IPL 2021 ಫೈನಲ್‌ KKR ಬೌಲಿಂಗ್‌ ವರ್ಸಸ್‌ CSK ಬ್ಯಾಟಿಂಗ್ ಎಂದು ಬಣ್ಣಿಸಿದ ಗಂಭೀರ್

By Suvarna NewsFirst Published Oct 15, 2021, 12:15 PM IST
Highlights

* ದುಬೈನಲ್ಲಿಂದು ಸಿಎಸ್‌ಕೆ ವರ್ಸಸ್‌ ಕೆಕೆಆರ್ ಫೈನಲ್ ಪಂದ್ಯ

* ಬಲಿಷ್ಠ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ

* ಚೆನ್ನೈ ಬ್ಯಾಟಿಂಗ್ ವರ್ಸಸ್‌ ಕೆಕೆಆರ್ ಬೌಲಂಗ್ ನಡುವಿನ ಕಾದಾಟ ಎಂದು ಬಣ್ಣಿಸಿದ ಗಂಭೀರ್

ಬೆಂಗಳೂರು(ಅ.15): ಬಹುನಿರೀಕ್ಷಿತ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) (IPL 2021) ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪ್ರಶಸ್ತಿಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಹಾಗೂ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡಗಳು ಕಾದಾಟ ನಡೆಸಲಿವೆ. ಈ ಫೈನಲ್‌ ಪಂದ್ಯವು ಬಲಿಷ್ಠ ಚೆನ್ನೈ ಬ್ಯಾಟಿಂಗ್ ಹಾಗೂ ಬಲಾಢ್ಯ ಕೆಕೆಆರ್ ಬೌಲಿಂಗ್ ನಡುವಿನ ಹೋರಾಟವಾಗಲಿದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

2021ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಕೊಡುಗೆಯನ್ನು ಗೌತಮ್‌ ಗಂಭೀರ್ (Gautam Gambhir) ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಇದೇ ವೇಳೆ ಕೆಕೆಆರ್ ಬೌಲಿಂಗ್‌ ಕ್ರಮಾಂಕದ ಬಗ್ಗೆ ಮಾಜಿ ಕೆಕೆಆರ್‌ ನಾಯಕ ಗಂಭೀರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಜತೆ ಮಾತನಾಡಿದ ಗೌತಿ, ಕೇವಲ ಋತುರಾಜ್ ಗಾಯಕ್ವಾಡ್ (Ruturaj Gaikwad) ಮಾತ್ರವಲ್ಲ, ಫಾಫ್ ಡು ಪ್ಲೆಸಿಸ್‌ ಕೂಡಾ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಕೂಡಾ ಉತ್ತಮ ಬ್ಯಾಟಿಂಗ್ ನಡೆಸಿದ್ದರು. ಹೀಗಾಗಿ ಈ ಪಂದ್ಯ ಸಿಎಸ್‌ಕೆ ಬ್ಯಾಟಿಂಗ್ ವರ್ಸಸ್‌ ಕೆಕೆಆರ್ ಬೌಲಿಂಗ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ದುಬೈನಲ್ಲಿ ಫೈನಲ್ ಪಂದ್ಯ ನಡೆಯುತ್ತಿರುವುದರಿಂದ ಕೆಕೆಆರ್ ವೇಗಿ ಲಾಕಿ ಫರ್ಗ್ಯೂಸನ್‌ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ. ದುಬೈ ಪಿಚ್‌ನಲ್ಲಿ ಲಾಕಿ ಫರ್ಗ್ಯೂಸನ್ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾರೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. 

IPL 2021 ಚೆನ್ನೈ ವರ್ಸಸ್‌ ಕೆಕೆಆರ್‌ ಫೈನಲ್‌, ಐಪಿಎಲ್ ಕಪ್‌ ಯಾರಿಗೆ..?

ಇದೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಋತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡು ಪ್ಲೆಸಿಸ್‌ (Faf du Plessis) ಆರಂಭಿಕ ಜತೆಯಾಟದಲ್ಲೇ ಸಿಎಸ್‌ಕೆ ಪರ 1,150 ರನ್ ಬಾರಿಸಿದ್ದಾರೆ. ಈ ಮೂಲಕ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಜೋಡಿಯಾಗಿ ಹೊರಹೊಮ್ಮಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಎದುರು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಬಿನ್ ಉತ್ತಪ್ಪ (Robin Uthappa) 44 ಎಸೆತಗಳಲ್ಲಿ 63 ರನ್‌ ಬಾರಿಸುವ ಮೂಲಕ ಸಿಎಸ್‌ಕೆ ಫೈನಲ್‌ಗೇರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಇನ್ನು ಕೋಲ್ಕತ ನೈಟ್‌ ರೈಡರ್ಸ್ ತಂಡವು ತನ್ನ ಅಸಾಧಾರಣ ಬೌಲಿಂಗ್ ಪ್ರದರ್ಶನದ ಮೂಲಕವೇ ಬಲಿಷ್ಠ ತಂಡಗಳಿಗೆ ಸೋಲುಣಿಸಿ ಫೈನಲ್‌ಗೇರುವಲ್ಲಿ ಯಶಸ್ವಿಯಾಗಿದೆ. ಕೆಕೆಆರ್ ಮಿಸ್ಟ್ರಿ ಸ್ಪಿನ್ನರ್‌ಗಳೆನಿಸಿಕೊಂಡಿರುವ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್‌ ಇಬ್ಬರೇ 32 ವಿಕೆಟ್ ಉರುಳಿಸಿದ್ದಾರೆ. ಇನ್ನು ಕಿವೀಸ್ ವೇಗಿ ಲಾಕಿ ಫರ್ಗ್ಯೂಸನ್ ಕೂಡಾ ತಮ್ಮ ಕರಾರುವಕ್ಕಾದ ಬೌಲಿಂಗ್ ದಾಳಿಯ ಮೂಲಕ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ.

IPL 2021: ಫೈನಲ್‌ಗೆ KKR ಲಗ್ಗೆ,ಬಹಳ ಖುಷಿಯಾಗ್ತಿದೆ ಎಂದ ಕ್ಯಾಪ್ಟನ್‌ ಮಾರ್ಗನ್‌!

ಕೋಲ್ಕತ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ. ಈ ಪಂದ್ಯ ಇಂದು(ಅ.15) ಸಂಜೆ 7.30ಕ್ಕೆ ಆರಂಭವಾಗಲಿದೆ. ಈ ಪಂದ್ಯದಲ್ಲಿ ಟಾಸ್ ಕೂಡಾ ಮಹತ್ವದ ಪಾತ್ರ ವಹಿಸಲಿದೆ. ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ದುಬೈನಲ್ಲಿ ನಡೆದ ಕಳೆದ 8 ಐಪಿಎಲ್‌ ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡ ಗೆಲುವಿನ ನಗೆ ಬೀರಿದೆ.

click me!