IPL 2022: ಸತತ 6ನೇ ಸೋಲು ತಪ್ಪಿಸುತ್ತಾ ಕೋಲ್ಕತಾ ನೈಟ್‌ ರೈಡರ್ಸ್‌?

By Naveen KodaseFirst Published May 2, 2022, 11:09 AM IST
Highlights

* ರಾಜಸ್ಥಾನ ರಾಯಲ್ಸ್‌ ತಂಡಕ್ಕಿಂದು ಕೋಲ್ಕತಾ ನೈಟ್ ರೈಡರ್ಸ್‌ ಸವಾಲು

* ಹೈವೋಲ್ಟೇಜ್‌ ಪಂದ್ಯಕ್ಕಿಂದು ಮುಂಬೈ ಇಂಡಿಯನ್ಸ್‌ ಸವಾಲು

* ಸತತ ಆರನೇ ಸೋಲಿನ ಭೀತಿಗೆ ಸಿಲುಕಿದೆ ಕೋಲ್ಕತಾ ನೈಟ್ ರೈಡರ್ಸ್‌

ಮುಂಬೈ(ಮೇ.02): ಸತತ 5 ಪಂದ್ಯಗಳ ಸೋಲಿನೊಂದಿಗೆ ಪ್ಲೇ-ಆಫ್‌ ಹಾದಿಯನ್ನು ಕಠಿಣಗೊಳಿಸಿಕೊಂಡಿರುವ ಕಳೆದ ಬಾರಿ ರನ್ನರ್‌-ಅಪ್‌ ಕೋಲ್ಕತಾ ನೈಟ್‌ ರೈಡ​ರ್ಸ್ (Kolkata Knight Riders) ಗೆಲುವಿನ ಹಳಿಗೆ ಮರಳಲು ಹೆಣಗಾಡುತ್ತಿದ್ದು, ಸೋಮವಾರ ರಾಜಸ್ಥಾನ ರಾಯಲ್ಸ್‌ (Rajasthan Royals) ಸವಾಲನ್ನು ಎದುರಿಸಲಿದೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 47ನೇ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ (Wankhede Stadium) ಆತಿಥ್ಯವನ್ನು ವಹಿಸಲಿದೆ.

ಶ್ರೇಯಸ್‌ ಅಯ್ಯರ್‌ (Shreyas Iyer) ನಾಯಕತ್ವದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡವು ಈ ಬಾರಿ ಆಡಿದ 9 ಪಂದ್ಯದಲ್ಲಿ ಕೇವಲ 3ರಲ್ಲಿ ಗೆದ್ದಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಹಲವು ಪ್ರಯೋಗಗಳನ್ನು ನಡೆಸಿದರೂ ಗೆಲುವು ಮಾತ್ರ ಸಿಗುತ್ತಿಲ್ಲ. ತಂಡ ಹೆಚ್ಚಾಗಿ ನೆಚ್ಚಿಕೊಂಡಿದ್ದ ತಾರಾ ಆಟಗಾರರು ಕೈ ಕೊಡುತ್ತಿರುವುದು ಸೋಲಿಗೆ ಪ್ರಮುಖ ಕಾರಣ. ತಂಡಕ್ಕೆ ಇನ್ನುಳಿದ ಐದು ಪಂದ್ಯಗಳಿದ್ದು, ಎಲ್ಲಾ ಪಂದ್ಯಗಳನ್ನು ಗೆದ್ದರೂ ಪ್ಲೇ-ಆಫ್‌ ಪ್ರವೇಶಿಸುವುದು ಕಷ್ಟ.

Latest Videos

ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋತ ಹೊರತಾಗಿಯೂ ರಾಜಸ್ಥಾನ ಬಲಿಷ್ಠವಾಗಿ ತೋರುತ್ತಿದೆ. ಬ್ಯಾಟಿಂಗ್‌ನಲ್ಲಿ ಜೋಸ್‌ ಬಟ್ಲರ್‌ (Jos Buttler), ಬೌಲಿಂಗ್‌ನಲ್ಲಿ ಯಜುವೇಂದ್ರ ಚಹಲ್‌ ಪ್ರಾಬಲ್ಯ ಮುಂದುವರಿದಿದ್ದು, ತಂಡ ಮತ್ತೊಂದು ಗೆಲುವಿನ ಮೂಲಕ ಪ್ಲೇ-ಆಫ್‌ಗೆ ಮತ್ತಷ್ಟು ಹತ್ತಿರವಾಗಲು ಎದುರು ನೋಡುತ್ತಿದೆ. ಸದ್ಯ ರಾಜಸ್ಥಾನ ರಾಯಲ್ಸ್‌ ತಂಡದ ಆರಂಭಿಕ ಬ್ಯಾಟರ್‌ ಜೋಸ್ ಬಟ್ಲರ್‌ ಭರ್ಜರಿ ಫಾರ್ಮ್‌ನಲ್ಲಿದ್ದು, ಸದ್ಯ 3 ಶತಕ ಸಹಿತ 566 ರನ್‌ ಬಾರಿಸಿದ್ದಾರೆ. ಆದರೆ ರಾಜಸ್ಥಾನ ರಾಯಲ್ಸ್‌ ತಂಡವು ಇದುವರೆಗೂ ವಾಂಖೇಡೆ ಮೈದಾನದಲ್ಲಿ 14 ಪಂದ್ಯಗಳನ್ನಾಡಿದ್ದು. ಈ ಪೈಕಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. 

IPL 2022 ನಾಯಕತ್ವ ಬದಲಾದ ಬೆನ್ನಲ್ಲೇ ತೆರೆಯಿತು ಗೆಲುವಿನ ಬಾಗಿಲು, SRH ಮಣಿಸಿದ ಧೋನಿ ಪಡೆ!

ಐಪಿಎಲ್‌ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಇದುವರೆಗೂ 25 ಬಾರಿ ಮುಖಾಮುಖಿಯಾಗಿದ್ದು, ಎರಡೂ ತಂಡಗಳು ಸಮಬಲದ ಪ್ರದರ್ಶನ ತೋರಿವೆ. 25 ಪಂದ್ಯಗಳ ಪೈಕಿ ಕೋಲ್ಕತಾ ನೈಟ್ ರೈಡರ್ಸ್‌ ತಂಡವು 13 ಪಂದ್ಯಗಳನ್ನು ಜಯಿಸಿದ್ದರೆ, ರಾಜಸ್ಥಾನ ರಾಯಲ್ಸ್‌ ತಂಡವು 12 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಸಂಭವನೀಯ ಆಟಗಾರರ ಪಟ್ಟಿ

ಕೋಲ್ಕತಾ ನೈಟ್ ರೈಡರ್ಸ್: ಆರೋನ್ ಫಿಂಚ್‌, ವೆಂಕಟೇಶ್ ಅಯ್ಯರ್‌, ಶ್ರೇಯಸ್ ಅಯ್ಯರ್‌(ನಾಯಕ), ಬಾಬಾ ಇಂದ್ರಜಿತ್‌, ಸುನಿಲ್ ನರೈನ್‌, ನಿತೀಶ್ ರಾಣಾ, ಆಂಡ್ರೆ ರಸೆಲ್‌, ರಿಂಕು ಸಿಂಗ್‌, ಉಮೇಶ್ ಯಾದವ್‌, ಟಿಮ್‌ ಸೌಥಿ, ಹರ್ಷಿತ್ ರಾಣಾ‌.

ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್‌, ದೇವದತ್ ಪಡಿಕ್ಕಲ್‌, ಸಂಜು ಸ್ಯಾಮ್ಸನ್‌(ನಾಯಕ), ಶಿಮ್ರೊನ್ ಹೆಟ್ಮೇಯರ್‌, ಡೇರಲ್ ಮಿಚೆಲ್‌, ರಿಯಾನ್ ಪರಾಗ್‌, ರವಿಚಂದ್ರನ್ ಅಶ್ವಿನ್‌, ಟ್ರೆಂಟ್ ಬೌಲ್ಟ್‌, ಪ್ರಸಿದ್ಧ್‌ ಕೃಷ್ಣ, ಯುಜುವೇಂದ್ರ ಚಹಲ್‌, ಕುಲ್ದೀಪ್ ಸೆನ್‌.

ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ 
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

click me!