* ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಇನ್ನಿಲ್ಲದಂತೆ ಕಾಡುತ್ತಿದೆ ಕೋವಿಡ್ 19
* ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಟಿಮ್ ಸೀಫರ್ಟ್‌ಗೂ ಕೋವಿಡ್ ದೃಢ
* ಇದೆಲ್ಲದರ ಹೊರತಾಗಿಯೂ ಪಂಜಾಬ್ ಕಿಂಗ್ಸ್ ಎದುರು ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್
ಮುಂಬೈ(ಏ.21): 15ನೇ ಆವೃತ್ತಿಯ ಐಪಿಎಲ್‌ಗೆ ಕೊರೋನಾ ಸೋಂಕಿನ (Covid 19) ಕಾಟ ಹೆಚ್ಚಾಗುತ್ತಿದೆ. ಬುಧವಾರ ನಡೆಸಿದ ಕೋವಿಡ್ ಪರೀಕ್ಷೆ (COVID Test) ವೇಳೆ ನ್ಯೂಜಿಲೆಂಡ್‌ನ ವಿಕೆಟ್ ಕೀಪರ್ ಬ್ಯಾಟರ್ ಟಿಮ್ ಸೀಫರ್ಚ್‌ಗೆ (Tim Seifert tests positive for Covid 19) ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಡೆಲ್ಲಿ ತಂಡದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಆರಕ್ಕೇರಿದೆ. ಟಿಮ್ ಸೀಫರ್ಚ್‌ಗೆ ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ಡೆಲ್ಲಿ ತಂಡದ ಆಟಗಾರರಿಗೆ ತಮ್ಮ ತಮ್ಮ ಕೊಠಡಿಗಳಲ್ಲೇ ಇರುವಂತೆ ಸೂಚಿಸಲಾಗಿತ್ತು. ಆ ಬಳಿಕ ಮತ್ತೊಮ್ಮೆ ಕೋವಿಡ್ ಪರೀಕ್ಷೆ ನಡೆಸಿ ಎಲ್ಲರ ವರದಿ ನೆಗೆಟಿವ್ ಬಂದ ಮೇಲೆಯೇ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ತಂಡಕ್ಕೆ ಪಾಲ್ಗೊಳ್ಳಲು ಅವಕಾಶ ನೀಡಲಾಯಿತು. ಡೆಲ್ಲಿ ತಂಡ ಪಂದ್ಯ ಆರಂಭಕ್ಕೆ ಕೆಲವೇ ನಿಮಿಷ ಬಾಕಿ ಇರುವಂತೆ ಕ್ರೀಡಾಂಗಣಕ್ಕೆ ತಲುಪಿ, ಪಂಜಾಬ್ ವಿರುದ್ಧ ಉತ್ತಮ ಆಟ ಪ್ರದರ್ಶಿಸಿತು.
ಡೆಲ್ಲಿ ಕ್ಯಾಪಿಟಲ್ಸ್ - ರಾಜಸ್ಥಾನ ರಾಯಲ್ಸ್ ಪಂದ್ಯ ಸ್ಥಳಾಂತರ: ಏಪ್ರಿಲ್ 22ರ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) - ರಾಜಸ್ಥಾನ ರಾಯಲ್ಸ್ ಪಂದ್ಯ ಪುಣೆ ಬದಲು ಮುಂಬೈನ ವಾಂಖೇಡೆ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಮುಂಬೈನಿಂದ ಪುಣೆಗೆ ಬಸ್ ಪ್ರಯಾಣದ ವೇಳೆ ಕೋವಿಡ್ ಮತ್ತಷ್ಟು ಮಂದಿಗೆ ಹರಡುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
undefined
ಕೋವಿಡ್ ಭೀತಿ ನಡುವೆಯೂ ಡೆಲ್ಲಿ ಅಬ್ಬರ!
ಮುಂಬೈ: ಪಂದ್ಯದ ದಿನ ಬೆಳಗ್ಗೆ ತಂಡದಲ್ಲಿ ಮತ್ತೊಂದು ಕೋವಿಡ್ ಪ್ರಕರಣ. ಸಂಜೆ ವರೆಗೂ ಹೋಟೆಲ್ ಕೊಠಡಿಯಲ್ಲೇ ಬಂಧಿ. ಒಂದೇ ದಿನ ಎರಡೆರೆಡು ಬಾರಿ ಕೋವಿಡ್ ಪರೀಕ್ಷೆ, ಪಂದ್ಯ ನಡೆಯುತ್ತೋ ಇಲ್ಲವೋ ಎನ್ನುವ ಗೊಂದಲ. ಹೀಗೆ ಹಲವು ಸವಾಲು, ಆತಂಕದ ನಡುವೆಯೂ ಡೆಲ್ಲಿ ಕ್ಯಾಪಿಟಲ್ಸ್ ಬುಧವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿದೆ. ರಿಷಭ್ ಪಂತ್ ಪಡೆಯ ಆಲ್ರೌಂಡ್ ಆಟಕ್ಕೆ ನಲುಗಿದ ಪಂಜಾಬ್ 9 ವಿಕೆಟ್‌ಗಳ ಸೋಲಿಗೆ ಶರಣಾಗಿದೆ. ಮೊದಲು ಪಂಜಾಬ್ ತಂಡವನ್ನು 115 ರನ್‌ಗೆ ನಿಯಂತ್ರಿಸಿದ ಡೆಲ್ಲಿ, ಆ ಬಳಿಕ ಸಣ್ಣ ಗುರಿಯನ್ನು ಕೇವಲ 10.3 ಓವರಲ್ಲಿ ತಲುಪಿ, ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರುವ ಜೊತೆಗೆ ತನ್ನ ನೆಟ್ ರನ್‌ರೇಟ್ ಅನ್ನು ಉತ್ತಮಗೊಳಿಸಿಕೊಂಡಿತು.
ವಾರ್ನರ್-ಶಾ ಶೋ: ಸಣ್ಣ ಗುರಿ ಬೆನ್ನುತ್ತುವಾಗ ತಂಡಗಳು ಎಡವಿದ ಅನೇಕ ಉದಾಹರಣೆಗಳಿವೆ. ಆದರೆ ಡೆಲ್ಲಿ ತಂಡ ಅದಕ್ಕೆ ಅವಕಾಶ ನೀಡಲಿಲ್ಲ. ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಪವರ್-ಪ್ಲೇನಲ್ಲಿ 81 ರನ್ ಚಚ್ಚಿದರು. 20 ಎಸೆತದಲ್ಲಿ 7 ಬೌಂಡರಿ, 1 ಸಿಕ್ಸರ್‌ನೊಂದಿಗೆ 41 ರನ್ ಸಿಡಿಸಿ ಶಾ ಔಟಾದರು. ಆದರೆ ವಾರ್ನರ್ ಅಬ್ಬರ ನಿಲ್ಲಲಿಲ್ಲ. 30 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್‌ನೊಂದಿಗೆ 60 ರನ್ ಸಿಡಿಸಿ ಔಟಾಗದೆ ಉಳಿದರು. ಐಪಿಎಲ್‌ನಲ್ಲಿ 53ನೇ ಅರ್ಧಶತಕ ದಾಖಲಿಸಿದರು. ಡೆಲ್ಲಿ ಇನ್ನಿಂಗ್ಸಲ್ಲಿ ಒಟ್ಟು 18 ಬೌಂಡರಿ, 2 ಸಿಕ್ಸರ್‌ಗಳಿದ್ದವು.
IPL 2022 ವಾರ್ನರ್, ಪೃಥ್ವಿ ಶಾ ಸ್ಪೋಟಕ ಆಟಕ್ಕೆ ಸೋತ ಪಂಜಾಬ್ ಕಿಂಗ್ಸ್!
ಸ್ಪಿನ್‌ಗೆ ಬಿದ್ದ ಕಿಂಗ್ಸ್: ಮೊದಲು ಬ್ಯಾಟ್ ಮಾಡಿದ ಪಂಜಾಬ್, ಡೆಲ್ಲಿ ಸ್ಪಿನ್ನರ್‌ಗಳ ದಾಳಿಗೆ ಕುಸಿಯಿತು. ಡೆಲ್ಲಿ ಸ್ಪಿನ್ನರ್‌ಗಳು ಒಟ್ಟು 10 ಓವರಲ್ಲಿ ಕೇವಲ 45 ರನ್ ನೀಡಿ 6 ವಿಕೆಟ್ ಕಬಳಿಸಿದ್ದು, ಪಂಜಾಬ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಕುಲ್ದೀಪ್, ಅಕ್ಷರ್ ಹಾಗೂ ಲಲಿತ್ ತಲಾ 2 ವಿಕೆಟ್ ಕಬಳಿಸಿದರು. ಪಂಜಾಬ್ ಪರ ಜಿತೇಶ್ ಶರ್ಮಾ 32, ಮಯಾಂಕ್ ಅಗರ್‌ವಾಲ್ 24, ಶಾರುಖ್ ಖಾನ್ ಹಾಗೂ ರಾಹುಲ್ ಚಹರ್ ತಲಾ 12 ರನ್ ಗಳಿಸಿ ತಂಡದ ಮೊತ್ತವನ್ನು 100 ರನ್ ದಾಟಿಸಿದರು. 115 ರನ್ ಈ ಆವೃತ್ತಿಯಲ್ಲಿ ತಂಡವೊಂದರಿಂದ ದಾಖಲಾದ ಕನಿಷ್ಠ ಮೊತ್ತ.