IPL 2022: ಆರ್‌ಸಿಬಿ ತಂಡಕ್ಕೆ ಟಾಪ್‌ 2ಗೇರಲು ಇನ್ನೂ ಇದೆ ಅವಕಾಶ..! ಹೇಗೆ ಗೊತ್ತಾ..?

By Naveen Kodase  |  First Published May 12, 2022, 5:22 PM IST

* ಪ್ಲೇ ಆಫ್‌ ಹೊಸ್ತಿಲಲ್ಲಿದೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 

* ಆರ್‌ಸಿಬಿ ತಂಡಕ್ಕಿದೆ ಮೊದಲ ಕ್ವಾಲಿಫೈಯರ್ ಆಡುವ ಅವಕಾಶ

* ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು


ಬೆಂಗಳೂರು(ಮೇ.12): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ನಿರ್ಣಾಯಕಘಟ್ಟದತ್ತ ಸಾಗುತ್ತಿದೆ. ಈಗಾಗಲೇ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟಾನ್ಸ್‌ (Gujarat Titans) ತಂಡವು ಪ್ಲೇ ಆಫ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದು, ಇನ್ನು ಮೂರು ಸ್ಥಾನಗಳಿಗಾಗಿ ಎಂಟು ತಂಡಗಳು ಪೈಪೋಟಿ ನಡೆಸಲಿವೆ. ಇನ್ನು ಚೊಚ್ಚಲ ಐಪಿಎಲ್‌ ಟ್ರೋಫಿಯ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡವು ಬಹುತೇಕ ಪ್ಲೇ ಆಫ್‌ ಹೊಸ್ತಿಲಲ್ಲಿದ್ದು, ಲೀಗ್ ಹಂತ ಮುಕ್ತಾಯದ ಬಳಿಕ ಅಂಕಪಟ್ಟಿಯಲ್ಲಿ ಟಾಪ್ 2ನೊಳಗೆ ಸ್ಥಾನ ಪಡೆಯಲು ಸುವರ್ಣಾವಕಾಶವಿದೆ. 

ಈಗಾಗಲೇ ಮಂಗಳವಾರ ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್‌ (Lucknow Super Giants) ಎದುರು 62 ರನ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಮೊದಲ ತಂಡವಾಗಿ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆದ ಮೊದಲ ತಂಡ ಎನಿಸಿದೆ. ಸದ್ಯ ಗುಜರಾತ್ ಟೈಟಾನ್ಸ್ ತಂಡವು 12 ಪಂದ್ಯಗಳನ್ನಾಡಿ 9 ಗೆಲುವು ಸಾಧಿಸುವ ಮೂಲಕ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಭದ್ರವಾಗಿದ್ದರೆ, ಲಖನೌ ಸೂಪರ್ ಜೈಂಟ್ಸ್ ತಂಡವು 16 ಅಂಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ರಾಜಸ್ಥಾನ ರಾಯಲ್ಸ್ (Rajasthan Royals) ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ತಲಾ 12 ಪಂದ್ಯಗಳನ್ನಾಡಿ 7 ಗೆಲುವು ಹಾಗೂ 5 ಸೋಲುಗಳನ್ನು ದಾಖಲಿಸಿವೆ. ಆದರೆ ಆರ್‌ಸಿಬಿಗಿಂತ ರಾಜಸ್ಥಾನ ರಾಯಲ್ಸ್‌ ನೆಟ್‌ ರನ್‌ರೇಟ್‌ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಮೂರನೇ ಸ್ಥಾನದಲ್ಲಿದೆ.  

Tap to resize

Latest Videos

ಆರ್‌ಸಿಬಿ ಟಾಪ್ 2 ಸ್ಥಾನ ಪಡೆಯಲು ಸಾಧ್ಯವೇ..?

ಐಪಿಎಲ್‌ನಲ್ಲಿ ಎಲ್ಲಾ ತಂಡಗಳು ಕೇವಲ ಪ್ಲೇ ಆಫ್‌ನೊಳಗೆ ಸ್ಥಾನ ಪಡೆಯುವುದಕ್ಕಿಂತ ಹೆಚ್ಚಾಗಿ ಟಾಪ್ 2 ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿ ನಡೆಸಲು ಎದುರು ನೋಡುತ್ತಿರುತ್ತವೆ. ಯಾಕೆಂದರೆ ಲೀಗ್ ಹಂತದ ಮುಕ್ತಾಯದ ಬಳಿಕ ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನ ಪಡೆಯುವ ತಂಡಗಳು ಮೊದಲ ಕ್ವಾಲಿಫೈಯರ್‌ನಲ್ಲಿ ಪೈಪೋಟಿ ನಡೆಸಲಿವೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ವಿಜೇತರಾಗುವ ತಂಡವು ನೇರವಾಗಿ ಫೈನಲ್‌ ಪ್ರವೇಶಿಸಿದರೆ, ಸೋತ ತಂಡಕ್ಕೆ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶ ಇರಲಿದೆ. ಸದ್ಯ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಇನ್ನೂ 2 ಪಂದ್ಯಗಳನ್ನಾಡುವುದು ಬಾಕಿ ಇದೆ. ಹಾಗಿದ್ದರೆ, ಆರ್‌ಸಿಬಿ ಅಂಕಪಟ್ಟಿಯಲ್ಲಿ ಟಾಪ್ 2 ಹಂತ ಹೇಗೆ ತಲುಪಬಹುದು ಎನ್ನುವುದನ್ನು ನೋಡುವುದಾದರೇ..

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತದಲ್ಲಿ ಕೊನೆಯ ಎರಡು ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ದ ಸೆಣಸಲಿದೆ. ಒಂದು ವೇಳೆ ಆರ್‌ಸಿಬಿ ಈ ಎರಡು ಪಂದ್ಯಗಳನ್ನು ಜಯಿಸಿದರೆ ಬೆಂಗಳೂರು ತಂಡದ ಖಾತೆಯಲ್ಲಿ 18 ಅಂಕಗಳಾಗಲಿವೆ. ಇನ್ನು ಗುಜರಾತ್ ಟೈಟಾನ್ಸ್ ತಂಡವು ಈಗಾಗಲೇ 18 ಅಂಕಗಳಿಸಿದ್ದು, ಇನ್ನೂ ಎರಡು ಪಂದ್ಯಗಳನ್ನು ಆಡುವುದು ಬಾಕಿ ಇದೆ. ಎರಡು ಪಂದ್ಯಗಳ ಪೈಕಿ ಗುಜರಾತ್ ತಂಡವು ಆರ್‌ಸಿಬಿ ಎದುರು ಸೋತು, ಇನ್ನೊಂದು ಪಂದ್ಯವನ್ನು ಗೆದ್ದರೆ ಗರಿಷ್ಠವೆಂದರೆ 20 ಅಂಕಗಳನ್ನು ಕಲೆಹಾಕಬಹುದು. ಒಂದು ವೇಳೆ ಗುಜರಾತ್ ಟೈಟಾನ್ಸ್‌ ತಂಡವು ಎರಡೂ ಪಂದ್ಯಗಳನ್ನು ಸೋತರೂ ಸಹಾ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಉಳಿಯುವುದು ಬಹುತೇಕ ಖಚಿತವೆನಿಸಿದೆ.

IPL 2022: ಎಬಿ ಡಿವಿಲಿಯರ್ಸ್‌ ಕುರಿತಂತೆ ಗುಡ್‌ ನ್ಯೂಸ್ ನೀಡಿದ ವಿರಾಟ್ ಕೊಹ್ಲಿ..!

ಇನ್ನೊಂದೆಡೆ ಕೆ.ಎಲ್. ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು 16 ಅಂಕಗಳೊಂದಿಗೆ ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಲಖನೌ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಸೆಣಸಾಡಲಿದೆ. ಒಂದು ವೇಳೆ ಲಖನೌ ತಂಡವು ಈ ಎರಡು ಪಂದ್ಯಗಳನ್ನು ಸೋತರೆ ತನ್ನ ಖಾತೆಯಲ್ಲಿ 16 ಅಂಕಗಳನ್ನು ಮಾತ್ರ ಹೊಂದಿರಲಿದೆ. ಇದೇ ವೇಳೆ ಆರ್‌ಸಿಬಿ ಇನ್ನುಳಿದ ಎರಡು ಪಂದ್ಯಗಳನ್ನು ಜಯಿಸಿದರೆ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಟಾಪ್ 2ನೊಳಗೆ ಸ್ಥಾನ ಪಡೆಯಲಿದೆ.

ಇನ್ನೊಂದೆಡೆ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಸದ್ಯ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಇನ್ನುಳಿದ ಎರಡು ಪಂದ್ಯಗಳಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ದ ಸೆಣಸಲಿದೆ. ಒಂದು ವೇಳೆ ರಾಜಸ್ಥಾನ ರಾಯಲ್ಸ್ ತಂಡವು ಎರಡೂ ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದರೆ, ಗರಿಷ್ಠವೆಂದರೆ ರಾಯಲ್ಸ್ ಪಡೆಯು 18 ಅಂಕಗಳನ್ನು ಗಳಿಸಲಿದೆ. ಒಂದು ವೇಳೆ ಆರ್‌ಸಿಬಿ ಉಳಿದೆರಡು ಪಂದ್ಯಗಳಲ್ಲಿ ಭಾರೀ ಅಂತರದ ಗೆಲುವು ಸಾಧಿಸಿದರೆ ಸುಲಭವಾಗಿ ಟಾಪ್ 2 ನೊಳಗೆ ಸ್ಥಾನ ಪಡೆಯಬಹುದಾಗಿದೆ.

click me!