
ಮುಂಬೈ(ಏ.18): ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಸೆಂಚುರಿ ಮುಂದೆ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಹೋರಾಟ ಸಾಕಾಗಲಿಲ್ಲ. ಅಂತಿಮ ಹಂತದಲ್ಲಿ ಉಮೇಶ್ ಯಾದವ್ ಸ್ಫೋಟಕ ಬ್ಯಾಟಿಂಗ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿತು. ಆದರೆ ಗೆಲುವು ತಂದುಕೊಡಲಿಲ್ಲ. ಕೆಕೆಆರ್ ವಿರುದ್ದ ರಾಜಸ್ಥಾನ ರಾಯಲ್ಸ್ 7 ರನ್ ಗೆಲುವು ದಾಖಲಿಸಿತು.
218ರನ್ ಬೃಹತ್ ಟಾರ್ಗೆಟ್ ಕೋಲ್ಕತಾ ನೈಟ್ ರೈಡರ್ಸ್ ಮೇಲೆ ತೀವ್ರ ಒತ್ತಡ ತಂದಿತು.ಕಳೆದೆರಡು ಪಂದ್ಯದಲ್ಲಿ ಸೋತತ ಸೋಲು, ಗೆಲ್ಲಲೇಬೇಕೆಂಬ ಒತ್ತಡವೂ ಕೆಕೆರ್ ತಂಡಕ್ಕೆ ಆರಂಭದಲ್ಲೇ ಹಿನ್ನಡೆ ತಂದಿತು. ಇದರ ಪರಿಣಾಮ ಮೊದಲ ಎಸೆತದಲ್ಲೇ ಸುನಿಲ್ ನರೈನ್ ರನೌಟ್‌ಗೆ ಬಲಿಯಾದರು. ಖಾತೆ ತೆರೆಯುವ ಮುನ್ನವೇ ಸುನಿಲ್ ನರೈನ್ ಹಾಗೂ ಕೆಕೆಆರ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆ್ಯರೋನ್ ಫಿಂಚ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಹೋರಾಟ ಕೋಲ್ಕತಾ ತಂಡದಲ್ಲಿ ಹೊಸ ಚೈತನ್ಯ ಮೂಡಿಸಿತು. ಕಾರಣ ಇವರಿಬ್ಬರು ಶತಕದ ಜೊತೆಯಾಟ ಆಡಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಫಿಂಚ್ 28 ಎಸೆತದಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 58 ರನ್ ಸಿಡಿಸಿದರು.
ಫಿಂಚ್ ಬೆನ್ನಲ್ಲೇ ನಿತೀಶ್ ರಾಣಾ ವಿಕೆಟ್ ಪತನಗೊಂಡಿತು. ರಾಣಾ ಕೇವಲ 18 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಇತ್ ಶ್ರೇಯಸ್ ಅಯ್ಯರ್ ಕೂಡ ಅರ್ಧಶತಕ ಪೂರೈಸಿದರು. ಅಯ್ಯರ್ ಹೋರಾಟ ಮುಂದುವರಿಸಿದರೆ, ಆ್ಯಂಡ್ರೆ ರಸೆಲ್ ಡಕೌಟ್ ಆದರು.
ಶ್ರೇಯಸ್ ಅಯ್ಯರ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಇತ್ತ ವಿಕೆಟ್ ಪತನ ನಿಲ್ಲಲಿಲ್ಲ. ವೆಂಕೇಶ್ ಅಯ್ಯರ್ 6 ರನ್ ಸಿಡಿಸಿ ಔಟಾದರು. ತಂಡವನ್ನು ಗೆಲುವಿನ ದಡ ಸೇರಿಸುವ ವಿಶ್ವಾಸದೊಂದಿದೆ ಬ್ಯಾಟಿಂಗ್ ಮಾಡಿದ ಶ್ರೇಯಸ್ 51 ಎಸೆತದಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 85 ರನ್ ಸಿಡಿಸಿ ಔಟಾದರು.
ಶಿವಂ ಮಾವಿಯಿಂದ ರನ್ ಹರಿದು ಬರಲಿಲ್ಲ. ಅಯ್ಯರ್ ಅಬ್ಬರದ ಬಳಿಕ ಉಮೇಶ್ ಯಾದವ್ ಅಬ್ಬರಿಸಲು ಆರಂಭಿಸಿದರು. ಪರಿಣಾಮ ಅಂತಿಮ 6 ಎಸೆತದಲ್ಲಿ ಕೆಕೆಆರ್ ಗೆಲುವಿಗೆ 11 ರನ್ ಅವಶ್ಯಕತೆ ಇತ್ತು. ಇದೇ ವೇಳೆ ಶೆಲ್ಡಾನ್ ಜಾಕ್ಸನ್ ವಿಕೆಟ್ ಪತನಗೊಂಡಿತು. ಇತ್ತ ಉಮೇಶ್ ಯಾದವ್ 9 ಎಸೆತದಲ್ಲಿ 21 ರನ್ ಸಿಡಿಸಿ ಔಟಾದರು. ಈ ಮೂಲಕ ಕೆಕೆಆರ್ 210 ರನ್‌ಗೆ ಆಲೌಟ್ ಆಯಿತು.
ರಾಜಸ್ಥಾನ ರಾಯಲ್ಸ್ ಇನ್ನಿಂಗ್ಸ್
ಜೋಸ್ ಬಟ್ಲರ್ ಶತಕದಿಂದ ರಾಜಸ್ಥಾನ ರಾಯಲ್ಸ್ 217 ರನ್ ಸಿಡಿಸಿತ್ತು. ಬಟ್ಲರ್ 61 ಎಸೆತದಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 103 ರನ್ ಕಾಣಿಕೆ ನೀಡಿದರು. ಇದು ಜೋಸ್ ಬಟ್ಲರ್ ಈ ಆವೃತ್ತಿಯಲ್ಲಿ ಸಿಡಿಸಿದ ಎರಡನೇ ಶತಕವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಶತಕ ಸಿಡಿಸಿದ್ದರು. ಇನ್ನು ದೇವದತ್ ಪಡಿಕ್ಕಲ್ 24 ರನ್ ಸಿಡಿಸಿದರು. ನಾಯಕ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸಂಜು 19 ಎಸೆತದಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 38 ರನ್ ಸಿಡಿಸಿದರು. ರಿಯಾನ್ ಪರಾಗ್ ಹಾಗೂ ಕರುಣ್ ನಾರ್ ಅಬ್ಬರಿಸಲಿಲ್ಲ. ಶಿಮ್ರೊನ್ ಹೆಟ್ಮೆಯರ್ ಅಜೇಯ 26 ರನ್ ಕಾಣಿಕೆ ನೀಡಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 5 ವಿಕೆಟ್ ನಷ್ಟಕ್ಕೆ 217 ರನ್ ಸಿಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.