IPL 2022: ಗುಜರಾತ್ ಟೈಟಾನ್ಸ್ ಯಶಸ್ಸಿನ ಸೀಕ್ರೇಟ್ ಬಿಚ್ಚಿಟ್ಟ ನಾಯಕ ಹಾರ್ದಿಕ್ ಪಾಂಡ್ಯ..!

By Naveen Kodase  |  First Published May 1, 2022, 1:47 PM IST

* ಯಶಸ್ಸಿನ ಮೇಲೆ ಯಶಸ್ಸು ಗಳಿಸುತ್ತಿದೆ ಗುಜರಾತ್ ಟೈಟಾನ್ಸ್

* ಆರ್‌ಸಿಬಿ ಎದುರು 6 ವಿಕೆಟ್‌ಗಳ ಗೆಲುವು ದಾಖಲಿಸಿದ ಹಾರ್ದಿಕ್ ಪಾಂಡ್ಯ ಪಡೆ

* ಗುಜರಾತ್ ಯಶಸ್ಸಿನ ಸೀಕ್ರೇಟ್ ಬಿಚ್ಚಿಟ್ಟ ಹಾರ್ದಿಕ್ ಪಾಂಡ್ಯ


ಮುಂಬೈ(ಮೇ.01): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟಾನ್ಸ್ (Gujarat Titans) ತಂಡವು ಅಮೋಘ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಇದುವರೆಗೂ ಆಡಿದ 9 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಇನ್ನೊಂದು ಗೆಲುವು ಗುಜರಾತ್ ಟೈಟಾನ್ಸ್ ತಂಡಕ್ಕೆ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಲಿದೆ. ಆರ್‌ಸಿಬಿ (RCB) ಎದುರು 6 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ತಮ್ಮ ತಂಡದ ಯಶಸ್ಸಿನ ಸೀಕ್ರೇಟ್ಸ್‌ ಏನು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.

ನಮ್ಮ ತಂಡದಲ್ಲಿ ಯಾವುದೇ ಶ್ರೇಣಿ ವ್ಯವಸ್ಥೆ ಎನ್ನುವುದು ಇಲ್ಲ. ಎಲ್ಲರನ್ನು ಸಮಾನವಾಗಿ ಕಾಣಲಾಗುತ್ತದೆ. ಈ ಕಾರಣಕ್ಕಾಗಿಯೇ ನಮ್ಮ ತಂಡವು ಟೂರ್ನಿಯಲ್ಲಿ ಯಶಸ್ಸು ಕಾಣುತ್ತಿದೆ ಎಂದು ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾರ್ದಿಕ್‌ ಪಾಂಡ್ಯ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದರು. ಇದರ ಬೆನ್ನಲ್ಲೇ ಹಾರ್ದಿಕ್‌ ಪಾಂಡ್ಯಗೆ ಸೊಂಟ ನೋವು ಕೂಡಾ ಕಾಣಿಸಿಕೊಂಡಿತ್ತು. ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯರನ್ನು ರೀಟೈನ್ ಮಾಡಿಕೊಳ್ಳಲು ಹಿಂದೇಟು ಹಾಕಿತ್ತು. ಇದೆಲ್ಲದರ ನಡುವೆ ನೂತನ ಐಪಿಎಲ್ ಫ್ರಾಂಚೈಸಿಯಾದ ಗುಜರಾತ್ ಟೈಟಾನ್ಸ್‌, ಹಾರ್ದಿಕ್ ಪಾಂಡ್ಯ ಅವರನ್ನು ತನ್ನ ತಂಡದ ನಾಯಕರನ್ನಾಗಿ ನೇಮಕ ಮಾಡಿಕೊಂಡಿತ್ತು.  

Tap to resize

Latest Videos

ಇದುವರೆಗೂ ಕೇವಲ ಆಲ್ರೌಂಡರ್ ಎನಿಸಿಕೊಂಡಿದ್ದ ಹಾರ್ದಿಕ್‌ ಪಾಂಡ್ಯ, ಮೊದಲ ಬಾರಿಗೆ ಐಪಿಎಲ್‌ನಲ್ಲಿ ನಾಯಕನಾಗಿ ಕಣಕ್ಕಿಳಿದು ಇಲ್ಲಿಯವರೆಗೆ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಗುಜರಾತ್ ಟೈಟಾನ್ಸ್ ತಂಡವು 6 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸುವ ಮೂಲಕ ಬಹುತೇಕ ತನ್ನ ಪ್ಲೇ ಆಫ್ ಹಾದಿಯನ್ನು ಖಚಿತಪಡಿಸಿಕೊಂಡಿದೆ. ಆರ್‌ಸಿಬಿ ಎದುರು ಗೆಲುವು ದಾಖಲಿಸುತ್ತಿದ್ದಂತೆಯೇ ಹಾರ್ದಿಕ್‌ ಪಾಂಡ್ಯ, ಗುಜರಾತ್ ಟೈಟಾನ್ಸ್ ತಂಡದ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

IPL 2022: ಆರ್‌ಸಿಬಿಗೆ ಹ್ಯಾಟ್ರಿಕ್, ಟೈಟಾನ್ಸ್‌ ಪ್ಲೇ ಆಫ್‌ ಹಾದಿ ಸುಗಮ

ಒಬ್ಬ ವ್ಯಕ್ತಿಯಾಗಿ, ಕೇವಲ ನಾನೊಬ್ಬನೇ ಬೆಳೆಯಲು ಬಯಸುವುದಿಲ್ಲ. ನಾನು ಯಾವಾಗಲೂ ನನ್ನ ಜತೆಗಿರುವ ಸಹ ಆಟಗಾರರು ಅಥವಾ ನನ್ನ ಜತೆಗಿರುವ ಇತರ ವ್ಯಕ್ತಿಗಳು ಬೆಳೆಯುವುದನ್ನು ನಾನು ಇಷ್ಟಪಡುತ್ತೇನೆ. ಈ ಕಾರಣಕ್ಕಾಗಿಯೇ ಇಂದು ನಮ್ಮ ತಂಡವು ಯಶಸ್ಸು ಕಾಣುತ್ತಿದೆ. ಹೌದು, ಸಹಜವಾಗಿಯೇ ನಾನು ತಂಡದಲ್ಲಿ ನಾಯಕನಾಗಿರಬಹುದು. ಆದರೆ ನಮ್ಮ ತಂಡದಲ್ಲಿ ಯಾವುದೇ ಮೇಲು-ಕೀಳು ಎನ್ನುವುದಿಲ್ಲ, ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ನಾವೆಲ್ಲರೂ ಒಂದೇ ಹಾದಿಯಲ್ಲಿ ಸಾಗುತ್ತಿದ್ದೇವೆ. ನಮ್ಮ ತಂಡವು ಒಬ್ಬರು ಎಲ್ಲರಿಗಾಗಿ, ಎಲ್ಲರೂ ಒಬ್ಬರಿಗಾಗಿ ಎನ್ನುವ ತತ್ವವನ್ನು ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗುತ್ತಿವೆ. ನಮ್ಮ ತಂಡದ ಸದಸ್ಯರು, ನಾವು ನಾಯಕನಷ್ಟೇ ಮಹತ್ವದ ವ್ಯಕ್ತಿ ಎನ್ನುವ ಭಾವನೆ ಹೊಂದಿದ್ದಾರೆ. ನಾಯಕನಾಗಿ ಈ ಹೊಸ ಸವಾಲನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ. ನಮ್ಮ ತಂಡದಲ್ಲಿ ಸಾಕಷ್ಟು ಅದ್ಭುತ ಆಟಗಾರರಿದ್ದಾರೆ. ಒಳ್ಳೆಯ ಆಟಕ್ಕೆ ಫಲಿತಾಂಶ ಕೂಡಾ ನಮ್ಮದಾಗುತ್ತಿದೆ. ಇದಕ್ಕಿಂತ ಉತ್ತಮ ಆರಂಭ ಇನ್ನೇನು ಬೇಕು ಹೇಳಿ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಗುಜರಾತ್ ಟೈಟಾನ್ಸ್‌ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಮೇ 03ರಂದು ನಡೆಯಲಿರುವ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಮುಂಬೈನ ಡಿವೈ ಪಾಟೀಲ್ ಮೈದಾನ ಸಾಕ್ಷಿಯಾಗಲಿದೆ.

click me!