗಳಲ್ಲಿ 3 ರನ್ ಬಾರಿಸಿ ಉಮೇಶ್ ಯಾದವ್ ಎಸೆತದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ ಗೆ ವಿಕೆಟ್ ನೀಡಿದರು. ಈ ವೇಳೆ ಮುಂಬೈ ಇಂಡಿಯನ್ಸ್ ತಂಡ ಎದುರಿಸಿದ 17 ಎಸೆತಗಳಲ್ಲಿ ಕೇವಲ 6 ರನ್ ಬಾರಿಸಿತ್ತು.
ಬಳಿಕ ಆರಂಭಿಕ ಆಟಗಾರ ಹಾಗೂ ವಿಕೆಟ್ ಕೀಪರ್ ಇಶಾನ್ ಕಿಶನ್ (14 ರನ್. 21 ಎಸೆತ, 1 ಬೌಂಡರಿ) ಹಾಗೂ ಬೇಬಿ ಎಬಿ ಖ್ಯಾತಿಯ ಡೆವಾಲ್ಡ್ ಬ್ರೇವಿಸ್ (29 ರನ್, 19 ಎಸೆತ, 2 ಬೌಂಡರಿ, 2 ಸಿಕ್ಸರ್) ಅಮೂಲ್ಯ 36 ರನ್ ಜೊತೆಯಾಟವಾಡಿದರು. ಇದಲ್ಲಿ ಬ್ರೇವಿಸ್ (Dewald Brevis) ಅವರ ಸೂಪರ್ ಶಾಟ್ ಗಳು ರಂಜನೀಯವಾಗಿದ್ದವು. ಆಟದಲ್ಲಿ ಎಬಿಡಿ ಶೈಲಿಯನ್ನೇ ಹೋಲುವ ಬ್ರೇವಿಸ್ 2 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ಮಿಂಚಿದರು. 8ನೇ ಓವರ್ ನಲ್ಲಿ ದಾಳಿಗಿಳಿದ ವರುಣ್ ಚಕ್ರವರ್ತಿ, ಬ್ರೇವಿಸ್ ಅವರ ಸ್ಪೋಟಕ ಆಟಕ್ಕೆ ಅಂತ್ಯ ಹಾಡಿದರು. ಇನ್ನೊಂದೆಡೆ ರನ್ ಗಳಿಸಲು ಪರದಾಟ ನಡೆಸುತ್ತಿದ್ದ ಇಶಾನ್ ಕಿಶನ್, ಬ್ರೇವಿಸ್ ಔಟಾದ ಮೊತ್ತಕ್ಕೆ 10 ರನ್ ಕೂಡಿಸುವ ವೇಳೆಗೆ ಪ್ಯಾಟ್ ಕಮ್ಮಿನ್ಸ್ ಗೆ ವಿಕೆಟ್ ಒಪ್ಪಿಸಿದ್ದರು.
ಕೋಲ್ಕತ ನೈಟ್ ರೈಡರ್ಸ್ ತಂಡ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿತ್ತು. ಟಿಮ್ ಸೌಥಿ ಬದಲಿಗೆ ಪ್ಯಾಟ್ ಕಮ್ಮಿನ್ಸ್ ಸ್ಥಾನ ಪಡೆದರೆ, ಶಿವಂ ಮಾವಿ ಬದಲು ರಸೀಖ್ ಸಲಾಮ್ ಕೆಕೆಆರ್ ಪರವಾಗಿ ಪಾದಾರ್ಪಣೆ ಮಾಡುವ ಅವಕಾಶ ಪಡೆದುಕೊಂಡರು. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ತಂಡ ಕೂಡ ಪಂದ್ಯಕ್ಕೆ ಎರಡು ಬದಲಾವಣೆ ಮಾಡಿತ್ತು. ಗಾಯದಿಂದ ಚೇತರಿಸಿಕೊಂಡಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಸ್ಥಾನ ಪಡೆದರೆ, ಅನ್ಮೋಲ್ ಪ್ರೀತ್ ಸಿಂಗ್ ಇವರಿಗಾಗಿ ಸ್ಥಾನ ತ್ಯಾಗ ಮಾಡಿದರು. ಇನ್ನು ಟಿಮ್ ಡೇವಿಡ್ ಬದಲು ಡೆವಾಲ್ಡ್ ಬ್ರೇವಿಸ್ ಆಡುವ ಬಳಗದಲ್ಲಿ ಅವಕಾಶ ಪಡೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.