IPL 2021: ಡೆಲ್ಲಿಗೆ ಶಾಕ್‌, KKR ಪಡೆಗೆ ಸುಲಭ ಜಯ

By Suvarna NewsFirst Published Sep 28, 2021, 7:17 PM IST
Highlights

* ಬಲಿಷ್ಠ ಡೆಲ್ಲಿ ತಂಡಕ್ಕೆ ಸೋಲುಣಿಸಿದ ಕೆಕೆಆರ್

* ಡೆಲ್ಲಿ ಎದುರು ಕೆಕೆಆರ್‌ಗೆ 3 ವಿಕೆಟ್‌ಗಳ ಜಯ

* ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡ ಕೆಕೆಆರ್

ಶಾರ್ಜಾ(ಸೆ.28): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ (IPL 2021) ಸತತ 5ನೇ ಗೆಲುವು ದಾಖಲಿಸುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕನಸಿಗೆ ಇಯಾನ್‌ ಮಾರ್ಗನ್(Eoin Morgan) ನೇತೃತ್ವದ ಕೋಲ್ಕತ ನೈಟ್‌ ರೈಡರ್ಸ್ (Kolkata Knight Riders  ತಣ್ಣೀರೆರಚಿದೆ. ಡೆಲ್ಲಿ ಎದುರು ಕೋಲ್ಕತ ನೈಟ್‌ ರೈಡರ್ಸ್ ತಂಡವು ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್‌ಗಳ ಅಂತರದ ಗೆಲುವಿನ ನಗೆ ಬೀರಿತು. ಟೂರ್ನಿಯಲ್ಲಿ ಐದನೇ ಗೆಲುವು ದಾಖಲಿಸಿದ ಕೋಲ್ಕತ ನೈಟ್‌ ರೈಡರ್ಸ್‌ 10 ಅಂಕಗಳೊಂದಿಗೆ 4ನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ನೀಡಿದ್ದ 128 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಕೋಲ್ಕತ ನೈಟ್ ರೈಡರ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ ವೆಂಕಟೇಶ್ ಅಯ್ಯರ್ 14 ರನ್‌ ಬಾರಿಸಿ ಲಲಿತ್ ಯಾದವ್‌ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಇದರ ಬೆನ್ನಲ್ಲೇ ರಾಹುಲ್ ತ್ರಿಪಾಠಿ(9) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 

Match 41. It's all over! Kolkata Knight Riders won by 3 wickets https://t.co/jHZGSZ2Ha8

— IndianPremierLeague (@IPL)

ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್‌ ಶುಭ್‌ಮನ್‌ ಗಿಲ್ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಗಿಲ್‌ 33 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 30 ರನ್ ಬಾರಿಸಿ ರಬಾಡ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ನಾಯಕ ಇಯಾನ್ ಮಾರ್ಗನ್ ಆಫ್‌ ಸ್ಪಿನ್ನರ್ ಅಶ್ವಿನ್ ಬೌಲಿಂಗ್‌ನಲ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದಾಗ ಕೆಕೆಆರ್ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. 5ನೇ ವಿಕೆಟ್‌ಗೆ ನಿತೀಶ್ ರಾಣಾ ಹಾಗೂ ದಿನೇಶ್ ಕಾರ್ತಿಕ್‌ ಜೋಡಿ 29 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಅಸರೆಯಾದರು. ಕಾರ್ತಿಕ್‌ 12 ರನ್ ಬಾರಿಸಿ ಆವೇಶ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದರು.

IPL 2021: KKR ತಂಡಕ್ಕೆ ಸಾಧಾರಣ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌

ಗೆಲುವು ಸುಲಭಗೊಳಿಸಿದ ರಾಣಾ-ನರೈನ್ ಜತೆಯಾಟ‌: ದಿನೇಶ್ ವಿಕೆಟ್ ಪತನದ ಬಳಿಕ ಮತ್ತೆ ನಾಟಕೀಯ ತಿರುವು ಪಡೆಯಬಹುದೇನೋ ಎಂದುಕೊಳ್ಳಲಾಗಿತ್ತು. ಆದರೆ ನರೈನ್‌ ರಬಾಡ ಒಂದೇ ಓವರ್‌ನಲ್ಲಿ 2 ಸಿಕ್ಸರ್‌ ಹಾಗೂ ಒಂದು ಬೌಂಡರಿ ಚಚ್ಚುವ ಮೂಲಕ ಪಂದ್ಯ ಸಂಪೂರ್ಣ ಕೆಕೆಆರ್ ಕಡೆ ವಾಲುವಂತೆ ಮಾಡಿದರು. ರಬಾಡ ಹಾಕಿದ 16ನೇ ಓವರ್‌ನಲ್ಲಿ ರಾಣಾ-ನರೈನ್ ಜೋಡಿ 21 ರನ್‌ ಕಲೆಹಾಕುವ ಕೆಕೆಆರ್ ನಿಟ್ಟುಸಿರು ಬಿಡುವಂತೆ ಮಾಡಿದರು. ಆರನೇ ವಿಕೆಟ್‌ಗೆ ಈ ಜೋಡಿ ಕೇವಲ 14 ಎಸೆತಗಳಲ್ಲಿ 26 ರನ್‌ ಬಾರಿಸಿ ಗೆಲುವು ಸುಲಭಗೊಳಿಸಿದರು. ನರೈನ್ 10 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 21 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ನಿತೀಶ್ ರಾಣಾ ಅಜೇಯ 36 ರನ್‌ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. 

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಸ್ಟೀವ್ ಸ್ಮಿತ್(39), ರಿಷಭ್ ಪಂತ್(39) ಹಾಗೂ ಶಿಖರ್ ಧವನ್‌(24) ಕೊಂಚ ರನ್‌ ಕಾಣಿಕೆ ನೀಡಿದ್ದು ಬಿಟ್ಟರೆ ಉಳಿದ್ಯಾವ ಡೆಲ್ಲಿ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. 

ಕೆಕೆಆರ್ ಪರ ವೆಂಕಟೇಶ್ ಅಯ್ಯರ್, ಲಾಕಿ ಫರ್ಗ್ಯೂಸನ್‌ ಹಾಗೂ ಸುನಿಲ್‌ ನರೈನ್‌ ತಲಾ 2 ವಿಕೆಟ್ ಪಡೆದರೆ, ಟಿಮ್‌ ಸೌಥಿ ಒಂದು ವಿಕೆಟ್ ಪಡೆದರು. 

click me!