IPL 2022: ಚಹಲ್‌ vs ಕುಲ್ದೀಪ್‌ ಕದನ ಕುತೂಹಲ!

By Naveen KodaseFirst Published Apr 22, 2022, 10:43 AM IST
Highlights

* ರಾಜಸ್ಥಾನ ರಾಯಲ್ಸ್‌ ತಂಡಕ್ಕಿಂದು ಡೆಲ್ಲಿ ಕ್ಯಾಪಿಟಲ್ಸ್ ಸವಾಲು

* ಕುಲ್ದೀಪ್ ಯಾದವ್-ಚಹಲ್ ನಡುವಿನ ಪೈಪೋಟಿಗೆ ಇಂದಿನ ಪಂದ್ಯ ಸಾಕ್ಷಿ

* ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ರಾಯಲ್ಸ್‌ ಹವಣಿಕೆ

ಮುಂಬೈ(ಏ.22): ಸರಣಿ ಕೋವಿಡ್‌ ಪ್ರಕರಣಗಳು ಸೇರಿದಂತೆ ಹಲವು ಅಡ್ಡಿ, ಆತಂಕಗಳ ನಡುವೆಯೇ ಕಳೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ ಅಬ್ಬರದ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಮತ್ತೊಂದು ಸವಾಲಿಗೆ ರೆಡಿಯಾಗಿದ್ದು, ಶುಕ್ರವಾರ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಸೆಣಸಾಡಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ 4ನೇ ಗೆಲುವಿನ ಕಾತರದಲ್ಲಿದ್ದರೆ, ಸಂಜು ಸ್ಯಾಮ್ಸನ್‌ (Sanju Samson) ನಾಯಕತ್ವದ ರಾಜಸ್ಥಾನ ರಾಯಲ್ಸ್‌ 5ನೇ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಲು ಎದುರು ನೋಡುತ್ತಿದೆ.

ಇದು ಟೀಂ ಇಂಡಿಯಾದ ಪ್ರಮುಖ ಸ್ಪಿನ್‌ ಜೋಡಿ ಯಜುವೇಂದ್ರ ಚಹಲ್‌-ಕುಲ್ದೀಪ್‌ ಯಾದವ್‌ ನಡುವಿನ ಸ್ಪರ್ಧೆ ಎನಿಸಿಕೊಂಡಿದೆ. ರಾಜಸ್ಥಾರ ರಾಯಲ್ಸ್‌ ಪರ ಆಡುತ್ತಿರುವ ಚಹಲ್‌ 6 ಪಂದ್ಯಗಳಲ್ಲಿ 17 ವಿಕೆಟ್‌ ಕಿತ್ತು ವಿಕೆಟ್‌ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಡೆಲ್ಲಿಯ ಕುಲ್ದೀಪ್‌ ಯಾದವ್ 6 ಪಂದ್ಯಗಳಲ್ಲಿ 13 ವಿಕೆಟ್‌ ಎಗರಿಸಿದ್ದಾರೆ. ಉಭಯ ತಂಡಗಳೂ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿದ್ದು, ಈ ಇಬ್ಬರೂ ಎದುರಾಳಿ ಬ್ಯಾಟರ್‌ಗಳಿಗೆ ಸವಾಲೆಸೆಯಲಿದ್ದಾರೆ.

Latest Videos

6 ಪಂದ್ಯಗಳಲ್ಲಿ 375 ರನ್‌ ಸಿಡಿಸಿರುವ ಜೋಸ್‌ ಬಟ್ಲರ್‌ (Jos Buttler) ರಾಜಸ್ಥಾನದ ಬ್ಯಾಟಿಂಗ್‌ ಆಧಾರಸ್ತಂಭ. ಸಂಜು ಸ್ಯಾಮ್ಸನ್‌, ದೇವದತ್ ಪಡಿಕ್ಕಲ್‌, ಶಿಮ್ರೋನ್‌ ಹೆಟ್ಮೇಯರ್‌ ಕೂಡಾ ಅಪಾಯಕಾರಿಯಾಗಿ ತೋರುತ್ತಿದ್ದಾರೆ. ರವಿಚಂದ್ರನ್ ಅಶ್ವಿನ್‌, ಪ್ರಸಿದ್ಧ್  ಕೃಷ್ಣ, ಟ್ರೆಂಟ್‌ ಬೌಲ್ಟ್‌ಗೆ ಡೆಲ್ಲಿಯ ಡೇವಿಡ್‌ ವಾರ್ನರ್‌-ಪೃಥ್ವಿ ಶಾ ಸ್ಫೋಟಕ ಆಟವನ್ನು ಕಟ್ಟಿಹಾಕುವ ಸವಾಲು ಎದುರಾಗಲಿದೆ. ನಾಯಕ ರಿಷಭ್‌ ಪಂತ್‌, ಸರ್ಫರಾಜ್‌ ಖಾನ್‌ ಕೂಡಾ ಅಬ್ಬರಿಸಲು ಕಾಯುತ್ತಿದ್ದಾರೆ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಗ್ರ ಕ್ರಮಾಂಕದಲ್ಲಿ ಡೇವಿಡ್‌ ವಾರ್ನರ್ ಹಾಗೂ ಪೃಥ್ವಿ ಶಾ ಸ್ಪೋಟಕ ಆರಂಭವನ್ನು ಒದಗಿಸಿಕೊಡುತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ರಿಷಭ್ ಪಂತ್, ಸರ್ಫರಾಜ್ ಖಾನ್, ಲಲಿತ್ ಯಾದವ್ ಜವಾಬ್ದಾರಿಯುತ ಪ್ರದರ್ಶನ ತೋರಿದರೆ, ಬಲಿಷ್ಠ ರಾಜಸ್ಥಾನ ರಾಯಲ್ಸ್ ಎದುರು ಪ್ರಾಬಲ್ಯ ಮೆರೆಯಬಹುದು.

IPL 2022 ಕೊನೇ 4 ಎಸೆತಗಳಲ್ಲಿ 16 ರನ್ ಸಿಡಿಸಿ ಚೆನ್ನೈಗೆ ಗೆಲುವು ತಂದ ಧೋನಿ!

ಐಪಿಎಲ್‌ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಒಟ್ಟು 24 ಬಾರಿ ಮುಖಾಮುಖಿಯಾಗಿದ್ದು, ಉಭಯ ತಂಡಗಳು ಸಮಾನ ಪೈಪೋಟಿ ನಡೆಸಿವೆ. 24 ಪಂದ್ಯಗಳ ಪೈಕಿ ರಾಜಸ್ಥಾನ ರಾಯಲ್ಸ್‌ ತಂಡವು 12 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಾ 12 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ: ಪೃಥ್ವಿ ಶಾ, ಡೇವಿಡ್ ವಾರ್ನರ್‌, ಸರ್ಫರಾಜ್ ಖಾನ್‌, ರಿಷಭ್‌ ಪಂತ್‌(ನಾಯಕ), ಲಲಿತ್ ಯಾದವ್‌, ರೋಮನ್ ಪೋವೆಲ್‌, ಶಾರ್ದೂಲ್‌ ಠಾಕೂರ್, ಅಕ್ಷರ್ ಪಟೇಲ್‌, ಕುಲ್ದೀಪ್ ಯಾದವ್‌, ಖಲೀಲ್ ಅಹಮ್ಮದ್‌, ಮುಸ್ತಾಫಿಜುರ್‌ ರೆಹಮಾನ್.

ರಾಜಸ್ಥಾನ: ಜೋಸ್ ಬಟ್ಲರ್‌, ದೇವದತ್ ಪಡಿಕ್ಕಲ್‌, ಸಂಜು ಸ್ಯಾಮ್ಸನ್‌(ನಾಯಕ), ಶಿಮ್ರೊನ್ ಹೆಟ್ಮೇಯರ್‌, ಕರುಣ್ ನಾಯರ್‌, ರಿಯಾನ್‌ ಪರಾಗ್, ರವಿಚಂದ್ರನ್ ಅಶ್ವಿನ್‌, ಟ್ರೆಂಟ್ ಬೌಲ್ಟ್‌, ಮೆಕಾಯ್‌, ಪ್ರಸಿದ್ಧ್ ಕೃಷ್ಣ, ಯುಜುವೇಂದ್ರ ಚಹಲ್‌.

ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

click me!