14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಫ್ರಾಂಚೈಸಿ ಹೊಸ ಹೆಸರಿನೊಂದಿಗೆ ಕಣಕ್ಕಿಳಿಯಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಫೆ.16): ಪ್ರೀತಿ ಜಿಂಟಾ ಸಹಾ ಒಡೆತನದ ಕಿಂಗ್ಸ್ ಇಲೆವನ್ ಪಂಜಾಬ್ ಹೊಸ ಹೆಸರಿನೊಂದಿಗೆ ಕಣಕ್ಕಿಳಿಯಲಿದ್ದು, 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಹೆಸರಿನಲ್ಲಿ ಕಾಣಿಸಿಕೊಳ್ಳಲಿದೆ.
ತಂಡದ ಮಾಲೀಕರು ಹೆಸರು ಬದಲಾವಣೆಯ ಹಿಂದಿನ ಉದ್ದೇಶವೇನು ಎಂದು ಸ್ಪಷ್ಟಪಡಿಸಿಲ್ಲ. ಬಿಸಿಸಿಐಗೆ ಮೊದಲೆ ಕಿಂಗ್ಸ್ ಇಲೆವನ್ ಫ್ರಾಂಚೈಸಿ ತನ್ನ ತಂಡದ ಹೆಸರು ಬದಲಾವಣೆ ಬಗ್ಗೆ ಮಾಹಿತಿಯನ್ನು ನೀಡಿತ್ತು. ಕಿಂಗ್ಸ್ ಇಲೆವನ್ ಫ್ರಾಂಚೈಸಿ ಮುಂಬೈನಲ್ಲಿ ಅದ್ಧೂರಿಯಾಗಿ ತಂಡವನ್ನು ರೀಲಾಂಚ್ ಮಾಡುವ ಯೋಜನೆ ಹಾಕಿಕೊಂಡಿತ್ತು. ಆದರೆ ಹರಾಜು ಪ್ರಕ್ರಿಯೆ ಚೆನ್ನೈಗೆ ಸ್ಥಳಾಂತರವಾಗಿದ್ದರಿಂದ ಇದೀಗ ಪಂಜಾಬ್ ಮೂಲದ ಫ್ರಾಂಚೈಸಿ ಈ ಆಲೋಚನೆಯನ್ನು ಕೈಬಿಟ್ಟಿದೆ.
ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಹೆಸರು & ಲೋಗೋ ಬದಲಾವಣೆ..?
ಚೊಚ್ಚಲ ಆವೃತ್ತಿಯಿಂದಲೂ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸಿ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ. ಕಳೆದ 13 ಐಪಿಎಲ್ ಆವೃತ್ತಿಗಳಲ್ಲಿ ಒಮ್ಮೆ ರನ್ನರ್ ಅಪ್ ಹಾಗೂ ಮತ್ತೊಮ್ಮೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು ಬಿಟ್ಟರೆ ಬಹುತೇಕ ಆವೃತ್ತಿಗಳಲ್ಲಿ ಪಂಜಾಬ್ ತಂಡ ನೀರಸ ಪ್ರದರ್ಶನ ತೋರಿದೆ. ಕಿಂಗ್ಸ್ ಇಲೆವನ್ ಪಂಜಾಬ್ ಇನ್ನು ಪಂಜಾಬ್ ಕಿಂಗ್ಸ್ ಎಂದು ಹೆಸರು ಬದಲು ಮಾಡಿಕೊಂಡ ಬಳಿಕವಾದರೂ ತಂಡದ ಅದೃಷ್ಠ ಬದಲಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಫೆಬ್ರವರಿ 18ರಂದು ಐಪಿಎಲ್ ಆಟಗಾರರ ಮಿನಿ ಹರಾಜು ನಡೆಯಲಿದ್ದು, 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಏಪ್ರಿಲ್ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆಯಿದೆ.