IPL 2022: ಶತಕವಿಲ್ಲದೆ 100 ಪಂದ್ಯ ಪೂರೈಸಿದ ವಿರಾಟ್‌ ಕೊಹ್ಲಿ..!

Published : Apr 21, 2022, 08:22 AM IST
IPL 2022: ಶತಕವಿಲ್ಲದೆ 100 ಪಂದ್ಯ ಪೂರೈಸಿದ ವಿರಾಟ್‌ ಕೊಹ್ಲಿ..!

ಸಾರಾಂಶ

* ಐಪಿಎಲ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ ವಿರಾಟ್ ಕೊಹ್ಲಿ * 2019ರಿಂದೀಚೆಗೆ ಕೊಹ್ಲಿ ಬ್ಯಾಟಿಂದ ಬಂದಿಲ್ಲ ಒಂದೇ ಒಂದು ಶತಕ * ಒಟ್ಟಾರೆ ನೂರು ಇನಿಂಗ್ಸ್ ಆಡಿಯೂ ಒಮ್ಮೆಯೂ ಮೂರಂಕಿ ಮೊತ್ತ ದಾಖಲಿಸದ ಕಿಂಗ್ ಕೊಹ್ಲಿ

ಮುಂಬೈ(ಏ.21): ಟೀಂ ಇಂಡಿಯಾ (Team India) ಹಾಗೂ ಆರ್‌ಸಿಬಿ (RCB) ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಎದುರಿಸುತ್ತಿರುವ ಶತಕದ ಬರ ಮುಂದುವರಿದಿದ್ದು, ಮಂಗಳವಾರ ಅವರು ಶತಕವಿಲ್ಲದೆ 100 ಸ್ಪರ್ಧಾತ್ಮಕ ಪಂದ್ಯಗಳನ್ನು ಪೂರೈಸಿದ್ದಾರೆ. 2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆ ಬಾರಿ ಶತಕ ಸಿಡಿಸಿದ್ದ ಕೊಹ್ಲಿ, ಆ ಬಳಿಕ 17 ಟೆಸ್ಟ್‌, 21 ಏಕದಿನ, 25 ಅಂತರರಾಷ್ಟ್ರೀಯ ಟಿ20 ಹಾಗೂ 37 ಐಪಿಎಲ್‌ ಪಂದ್ಯಗಳಲ್ಲಿ ಶತಕ ಗಳಿಸಲು ವಿಫಲರಾಗಿದ್ದಾರೆ. 

ಈ ಬಾರಿ ಐಪಿಎಲ್‌ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 19.83ರ ಸರಾಸರಿಯಲ್ಲಿ ಕೇವಲ 119 ರನ್‌ ಗಳಿಸಿದ್ದಾರೆ. ಲಖನೌ ಸೂಪರ್ ಜೈಂಟ್ಸ್‌ (Lucknow Super Giants) ವಿರುದ್ದದ ಪಂದ್ಯದಲ್ಲಿ ದುಸ್ಮಂತಾ ಚಮೀರಾ ಬೌಲಿಂಗ್‌ನಲ್ಲಿ ಕೊಹ್ಲಿ ತಾವೆದುರಿಸಿದ ಮೊದಲ ಎಸೆತದಲ್ಲೇ ದೀಪಕ್ ಹೂಡಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದರು. ಅನೂಜ್ ರಾವತ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದಿದ್ದ ವಿರಾಟ್ ಕೊಹ್ಲಿ, ವಿಕೆಟ್‌ನಿಂದ ಹೊರಹೋಗುತ್ತಿದ್ದ ಚೆಂಡನ್ನು ಕೆಣಕಲು ಹೋಗಿ ಕೈಸುಟ್ಟುಕೊಂಡಿದ್ದರು. 100 ಸ್ಪರ್ಧಾತ್ಮಕ ಇನಿಂಗ್ಸ್‌ಗಳನ್ನಾಡಿಯೂ ಕೊಹ್ಲಿ ಒಮ್ಮೆಯೂ ಮೂರಂಕಿ ಮೊತ್ತ ದಾಖಲಿಸದೇ ಇರುವುದು ಕೊಹ್ಲಿ ಅಭಿಮಾನಿಗಳಲ್ಲಿ ನಿರಾಸೆಯನ್ನುಂಟು ಮಾಡಿದೆ. ಮಾಜಿ ನಂ.1 ಆಟಗಾರ ಇದೀಗ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಬಾರಿಯ ಐಪಿಎಲ್ (IPL 2022) ಟೂರ್ನಿಯಲ್ಲಿಯಾದರೂ ವಿರಾಟ್ ಕೊಹ್ಲಿ ದೊಡ್ಡ ಇನಿಂಗ್ಸ್ ಕಟ್ಟಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ನಾಯಕತ್ವದ ಒತ್ತಡವಿಲ್ಲದೇ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ, ಉತ್ತಮ ಆರಂಭ ಪಡೆಯಲು ವಿಫಲರಾಗುತ್ತಿದ್ದಾರೆ.

ವಿರಾಟ್ ಕೊಹ್ಲಿ 2020 ಹಾಗೂ 2021ರ ಐಪಿಎಲ್ ಆವೃತ್ತಿಗಳಲ್ಲಿ 400+ ರನ್ ಬಾರಿಸುವಲ್ಲಿ ಯಶಸ್ವಿಯಾಗಿದ್ದರು. 2020ರ ಐಪಿಎಲ್‌ನಲ್ಲಿ ಕೊಹ್ಲಿ 15 ಪಂದ್ಯಗಳನ್ನಾಡಿ 42.36ರ ಬ್ಯಾಟಿಂಗ್ ಸರಾಸರಿಯಲ್ಲಿ 466 ರನ್ ಬಾರಿಸಿದ್ದರು. ಇನ್ನು 2021ರ ಐಪಿಎಲ್‌ನಲ್ಲಿ 12 ಪಂದ್ಯಗಳನ್ನಾಡಿ 28.92ರ ಬ್ಯಾಟಿಂಗ್‌ ಸರಾಸರಿಯಲ್ಲಿ 3 ಅರ್ಧಶತಕ ಸಹಿತ 405 ರನ್‌ ಗಳಿಸಿದ್ದರು. ಇನ್ನು ಐಪಿಎಲ್‌ನಲ್ಲಿ ಕೊನೆಯದಾಗಿ 2019ರಲ್ಲಿ ಶತಕ ಬಾರಿಸಿದ್ದರು. ಈ ಮೂಲಕ ಐಪಿಎಲ್‌ನಲ್ಲಿ ಕೊಹ್ಲಿ ಹೆಸರಿನಲ್ಲಿ 5 ಶತಕಗಳಿದ್ದು, ಐಪಿಎಲ್‌ನಲ್ಲಿ ಗರಿಷ್ಠ ಶತಕ ಬಾರಿಸಿದವರ ಪಟ್ಟಿಯಲ್ಲಿ ವಿರಾಟ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಯೂನಿವರ್ಸೆಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ (Chris Gayle) ಐಪಿಎಲ್‌ನಲ್ಲಿ 6 ಶತಕ ಸಿಡಿಸಿದ್ದಾರೆ.

IPL 2022: ವಿರಾಟ್ ಕೊಹ್ಲಿ ಕೊಂಚ ಬ್ರೇಕ್ ತೆಗೆದುಕೊಳ್ಳಲಿ: ರವಿಶಾಸ್ತ್ರಿ ಕಿವಿಮಾತು..!

ಇನ್ನು 2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ದದ ಡೇ ಅಂಡ್ ನೈಟ್ ಟೆಸ್ಟ್ (Day and Night Test) ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೊನೆಯದಾಗಿ ಟೆಸ್ಟ್ ಶತಕ ಬಾರಿಸಿದ್ದರು. ಇದಾದ ಬಳಿಕ 17 ಟೆಸ್ಟ್ ಪಂದ್ಯಗಳನ್ನಾಡಿ 841 ರನ್ ಬಾರಿಸಿದ್ದಾರೆ. ಇನ್ನು 21 ಏಕದಿನ ಪಂದ್ಯಗಳಿಂದ ಕೊಹ್ಲಿ 37.66ರ ಬ್ಯಾಟಿಂಗ್ ಸರಾಸರಿಯಲ್ಲಿ 791 ರನ್ ಗಳಿಸಿದ್ದಾರೆ. 2019ರಿಂದೀಚೆಗೆ ಕೊಹ್ಲಿ 10 ಅರ್ಧಶತಕ ಸಿಡಿಸಿದ್ದಾರೆ.

ಇನ್ನು, ಕೊಹ್ಲಿ ಕಳಪೆ ಆಟದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಕೋಚ್‌ ರವಿಶಾಸ್ತ್ರಿ (Ravi Shastri), ಕೊಹ್ಲಿಗೆ ವಿಶ್ರಾಂತಿ ಅಗತ್ಯವಿದೆ. ಕ್ರಿಕೆಟ್‌ನಿಂದ ಅವರು ಕೆಲ ದಿನ ದೂರ ಇರುವುದು ಒಳ್ಳೆಯದು. ಅವರಲ್ಲಿ 6-7 ವರ್ಷಗಳ ಆಟ ಬಾಕಿ ಇದೆ. ಅದನ್ನು ಕಳೆದುಕೊಳ್ಳಬಾರದು ಎಂದಿದ್ದಾರೆ. ಇಂಗ್ಲೆಂಡ್‌ ಮಾಜಿ ನಾಯಕ ಕೆವಿನ್‌ ಪೀಟರ್ಸನ್‌ ಕೂಡಾ ಕೊಹ್ಲಿಗೆ ವಿಶ್ರಾಂತಿ ಪಡೆದುಕೊಳ್ಳಲು ಸೂಚಿಸಿದ್ದು, ಸಾಮಾಜಿಕ ತಾಣದಿಂದಲೂ ಕೆಲ ಸಮಯ ದೂರ ಉಳಿಯುವಂತೆ ಮನವಿ ಮಾಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ