IPL 2022: ಟೂರ್ನಿ ಆರಂಭಕ್ಕೂ ಮುನ್ನ ಈ ಬಾರಿ ತಂಡಗಳ ಬಲಾಬಲ ಹೇಗಿದೆ?

By Naveen Kodase  |  First Published Mar 25, 2022, 11:40 AM IST

* 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭ

* ಮಾರ್ಚ್‌ 26ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭ

* 10 ತಂಡಗಳು ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಭಾಗಿ


ಬೆಂಗಳೂರು(ಮಾ.25) 2022ರ ಮೆಗಾ ಹರಾಜಿನಲ್ಲಿ ಎಲ್ಲಾ ಐಪಿಎಲ್ (IPL 2022) ತಂಡಗಳು ಬಹುತೇಕ ಹೊಸದಾಗಿ ತಂಡವನ್ನು ರಚಿಸಿಕೊಂಡಿವೆ. ಚೆನ್ನೈ, ಮುಂಬೈ ಮಾತ್ರ ತಮ್ಮಲ್ಲಿದ್ದ ಕೆಲ ಆಟಗಾರರನ್ನು ಮರಳಿ ಖರೀದಿಸುವಲ್ಲಿ ಯಶಸ್ವಿಯಾಗಿದ್ದವು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹಿಂದಿದ್ದ 8 ತಂಡಗಳ ಜತೆಗೆ ಲಖನೌ ಸೂಪರ್‌ ಜೈಂಟ್ಸ್‌ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಸೇರ್ಪಡೆಯಾಗಿದ್ದು, ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಐಪಿಎಲ್‌ ಟೂರ್ನಿ ಆರಂಭಕ್ಕೂ ಮುನ್ನ ತಂಡಗಳ ಬಲಾಬಲದ ವಿವರ ಇಲ್ಲಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌(Chennai Super Kings)

Tap to resize

Latest Videos

ಹಾಲಿ ಚಾಂಪಿಯನ್ ಸೂಪರ್ ಕಿಂಗ್ಸ್ ತಂಡವು ಧೋನಿ, ಜಡೇಜಾ, ಗಾಯಕ್ವಾಡ್ ಹಾಗೂ ಮೋಯಿನ್ ಅಲಿಯನ್ನು ಹರಾಜಿಗೂ ಮುನ್ನ ರೀಟೈನ್ ಮಾಡಿಕೊಂಡಿತ್ತು. ಇದಾದ ಬಳಿಕ ಹರಾಜಿನಲ್ಲಿ ರಾಬಿನ್ ಉತ್ತಪ್ಪ, ದೀಪಕ್ ಚಹರ್ ಸೇರಿದಂತೆ ತನ್ನ ಹಳೆ ತಂಡದ ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಋತುರಾಜ್ ಗಾಯಕ್ವಾಡ್ ಗಾಯದಿಂದ ಚೇತರಿಸಿಕೊಂಡಿದ್ದು, ಟಿ20 ಸ್ಪೆಷಲಿಸ್ಟ್‌ಗಳಾದ ಜಡೇಜಾ, ಬ್ರಾವೋ ಅವರಂತಹ ಆಟಗಾರರಿರುವುದು ತಂಡದ ಪ್ಲಸ್ ಪಾಯಿಂಟ್‌.

ದೌರ್ಬಲ್ಯ: ಗಾಯಾಳು ದೀಪಕ್‌ ಚಹರ್‌ ಅನುಪಸ್ಥಿತಿ, ಇಂಗ್ಲೆಂಡ್ ಆಲ್ರೌಂಡರ್ ಮೋಯಿನ್ ಅಲಿ ಆರಂಭಿಕ ಪಂದ್ಯಗಳಿಗೆ ಗೈರು ಹಾಗೂ ಅನುಭವಿ ಭಾರತೀಯ ವೇಗಿಗಳ ಕೊರತೆ ಚೆನ್ನೈ ತಂಡವನ್ನು ಕಾಡುವ ಸಾಧ್ಯತೆಯಿದೆ.

ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals)

ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಾ ಹರಾಜಿಗೂ ಮುನ್ನ ಪಂತ್, ಅಕ್ಷರ್, ನೋಕಿಯ ಹಾಗೂ ಪೃಥ್ವಿ ಶಾ ರನ್ನು ರೀಟೈನ್ ಮಾಡಿಕೊಂಡಿತ್ತು. ಇನ್ನು ಹರಾಜಿನಲ್ಲಿ ಡೇವಿಡ್ ವಾರ್ನರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇದಲ್ಲದೇ ರಿಷಭ್ ಪಂತ್ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ

ದೌರ್ಬಲ್ಯ: ಅಸ್ಥಿರ ಆಟಕ್ಕೆ ಹೆಸರುವಾಸಿಯಾಗಿರುವ ಶಾನ್‌ ಮಾರ್ಶ್‌, ಅನುಭವಿ ಸ್ಪಿನ್ನರ್‌ ಕೊರತೆ ಹಾಗೂ ಮಾರಕ ವೇಗಿ ಏನ್ರಿಚ್ ನೋಕಿಯ ಫಿಟ್ನೆಸ್ ಸಮಸ್ಯೆ ತಂಡವನ್ನು ಕಾಡುವ ಸಾಧ್ಯತೆಯಿದೆ

ಗುಜರಾತ್‌ ಟೈಟಾನ್ಸ್‌(Gujarat Titans)

ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವು ಮೇಲ್ನೋಟಕ್ಕೆ ಸಾಕಷ್ಟು ಬಲಿಷ್ಠವಾಗಿಯೇ ಗುರುತಿಸಿಕೊಂಡಿದೆ. ಶುಭ್‌ಮನ್ ಗಿಲ್‌, ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗ್ಯೂಸನ್ ಅವರಂತ ಟಿ20 ಸ್ಪೆಷಲಿಸ್ಟ್ ಆಟಗಾರರ ಬಲ ಗುಜರಾತ್ ತಂಡಕ್ಕಿದೆ.

ದೌರ್ಬಲ್ಯ: ಐಪಿಎಲ್ ನೂತನ ತಂಡವಾದ ಗುಜರಾತ್ ಟೈಟಾನ್ಸ್ ತಂಡವು ಅನನುಭವಿ ನಾಯಕ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಪಟ್ಟ ಕಟ್ಟಿರುವುದು ಹಿನ್ನಡೆಯಾಗುವ ಸಾಧ್ಯತೆಯಿದೆ. ಇದರ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಭರವಸೆ ಉಳಿಸಬಲ್ಲ ಆಟಗಾರರ ಕೊರತೆ ಎದ್ದು ಕಾಣುತ್ತಿದೆ

ಕೋಲ್ಕತಾ ನೈಟ್‌ರೈಡ​ರ್ಸ್‌(Kolkata Knight Riders)

ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಸ್ಟಾರ್ ಆಟಗಾರರಾದ ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ಅವರನ್ನು ರೀಟೈನ್ ಮಾಡಿಕೊಂಡಿದೆ. ಇದರ ಜತೆಗೆ ಶ್ರೇಯಸ್ ಅಯ್ಯರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಮೂಲಕ ಮಧ್ಯಮ ಕ್ರಮಾಂಕವನ್ನು ಮತ್ತಷ್ಟು ಬಲಿಷ್ಠ ಮಾಡಿಕೊಂಡಿದೆ.

IPL ಟಿ20 ಜಾತ್ರೆಗೆ ಕ್ಷಣಗಣನೆ, ಕ್ರಿಕೆಟ್ ಹಬ್ಬಕ್ಕೆ ಇನ್ನೊಂದೇ ದಿನ ಬಾಕಿ..!

ದೌರ್ಬಲ್ಯ: ಆದರೆ ಮೊದಲ 5 ಪಂದ್ಯಗಳಿಗೆ ಆಸ್ಟ್ರೇಲಿಯಾದ ಮಾರಕ ವೇಗಿ ಪ್ಯಾಟ್ ಕಮಿನ್ಸ್‌ ಅಲಭ್ಯತೆ ಹಾಗೂ ಅನುಭವಿ ವೇಗದ ಬೌಲರ್‌ಗಳ ಕೊರತೆ ಕೆಕೆಆರ್ ತಂಡಕ್ಕೆ ದೊಡ್ಡ ಹೊಡೆತಕೊಡುವ ಸಾಧ್ಯತೆಯಿದೆ. 

ಲಖನೌ ಸೂಪರ್‌ ಜೈಂಟ್ಸ್‌ (Lucknow Supergiants)

ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ಕೂಡಾ ಸಾಕಷ್ಟು ಸಮತೋಲಿತ ತಂಡವಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಬ್ಯಾಟಿಂಗ್ ವಿಭಾಗದಲ್ಲಿ ರಾಹುಲ್, ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ ಅವರಂತಹ ಆಟಗಾರರಿದ್ದರೆ, ಆಲ್ರೌಂಡ್ ವಿಭಾಗದಲ್ಲಿ ಮಾರ್ಕಸ್‌ ಸ್ಟೋಯ್ನಿಸ್, ಜೇಸನ್ ಹೋಲ್ಡರ್ ಅವರಂತಹ ಆಟಗಾರರಿದ್ದಾರೆ. 

ದೌರ್ಬಲ್ಯ: ಲಖನೌ ತಂಡ ಅಗ್ರಕ್ರಮಾಂಕದಲ್ಲಿ ಬಲಿಷ್ಠ ಬ್ಯಾಟರ್‌ಗಳನ್ನು ಹೊಂದಿದ್ದರೂ ಸಹಾ, ದುರ್ಬಲ ಕೆಳ ಮಧ್ಯಮ ಕ್ರಮಾಂಕ ತಂಡಕ್ಕೆ ಹಿನ್ನಡೆಯಾಗಿಸುವ ಸಾಧ್ಯತೆಯಿದೆ. ರವಿ ಬಿಷ್ಣೋಯಿ ಮೇಲೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆಯಿದೆ.

ಮುಂಬೈ ಇಂಡಿಯನ್ಸ್‌(Mumbai Indians)

5 ಬಾರಿಯ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಅವರೇ ಟ್ರಂಪ್‌ಕಾರ್ಡ್‌. ಇನ್ನುಳಿದಂತೆ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕೀರನ್ ಪೊಲ್ಲಾರ್ಡ್ ಜಸ್ಪ್ರೀತ್ ಬುಮ್ರಾ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿದ್ದಾರೆ

ದೌರ್ಬಲ್ಯ: ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡದ ಕೆಳ ಬ್ಯಾಟಿಂಗ್ ಕ್ರಮಾಂಕವನ್ನು ದುರ್ಬಲಗೊಳಿಸಿದೆ. ಇದರ ಜತೆಗೆ ಜಸ್ಪ್ರೀತ್ ಬುಮ್ರಾ ಅವರ ಮೇಲೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆಯಿದೆ. 
 
ಪಂಜಾಬ್‌ ಕಿಂಗ್ಸ್‌(Punjab Kings)

ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ ಪಂಜಾಬ್ ತಂಡವು ಈ ಬಾರಿಯ ಮಯಾಂಕ್ ಅಗರ್‌ವಾಲ್, ಶಿಖರ್ ಧವನ್ ಹಾಗೂ ಜಾನಿ ಬೇರ್‌ಸ್ಟೋವ್ ಅವರನ್ನು ನೆಚ್ಚಿಕೊಂಡಿದೆ. ಆಲ್ರೌಂಡರ್‌ ವಿಭಾಗದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಕಗಿಸೋ ರಬಾಡ ಸೇರ್ಪಡೆ ಪಂಜಾಬ್ ತಂಡದ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ.

ದೌರ್ಬಲ್ಯ: ಅನುಭವಿ ಆಟಗಾರ ಶಿಖರ್ ಧವನ್‌ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿದ್ದು, ಐಪಿಎಲ್‌ನಲ್ಲಿ ಯಾವ ರೀತಿ ಬ್ಯಾಟ್ ಮಾಡಲಿದ್ದಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇನ್ನು ಕನ್ನಡಿ ಮಯಾಂಕ್‌ ಅಗರ್‌ವಾಲ್‌ ನಾಯಕತ್ವದ ಅನುಭವ ಕಡಿಮೆ ಜತೆಗೆ ಗುಣಮಟ್ಟದ ಸ್ಪಿನ್ನರ್‌ ಕೊರತೆ ಪಂಜಾಬ್ ತಂಡಕ್ಕೆ ಹಿನ್ನೆಡೆಯಾಗುವ ಸಾಧ್ಯತೆಯಿದೆ.

ರಾಜಸ್ಥಾನ ರಾಯಲ್ಸ್‌(Rajasthan Royals)

ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವು ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್ ಅವರಂತ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಹೊಂದಿದೆ. ಸ್ಪಿನ್ ವಿಭಾಗದಲ್ಲಿ ಅಶ್ವಿನ್, ಯುಜುವೇಂದ್ರ ಚಹಲ್ ಜತೆಗೆ ವೇಗಿ ಟ್ರೆಂಟ್ ಬೌಲ್ಟ್ ಸೇರ್ಪಡೆ ರಾಯಲ್ಸ್ ತಂಡವನ್ನು ಮತ್ತಷ್ಟು ಬಲಿಷ್ಠವಾಗಿಸಿದೆ.

ದೌರ್ಬಲ್ಯ: ಬ್ಯಾಟಿಂಗ್‌ ಪಡೆ ದಿಢೀರ್‌ ಕುಸಿಯುವ ಭೀತಿಯಿದೆ. ಇದರ ಜತೆಗೆ ಸಂಜು ಸ್ಯಾಮ್ಸನ್‌ಗೆ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವಾಗ ವಿದೇಶಿ ಆಟಗಾರರ ಆಯ್ಕೆ ಗೊಂದಲ ಮೂಡಿಸುವ ಸಾಧ್ಯತೆಯಿದೆ

ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು (Royal Challengers Bangalore)

ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ ಮತ್ತೊಂದು ತಂಡವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಈ ಬಾರಿ ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ತಂಡವನ್ನು ಮುನ್ನಡೆಸಲಿದ್ದು, ಕೊಹ್ಲಿ, ಮ್ಯಾಕಸ್‌ವೆಲ್, ದಿನೇಶ್ ಕಾರ್ತಿಕ್ ಬಲ ತಂಡಕ್ಕಿದೆ. ಬೌಲಿಂಗ್‌ನಲ್ಲಿ ಹರ್ಷಲ್‌ ಪಟೇಲ್, ಮೊಹಮ್ಮದ್ ಸಿರಾಜ್ ಮಾರಕ ದಾಳಿ ನಡೆಸುವ ಕ್ಷಮತೆ ಹೊಂದಿದ್ದಾರೆ.

ದೌರ್ಬಲ್ಯ: ಆರ್‌ಸಿಬಿ ತಂಡದಲ್ಲಿ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಗೊಂದಲ ಸಾಧ್ಯತೆಯಿದೆ. ಇದರ ಜತೆಗೆ ದುಬಾರಿ ಮೊತ್ತಕ್ಕೆ ಹರಾಜಾಗಿರುವ ವನಿಂದು ಹಸರಂಗ ಹಾಗೂ ಹರ್ಷಲ್ ಪಟೇಲ್‌ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದ್ದು, ಒತ್ತಡದ ಸಂದರ್ಭದಲ್ಲಿ ಇವರಿಂದ ಯಾವ ರೀತಿ ಪ್ರದರ್ಶನ ಮೂಡಿ ಬರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಸನ್‌ರೈಸ​ರ್ಸ್‌ ಹೈದರಾಬಾದ್‌(Sunrisers Hyderabad)

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ನೀರಸ ಪ್ರದರ್ಶನ ತೋರಿತ್ತು. ಆದರೆ ಈ ಬಾರಿ ಅತ್ಯುತ್ತಮ ಬೌಲಿಂಗ್ ಪಡೆಯನ್ನು ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು, ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ವಾಷಿಂಗ್ಟನ್ ಸುಂದರ್ ಅವರಂತಹ ಉತ್ತಮ ಆಲ್ರೌಂಡರ್‌ಗಳನ್ನು ಹೊಂದಿದೆ.

ದೌರ್ಬಲ್ಯ: ಈ ಬಾರಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ವೇಗಿಗಳ ಆಯ್ಕೆಯಲ್ಲಿ ಗೊಂದಲ ಉಂಟಾಗುವ ಸಾಧ್ಯತೆಯಿದೆ. ಅನುಭವಿ ಬ್ಯಾಟರ್‌ಗಳ ಕೊರತೆ ತಂಡವನ್ನು ಕಾಡುವ ಸಾಧ್ಯತೆಯಿದೆ
 

click me!