
ಮುಂಬೈ(ಮಾ.25): ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾವಾಗಿದ್ದು, ಮಾರ್ಚ್ 26ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಹಾಲಿ ಐಪಿಎಲ್ ಚಾಂಪಿಯನ್ ಸೂಪರ್ ಕಿಂಗ್ಸ್ (Chennai Super Kings) ಹಾಗೂ ರನ್ನರ್ ಅಪ್ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡಗಳು ಕಣಕ್ಕಿಳಿಯುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಲಿವೆ. ಇದೆಲ್ಲದರ ನಡುವೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ.
ಇಂಗ್ಲೆಂಡ್‌ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಮೋಯಿನ್ ಅಲಿ ಅವರು ಭಾರತಕ್ಕೆ ಬರಲು ವೀಸಾ ಲಭಿಸಿದ್ದು, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ಆಡಲಿರುವ ಎರಡನೇ ಪಂದ್ಯದ ವೇಳೆಗೆ ಮೋಯಿನ್ ಅಲಿ ತಂಡದ ಆಯ್ಕೆಗೆ ಲಭ್ಯರಿರಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕಾಶಿ ವಿಶ್ವನಾಥನ್ ಸ್ಪಷ್ಟಪಡಿಸಿದ್ದಾರೆ. ಇಂಗ್ಲೆಂಡ್ ಆಲ್ರೌಂಡರ್ ಮೋಯಿನ್ ಅಲಿ(Moeen Ali), ಗುರುವಾರವೇ(ಮಾ.24) ಮುಂಬೈಗೆ ಬಂದಿಳಿದಿದ್ದರೂ ಸಹಾ, ಕೆಕೆಆರ್ ವಿರುದ್ದದ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯಲು ಮೋಯಿನ್ ಅಲಿಗೆ ಸಾಧ್ಯವಾಗುತ್ತಿಲ್ಲ. ಮೋಯಿನ್ ಅಲಿ ತಂಡ ಕೂಡಿಕೊಳ್ಳುವ ಮುನ್ನ ಮೂರು ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಿದೆ.
ಪಾಕಿಸ್ತಾನ ಮೂಲದ ಇಂಗ್ಲೆಂಡ್ ನಿವಾಸಿಯಾಗಿರುವ ಮೋಯಿನ್ ಅಲಿ ಭಾರತಕ್ಕೆ ವೀಸಾ ಪಡೆಯಲು ಕೊಂಚ ಅಡಚಣೆ ಎದುರಿಸಿದ್ದಾರೆ. ಮೋಯಿನ್ ಅಲಿ ಅಜ್ಜ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಉದ್ಯೋಗ ಅರಸಿ ಇಂಗ್ಲೆಂಡ್‌ಗೆ ವಲಸೆ ಹೋಗಿದ್ದರು. ಆದರೆ ಇಂಗ್ಲೆಂಡ್‌ನಲ್ಲಿ ಜನಿಸಿದ ಮೋಯಿನ್ ಅಲಿ, ಸುಲಲಿತವಾಗಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
4 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಬಗ್ಗುಬಡಿಯುವ ಮೂಲಕ ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು. ಇದೀಗ 15ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮತ್ತೊಮ್ಮೆ ಕೆಕೆಆರ್ ಹಾಗೂ ಸಿಎಸ್‌ಕೆ ತಂಡಗಳು ಸೆಣಸಾಡುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಮಾಡಲಿವೆ.
IPL 2022 ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ರವೀಂದ್ರ ಜಡೇಜಾಗೆ ನೀಡಿದ ಎಂಎಸ್ ಧೋನಿ!
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮಾರ್ಚ್ 31ರಂದು ಎರಡನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಮೋಯಿನ್ ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ಚಾಂಪಿಯನ್ ಅಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಕಾರಣಕ್ಕಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಐಪಿಎಲ್ ಆಟಗಾರರ ಮೆಗಾ ಹರಾಜಿಗೂ (IPL Mega Auction) ಮುನ್ನ ಮೋಯಿನ್ ಅಲಿ, ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ (Ravindra Jadeja) ಹಾಗೂ ಋತುರಾಜ್ ಗಾಯಕ್ವಾಡ್ ಅವರನ್ನು ರೀಟೈನ್ ಮಾಡಿಕೊಂಡಿತ್ತು.
14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಮೋಯಿನ್ ಅಲಿ ಒಟ್ಟು 15 ಇನಿಂಗ್ಸ್‌ಗಳಿಂದ 357 ರನ್ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ 6 ಮಹತ್ವದ ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇನ್ನುಳಿದಂತೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಮಹೇಂದ್ರ ಸಿಂಗ್ ಧೋನಿ (MS Dhoni) ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದು, ರವೀಂದ್ರ ಜಡೇಜಾ ಸಿಎಸ್‌ಕೆ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ರವೀಂದ್ರ ಜಡೇಜಾ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.