IPL 2022: ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ದ ಶೈನ್ ಆಗುತ್ತಾ ಆರ್‌ಸಿಬಿ..?

By Naveen Kodase  |  First Published Apr 23, 2022, 10:15 AM IST

* ಅರ್‌ಸಿಬಿ ತಂಡಕ್ಕಿಂದು ಸನ್‌ರೈಸರ್ಸ್‌ ಹೈದರಾಬಾದ್‌ ಸವಾಲು

* ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು

* ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ


ಮುಂಬೈ(ಏ.23): ಹೊಸ ಹುರುಪಿನಲ್ಲಿ 15ನೇ ಆವೃತ್ತಿಯ ಐಪಿಎಲ್‌ನಲ್ಲಿ (Indian Premier League) ಅಬ್ಬರಿಸುತ್ತಿರುವ ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು(Royal Challengers Bangalore) (ಆರ್‌ಸಿಬಿ) ತಂಡ ತನ್ನ ಗೆಲುವಿನ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದು, ಸತತ 4 ಗೆಲುವುಗಳನ್ನು ಸಾಧಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಸನ್‌ರೈಸ​ರ್ಸ್‌ ಹೈದರಾಬಾದ್‌ (Sunrisers Hyderabad) ತಂಡವನ್ನು ಶನಿವಾರ ಎದುರಿಸಲಿದೆ.

7 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿರುವ ಆರ್‌ಸಿಬಿ 10 ಅಂಕ ಸಂಪಾದಿಸಿದ್ದು, ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್‌ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗಲಿದೆ. ಆರಂಭದಲ್ಲಿ ಸಪ್ಪೆ ಎನಿಸಿದ್ದ ಸನ್‌ರೈಸರ್ಸ್‌ ಆಟ ದಿನ ಕಳೆದಂತೆ ಪರಿಣಾಮಕಾರಿಯಾಗುತ್ತಿದ್ದು, ಆರ್‌ಸಿಬಿಗೆ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. ಫಾಫ್‌ ಡು ಪ್ಲೆಸಿ, ವಿರಾಟ್‌ ಕೊಹ್ಲಿ (Virat Kohli), ಗ್ಲೆನ್‌ ಮ್ಯಾಕ್ಸ್‌ವೆಲ್‌ (Glenn Maxwell), ದಿನೇಶ್‌ ಕಾರ್ತಿಕ್‌ (Dinesh Karthik), ಶಾಬಾಜ್‌ ಅಹ್ಮದ್‌ರಂತಹ ಘಟಾನುಘಟಿ ಬ್ಯಾಟಿಂಗ್‌ ಪಡೆಗೆ ಭುವನೇಶ್ವರ್‌ ಕುಮಾರ್‌, ಟಿ.ನಟರಾಜನ್‌, ಮಾರ್ಕೊ ಯಾನ್ಸನ್‌, ಉಮ್ರಾನ್‌ ಮಲಿಕ್‌ರ ವೇಗದ ಬೌಲಿಂಗ್‌ ಪರೀಕ್ಷೆ ಎದುರಾಗಲಿದೆ.

Tap to resize

Latest Videos

ಆರ್‌ಸಿಬಿ ತನ್ನ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಆರಂಭಿಕ ಬ್ಯಾಟರ್‌ ಅನುಜ್‌ ರಾವತ್‌ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಹೀಗಾಗಿ ಐಪಿಎಲ್‌ನಲ್ಲಿ ಆರಂಭಿಕನಾಗಿ ಅತ್ಯುತ್ತಮ ದಾಖಲೆ ಹೊಂದಿರುವ, ಲಯಕ್ಕೆ ಮರಳಲು ಹಾತೊರೆಯುತ್ತಿರುವ ವಿರಾಟ್‌ ಕೊಹ್ಲಿಯನ್ನು ಫಾಫ್ ಡು ಪ್ಲೆಸಿಸ್ ಜೊತೆ ಇನ್ನಿಂಗ್ಸ್‌  ಆರಂಭಿಸುವಂತೆ ಕೇಳಬಹುದು. ಹೀಗಾದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್‌ ಲೊಮ್ರೊರ್‌ಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ಮತ್ತೊಂದೆಡೆ ಜೋಶ್‌ ಹೇಜಲ್‌ವುಡ್‌, ಹರ್ಷಲ್‌ ಪಟೇಲ್‌ ನೇತೃತ್ವದ ಬೌಲಿಂಗ್‌ ಪಡೆ ಸ್ಥಿರ ಪ್ರದರ್ಶನ ತೋರಬೇಕಿದ್ದು, ಮೊಹಮದ್‌ ಸಿರಾಜ್‌ರ ಸಾಧಾರಣ ಪ್ರದರ್ಶನ ತಂಡಕ್ಕೆ ತಲೆಬಿಸಿ ಉಂಟು ಮಾಡಿದೆ.

IPL 2022: ಡೆಲ್ಲಿ ಎದುರು ರಾಜಸ್ಥಾನ ರಾಯಲ್ಸ್‌ಗೆ ರೋಚಕ ಗೆಲುವು, ಅಂಕಪಟ್ಟಿಯಲ್ಲಿ ಟಾಪರ್..!

ಆರ್‌ಸಿಬಿಗೆ ತ್ರಿಪಾಠಿ ಭೀತಿ: ಆರ್‌ಸಿಬಿ ಬೌಲರ್‌ಗಳು ಉತ್ಕೃಷ್ಟ ಲಯದಲ್ಲಿರುವ ರಾಹುಲ್‌ ತ್ರಿಪಾಠಿಯನ್ನು ಕಟ್ಟಿಹಾಕಲು ದಾರಿಗಳನ್ನು ಹುಡುಕಿಕೊಳ್ಳಬೇಕಿದೆ. ಕೇನ್‌ ವಿಲಿಯಮ್ಸನ್‌, ಏಡನ್‌ ಮಾರ್ಕ್ರಮ್‌, ಅಭಿಷೇಕ್‌ ಶರ್ಮಾ, ನಿಕೋಲಸ್‌ ಪೂರನ್‌ರಂತಹ ಅಪಾಯಕಾರಿ ಬ್ಯಾಟರ್‌ಗಳ ದಂಡೇ ಸನ್‌ರೈಸರ್ಸ್‌ನಲ್ಲಿದೆ. ಎರಡೂ ತಂಡಗಳು ತನ್ನ ಆಡುವ ಹನ್ನೊಂದರಲ್ಲಿ ಸಮತೋಲನ ಕಂಡುಕೊಂಡು ಪ್ಲೇ-ಆಫ್‌ನತ್ತ ದಿಟ್ಟಹೆಜ್ಜೆ ಹಾಕಲು ಎದುರು ನೋಡುತ್ತಿವೆ. ಲೀಗ್‌ನ ಮಧ್ಯ ಭಾಗದಲ್ಲಿ ಲಯ ಕಳೆದುಕೊಂಡರೆ ನಕಾರಾತ್ಮಕ ಪರಿಣಾಮ ಬೀರಲಿದೆ ಎನ್ನುವುದು ಎರಡೂ ತಂಡಕ್ಕೆ ತಿಳಿದಿದ್ದು, ಭಾರೀ ಪೈಪೋಟಿ ಏರ್ಪಡುವುದು ಖಚಿತ.

ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡವು ಒಟ್ಟು 19 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಸನ್‌ರೈಸರ್ಸ್‌ ಹೈದರಾಬಾದ್‌ ಕೊಂಚ ಮೇಲುಗೈ ಸಾಧಿಸಿದೆ. 19 ಪಂದ್ಯಗಳ ಪೈಕಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಸಂಭವನೀಯ ಆಟಗಾರರ ಪಟ್ಟಿ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು : ಅನುಜ್‌ ರಾವತ್, ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್‌, ಸುಯಶ್ ಪ್ರಭುದೇಸಾಯಿ‌, ದಿನೇಶ್ ಕಾರ್ತಿಕ್‌, ಶಾಬಾಜ್ ಅಹಮ್ಮದ್‌, ಹರ್ಷಲ್ ಪಟೇಲ್‌, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್‌, ಜೋಶ್ ಹೇಜಲ್‌ವುಡ್‌.

ಸನ್‌ರೈಸ​ರ್ಸ್‌: ಅಭಿಷೇಕ್ ಶರ್ಮಾ‌, ಕೇನ್ ವಿಲಿಯಮ್ಸನ್‌(ನಾಯಕ), ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್‌, ನಿಕೋಲಸ್ ಪೂರನ್‌, ಶಶಾಂಕ್ ಸಿಂಗ್‌, ಜಗದೀಶ್ ಸುಚಿತ್‌, ಮಾರ್ಕೊ ಯಾನ್ಸನ್‌, ಭುವನೇಶ್ವರ್ ಕುಮಾರ್‌, ಉಮ್ರಾನ್ ಮಲಿಕ್‌, ಟಿ ನಟರಾಜನ್‌.

ಸ್ಥಳ: ಮುಂಬೈ, ಬ್ರೆಬೋರ್ನ್‌ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

click me!