ಐಪಿಎಲ್‌ 2021 ರದ್ದು ಮಾಡಿಲ್ಲ, ಮುಂದೂಡಲಾಗಿದೆ: ರಾಜೀವ್ ಶುಕ್ಲಾ

By Suvarna News  |  First Published May 5, 2021, 6:45 PM IST

ಐಪಿಎಲ್‌ ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸಿಹಿ ಸುದ್ದಿಯೊಂದು ನೀಡಿದ್ದು, ಎಲ್ಲಾ ಪರಿಸ್ಥಿತಿ ಹತೋಟಿಗೆ ಬಂದರೆ ಮುಂಬರುವ ದಿನಗಳಲ್ಲಿ ಇನ್ನುಳಿದ ಐಪಿಎಲ್ ಟೂರ್ನಿ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ನವದೆಹಲಿ(ಮೇ.05): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಕೋವಿಡ್ ಕಾರಣದಿಂದಾಗಿ ಮುಂದೂಡಲಾಗಿದೆಯೇ ಹೊರತು ರದ್ದು ಮಾಡಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಐಪಿಎಲ್‌ ಅಭಿಮಾನಿಗಳಿಗೆ ಶುಕ್ಲಾ ಗುಡ್‌ ನ್ಯೂಸ್ ನೀಡಿದ್ದಾರೆ.

ಕಳೆದ ಭಾನುವಾರ(ಮೇ.02)ದ ವರೆಗೂ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಒಟ್ಟು 29 ಪಂದ್ಯಗಳು ಅತ್ಯಂತ ಯಶಸ್ವಿಯಾಗಿ ನಡೆದಿವೆ. ಇದಾದ ಬಳಿಕ ಬಯೋ ಬಬಲ್‌ನೊಳಗೆ ಕೆಕೆಆರ್‌ ಆಟಗಾರರಾದ ವರುಣ್ ಚಕ್ರವರ್ತಿ ಹಾಗೂ ಸಂದೀಪ್‌ ವಾರಿಯರ್‌ಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಹೀಗಾಗಿ ಸೋಮವಾರ(ಮೇ.03) ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತ ನೈಟ್‌ ರೈಡರ್ಸ್‌ ನಡುವಿನ ಪಂದ್ಯ ಮುಂದೂಡಲಾಗಿತ್ತು. ಇನ್ನು ಮಂಗಳವಾರ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್‌ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ಸನ್‌ರೈಸರ್ಸ್‌ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾಗೂ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಹೀಗಾಗಿ ತುರ್ತು ತೀರ್ಮಾನ ತೆಗೆದುಕೊಂಡ ಬಿಸಿಸಿಐ, ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

Tap to resize

Latest Videos

ಬಯೋಬಬಲ್‌ ಅವ್ಯವಸ್ಥೆಗೆ ಐಪಿಎಲ್ ಬಲಿ.!

ಟೂರ್ನಿಯ ಭವಿಷ್ಯದ ಕುರಿತಂತೆ ಮಾತನಾಡಿದ ರಾಜೀವ್ ಶುಕ್ಲಾ, 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮುಂದೂಡಿದ್ದೇವೆಯೇ ಹೊರತಾಗಿ ರದ್ದು ಮಾಡಿಲ್ಲ. ಐಪಿಎಲ್‌ನ ಇನ್ನುಳಿದ ಪಂದ್ಯಗಳು ಮುಂಬರುವ ದಿನಗಳಲ್ಲಿ ನಡೆಯಲಿವೆ. ಈ ಕೋವಿಡ್ ಪರಿಸ್ಥಿತಿ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದ ಬಳಿಕ ಟೂರ್ನಿಯ ಆಯೋಜನೆಯ ಬಗ್ಗೆ ಬಿಸಿಸಿಐ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಈ ಬಾರಿಯ ಐಪಿಎಲ್‌ ರದ್ದಾಯಿತೇ ಅಥವಾ ನಡೆಯಲಿದೆಯೇ ಎನ್ನುವ ಗೊಂದಲದಲ್ಲಿದ್ದ ಐಪಿಎಲ್ ಕ್ರಿಕೆಟ್ ಅಭಿಮಾನಿಗಳಿಗೆ ರಾಜೀವ್ ಶುಕ್ಲಾ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಕೋವಿಡ್ ಹತೋಟಿಗೆ ಬಂದು ಆದಷ್ಟು ಬೇಗ ಜನ ಜೀವನ ಸಹಜ ಸ್ಥಿತಿಗೆ ಬರಲಿ ಹಾಗೆಯೇ ಕ್ರೀಡಾ ಚಟುವಟಿಕೆಗಳು ಆರಂಭವಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!