IPL 2022 ಪಂಜಾಬ್ ತಂಡದ ರನ್ ರೇಟ್ ಬೇಟೆ, ಆರ್ ಸಿಬಿಯನ್ನು ಇಳಿಸಿ 5ನೇ ಸ್ಥಾನಕ್ಕೇರಿದ ಕಿಂಗ್ಸ್!

By Santosh NaikFirst Published May 3, 2022, 11:12 PM IST
Highlights

ಮೊಹಮದ್ ಶಮಿ ಎಸೆದ 16ನೇ ಓವರ್ ನಲ್ಲಿ 3 ಸಿಕ್ಸರ್, 2 ಬೌಂಡರಿಯೊಂದಿಗೆ 28 ರನ್ ಸಿಡಿಸಿದ ಲಿಯಾಮ್ ಲಿವಿಂಗ್ ಸ್ಟೋನ್ ಇನ್ನೂ 24 ಎಸೆತಗಳು ಇರುವಂತೆ ಗುಜರಾತ್ ಟೈಟಾನ್ಸ್ ವಿರುದ್ಧ ತಂಡದ 8 ವಿಕೆಟ್ ಗಳ ಅದ್ಭುತ ಗೆಲುವಿಗೆ ಕಾರಣರಾದರು. ಇದರೊಂದಿಗೆ ಉತ್ತಮ ರನ್ ರೇಟ್ ಸಂಪಾದಿಸಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿದಿದೆ.

ಮುಂಬೈ (ಮೇ.3): ಅಸ್ಥಿರ ಆಟದಿಂದ ಕಂಗೆಟ್ಟು ಪ್ಲೇ ಆಫ್ ರೇಸ್ ನಿಂದ ಹೊರಬೀಳುವ ಭಯದಲ್ಲಿದ್ದ ಪಂಜಾಬ್ ಕಿಂಗ್ಸ್  (Punjab Kings) ತಂಡ ಅಂಕಪಟ್ಟಿಯ ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್ ( Gujarat Titans) ವಿರುದ್ಧ ಆತ್ಮವಿಶ್ವಾಸ ಪಡೆಯಬಹುದಾದಂಥ ಗೆಲುವು ಕಂಡುಕೊಂಡಿದೆ. ಗುಜರಾತ್ ಟೈಟಾನ್ಸ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸುವ ಮೂಲಕ ಪಂಜಾಬ್ ಕಿಂಗ್ಸ್ 15ನೇ ಆವೃತ್ತಿಯ ಐಪಿಎಲ್ (IPL 2022) ನಲ್ಲಿ ತನ್ನ 5ನೇ ಗೆಲುವು ಕಂಡಿದೆ.

ಡಿವೈ ಪಾಟೀಲ್ ಮೈದಾನದಲ್ಲಿ ಮಂಗಳವಾರ ನಡೆದ ಮುಖಾಮುಖಿಯಲ್ಲಿ ಪ್ರಮುಖವಾದ ಟಾಸ್ ಜಯಿಸಿದ್ದ ಹಾರ್ದಿಕ್ ಪಾಂಡ್ಯ (Hardik Pandya)  ಅಚ್ಚರಿ ಎನ್ನುವಂತೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಚೇಸಿಂಗ್ ಮಾಡಿದ ತಂಡದಗೇ ಹೆಚ್ಚಿನ ಗೆಲುವು ಸಾಧಿಸಿದ್ದ ನಡುವೆಯೂ ಹಾರ್ದಿಕ್ ಪಾಂಡ್ಯ ಪ್ರವಾಹದ ವಿರುದ್ಧ ಈಜುವ ಸಾಹಸ ಮಾಡಿದ್ದರು. ಬ್ಯಾಟಿಂಗ್ ವೇಳೆ ಕಗೀಸೋ ರಬಾಡ (33ಕ್ಕೆ 4) ಅವರ ಮಾರಕ ಬೌಲಿಂಗ್ ದಾಳಿಗೆ ಕುಸಿದು 8 ವಿಕೆಟ್ ಗೆ 143 ರನ್ ಗಳ ಸಾಧಾರಣ ಮೊತ್ತ ಪೇರಿಸಿತು. ಬಳಿಕ ಶಿಖರ್ ಧವನ್ (62*ರನ್, 53 ಎಸೆತ, 8 ಬೌಂಡರಿ, 1 ಸಿಕ್ಸರ್) ಅವರ ಆಕರ್ಷಕ ಅರ್ಧಶತಕ ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ (30*ರನ್. 10 ಎಸೆತ, 2 ಬೌಂಡರಿ, 3 ಸಿಕ್ಸರ್) ಸಾಹಸದಿಂದಾಗಿ ಪಂಜಾಬ್ ತಂಡ 2 ವಿಕೆಟ್ ಗೆ 145 ರನ್ ಬಾರಿಸಿ ಗೆಲುವು ಕಂಡಿತು. ಇದು ಗುಜರಾತ್ ತಂಡಕ್ಕೆ ಲೀಗ್ ನಲ್ಲಿ 2ನೇ ಸೋಲು ಎನಿಸಿದೆ. 


ಮತ್ತೊಂದು ಹೊಸ ಆರಂಭಿಕ ಜೋಡಿಯೊಂದಿಗೆ ಪಂಜಾಬ್ ತಂಡ ಚೇಸಿಂಗ್ ಆರಂಭಿಸಿತು. ಜಾನಿ ಬೇರ್ ಸ್ಟೋ (1) ಹಾಗೂ ಶಿಖರ್ ಧವನ್ ಜೋಡಿ ಮೊದಲ ವಿಕೆಟ್ ಗೆ ತಂಡಕ್ಕೆ ಆಧಾರವಾಗಲಿಲ್ಲ. ಕೇವಲ 10 ರನ್ ಬಾರಿಸಿ ಈ ಜೋಡಿ ಬೇರ್ಪಟ್ಟಿತು. 6 ಎಸೆತಗಳಲ್ಲಿ ಕೇವಲ 1 ರನ್ ಬಾರಿಸಿದ್ದ ಜಾನಿ ಬೇರ್ ಸ್ಟೋ, ಶಮಿ ಎಸೆತದಲ್ಲಿ ಪ್ರದೀಪ್ ಸಂಗ್ವಾನ್ ಗೆ ಕ್ಯಾಚ್ ನೀಡಿ ಹೊರನಡೆದರು. ಈ ವೇಳೆ ಟೈಟಾನ್ಸ್ ಕೂಡ ಪೈಪೋಟಿ ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು.

ಆದರೆ, ಟೈಟಾನ್ಸ್ ತಂಡದ ಬೌಲಿಂಗ್ ದಾಳಿಯನ್ನು ಶಿಖರ್ ಧವನ್ (Shikhar Dhawan) ಹಾಗೂ ಭಾನುಕಾ ರಾಜಪಕ್ಷ (40ರನ್, 28 ಎಸೆತ, 5 ಬೌಂಡರಿ, 1 ಸಿಕ್ಸರ್) ಜೋಡಿ ಬೆಂಡತ್ತಿತ್ತು. 2ನೇ ವಿಕೆಟ್ ಗೆ ಈ ಜೋಡಿ 58 ಎಸೆತಗಳಲ್ಲಿ 87 ರನ್ ಗಳ ಜೊತೆಯಾಟವಾಡಿತು. ಇಬ್ಬರು ಎಡಗೈ ಬ್ಯಾಟ್ಸ್ ಮನ್ ಗಳ ಬ್ಯಾಟಿಂಗ್ ಪ್ರಹಾರಕ್ಕೆ ಗುಜರಾತ್ ಟೈಟಾನ್ಸ್ ತಂಡ ಬೆಂಡಾಯಿತು. ಭಾನುಕಾ ರಾಜಪಕ್ಸ ಹೆಚ್ಚಾಗಿ ಲೆಗ್ ಸೈಡ್ ನತ್ತ ಶಾಟ್ ಗಳನ್ನು ಬಾರಿಸಿ ಗಮನಸೆಳೆದರು. ಇವರ ಬ್ಯಾಟಿಂಗ್ ಸಾಹಸದಿಂದಾಗಿ ಪಂಜಾಬ್ ತಂಡದ ಗೆಲವು ಬಹುತೇಕ ಸುಲಭವಾಯಿತು.

IPL 2022 ಸಾಧಾರಣ ಮೊತ್ತ ಪೇರಿಸಿದ ಗುಜರಾತ್ ಟೈಟಾನ್ಸ್

ಆರ್ ಸಿಬಿ ವಿರುದ್ಧ 25 ಎಸೆತಗಳಲ್ಲಿ 47 ರನ್ ಜೊತೆಯಾಟವಾಡಿದ್ದ ಈ ಜೋಡಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 69 ಎಸೆತಗಳಲ್ಲಿ 110 ರನ್ ಜೊತೆಯಾಟವಾಡಿತ್ತು. ಅದೇ ಆಟವನ್ನು ಗುಜರಾತ್ ವಿರುದ್ಧವೂ ಶಿಖರ್ ಧವನ್ ಹಾಗೂ ಭಾನುಕಾ ರಾಜಪಕ್ಷ ಜೋಡಿ ಆಡಿತು. ತಂಡದ ಮೊತ್ತ 97 ರನ್ ಆಗಿದ್ದಾಗ ಭಾನುಕಾ ರಾಜಪಕ್ಸ, ಲಾಕಿ ಫರ್ಗುಸನ್ ಗೆ ವಿಕೆಟ್ ನೀಡಿ ನಿರ್ಗಮಿಸಿದರು.

IPL 2022: ಟೀಂ​ ಇಂಡಿಯಾಗೆ ಸಿಕ್ಕೇ ಬಿಟ್ಟ ಸ್ಲಾಗ್​ ಓವರ್ ಸ್ಪೆಶಲಿಸ್ಟ್​..!

ಶಮಿಗೆ ಬೆಂಡೆತ್ತಿದ ಲಿವಿಂಗ್ ಸ್ಟೋನ್: ಕೊನೇ ಐದು ಓವರ್ ಗಳಲ್ಲಿ ಪಂಜಾಬ್ ತಂಡದ ಗೆಲುವಿಗೆ 27 ರನ್ ಬೇಕಿತ್ತು. ಆದರೆ, ಮೊಹಮದ್ ಶಮಿ ಎಸೆದ 16ನೇ ಓವರ್ ನಲ್ಲಿ 3 ಸಿಕ್ಸರ್, 2 ಬೌಂಡರಿ ಹಾಗೂ 2 ರನ್ ನೊಂದಿಗೆ 28 ರನ್ ಚಚ್ಚಿದ ಲಿಯಾಮ್ ಲಿವಿಂಗ್ ಸ್ಟೋನ್ ಇನ್ನೂ 24 ಎಸೆತಗಳು ಇರುವಂತೆಯೇ ತಂಡಕ್ಕೆ ಗೆಲುವು ನೀಡಿದರು.

click me!