
ಮುಂಬೈ(ಮೇ.01): 15ನೇ ಆವೃತ್ತಿಯ ಐಪಿಎಲ್‌ನಲ್ಲಿ (Indian Premier League) ಗೆಲುವಿನ ಓಟ ಮುಂದುವರಿಸುವ ಕಾತರದಲ್ಲಿರುವ ಲಖನೌ ಸೂಪರ್ ಜೈಂಟ್ಸ್ (Lucknow Super Giants) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡಗಳು ಭಾನುವಾರ ಪರಸ್ಪರ ಮುಖಾಮುಖಿಯಾಗಲಿವೆ. ಕೆ.ಎಲ್.ರಾಹುಲ್ (KL Rahul) ನಾಯಕತ್ವದ ಲಖನೌ 9 ಪಂದ್ಯಗಲ್ಲಿ 6ರಲ್ಲಿ ಗೆದ್ದಿದ್ದು, ಮತ್ತೊಂದು ಗೆಲುವು ತಂಡವನ್ನು ಪ್ಲೇ-ಆಫ್‌ಗೆ ಮತ್ತಷ್ಟು ಹತ್ತಿರವಾಗಿಸಲಿದೆ.
ತಜ್ಞ ಬ್ಯಾಟರ್‌ಗಳಿಲ್ಲದೇ ಆಲ್ರೌಂಡರ್‌ಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್ (Kuldeep Yadav) ಸೇರಿದಂತೆ ಡೆಲ್ಲಿಯ ಅನುಭವಿ ಬೌಲರ್‌ಗಳ ಸವಾಲು ಎದುರಾಗಲಿದೆ. ಆರಂಭಿಕ ಮುಖಾಮುಖಿಯಲ್ಲಿ ಗೆದ್ದಿರುವ ತಂಡ 2ನೇ ಗೆಲುವಿನ ನಿರೀಕ್ಷೆಯಲ್ಲಿದೆ. ಇನ್ನು ಕಳೆದ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ (Quinton de Kock) ಫಾರ್ಮ್‌ಗೆ ಮರಳಿದ್ದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್ ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚುತ್ತಿದ್ದಾರೆ.
ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಅಸ್ಥಿರ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದು, 8 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಗೆದ್ದಿದೆ. ಪ್ಲೇ-ಆಫ್ ಕಾತರದಲ್ಲಿರುವ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ರಸಕ್ತ ಅವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಿತ್ತು. ಇದಾದ ಬಳಿಕ ಸತತ ಎರಡು ಸೋಲು ಕಂಡಿತ್ತು. ಇದಾದ ಬಳಿಕ ಗೆಲುವು, ಸೋಲು, ಗೆಲುವು, ಸೋಲು ಹೀಗೆ ಅಸ್ಥಿರ ಪ್ರದರ್ಶನ ನೀಡಿದ್ದು, ಇಂದು ಬಲಿಷ್ಠ ಲಖನೌ ಸವಾಲು ಸ್ವೀಕರಿಸಲು ಸಜ್ಜಾಗಿದೆ.
IPL 2022 ಸತತ 8 ಸೋಲು ಕಂಡು ಕಂಗಾಲಾಗಿದ್ದ ಮುಂಬೈ ತಂಡಕ್ಕೆ ಗೆಲುವಿನ ಸಿಂಚನ!
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗೆಲುವು ದಾಖಲಿಸಬೇಕಿದ್ದರೆ ಅಗ್ರಕ್ರಮಾಂಕದಲ್ಲಿ ಡೇವಿಡ್ ವಾರ್ನರ್ ಹಾಗೂ ಪೃಥ್ವಿ ಶಾ ಉತ್ತಮ ಆರಂಭ ಒದಗಿಸಿಕೊಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್, ರೋಮನ್ ಪೊವೆಲ್ ಸ್ಪೋಟಕ ಬ್ಯಾಟಿಂಗ್ ನಡೆಸಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಹೆಚ್ಚಾಗಿ ಕುಲ್ದೀಪ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ಅವರನ್ನು ನೆಚ್ಚಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇದುವರೆಗೂ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ನಾಲ್ಕೂ ಪಂದ್ಯದಲ್ಲೂ ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕುಲ್ದೀಪ್ ಯಾದವ್ ಮಿಂಚಿದರೆ ಮಾತ್ರ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು ಎನ್ನುವಂತಾಗಿದೆ.
ಸಂಭಾವ್ಯ ತಂಡಗಳು ಹೀಗಿವೆ ನೋಡಿ
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ರಿಷಭ್ ಪಂತ್(ನಾಯಕ&ವಿಕೆಟ್ ಕೀಪರ್), ಲಲಿತ್ ಯಾದವ್, ರೋಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮುಷ್ತಾಫಿಜುರ್ ರೆಹಮಾನ್, ಚೇತನ್ ಸಕಾರಿಯಾ.
ಲಖನೌ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೆ ಎಲ್. ರಾಹುಲ್ (ನಾಯಕ), ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ಆಯುಷ್ ಬದೋನಿ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಮೋಯ್ಸಿನ್ ಖಾನ್, ಆವೇಶ್ ಖಾನ್, ರವಿ ಬಿಷ್ಣೋಯಿ.
ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ
ಮಧ್ಯಾಹ್ನ 3.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.