IPL 2021: ಡೆಲ್ಲಿ ಮಣಿಸಿ 9ನೇ ಬಾರಿ ಫೈನಲ್ ತಲುಪಿದ ಚೆನ್ನೈ ಸೂಪರ್ ಕಿಂಗ್ಸ್!

By Suvarna NewsFirst Published Oct 10, 2021, 11:22 PM IST
Highlights
  • ಫೈನಲ್‌ಗೆ ಲಗ್ಗೆ ಇಟ್ಟ ಚೆನ್ನೈ ಸೂಪರ್ ಕಿಂಗ್ಸ್
  • ಸಿಕ್ಸರ್, ಹ್ಯಾಟ್ರಿಕ್ ಬೌಂಡರಿ ಮೂಲಕ ಪಂದ್ಯ ಫಿನೀಶ್ ಮಾಡಿದ ಧೋನಿ
  • ದುಬೈನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯ
  • ಡೆಲ್ಲಿ ತಂಡಕ್ಕೆ ಫೈನಲ್ ಪ್ರವೇಶಕ್ಕೆ ಮತ್ತೊಂದು ಅವಕಾಶ

ದುಬೈ(ಅ.10):  ತೀವ್ರ ಕುತೂಹಲ, ಜಿದ್ದಾಜಿದ್ದಿನ ಹೋರಾಟ, ಒಂದೊಂದು ಎಸೆತವೂ ಅಭಿಮಾನಿಗಳ ಎದೆಯಲ್ಲಿ ನಡುಕ. ಆದರೆ ನಾಯಕ ಎಂ.ಎಸ್.ಧೋನಿ ಭರ್ಜರಿ ಸಿಕ್ಸರ್ ಹಾಗೂ ಹ್ಯಾಟ್ರಿಕ್ ಬೌಂಡರಿಯಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ರೋಚಕ ಗೆಲುವು ಕಂಡಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 9ನೇ ಬಾರಿಗೆ ಐಪಿಎಲ್ ಟೂರ್ನಿಯ ಫೈನಲ್ ಪ್ರವೇಶಿಸಿದ ದಾಖಲೆ ಬರೆಯಿತು

IPL 2021: 56 ಲೀಗ್ ಪಂದ್ಯಗಳ ಬಳಿಕ ಬಯಲಾಯ್ತು ಟಾಪ್ 4 ತಂಡಗಳು; ಇಲ್ಲಿದೆ ನೋಡಿ ಪ್ಲೇ ಆಫ್‌ ವೇಳಾಪಟ್ಟಿ..!

ಪೃಥ್ವಿ ಶಾ ಹಾಗೂ ನಾಯಕ ರಿಷಬ್ ಪಂತ್(Rishabh pant) ಸಿಡಿಸಿದ ಹಾಫ್ ಸೆಂಚುರಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್(Delhi capitals) ತಂಡ ಚೆನ್ನೈ ಸೂಪರ್ ಕಿಂಗ್ಸ್(Chennai super Kings) ತಂಡಕ್ಕೆ 173 ರನ್ ಟಾರ್ಗೆಟ್ ನೀಡಿತ್ತು. ಮಹತ್ವದ ಪಂದ್ಯ, ಒತ್ತಡ ನಡುವೆ ಈ ಮೊತ್ತ ಚೇಸಿಂಗ್ ಸವಾಲೇ ಆಗಿತ್ತು. ಇದಕ್ಕುತ್ತರವಾಗಿ ಕಣಕ್ಕಿಳಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲೇ ಫಾಫ್ ಡುಪ್ಲೆಸಿಸ್ ವಿಕೆಟ್ ಕಳೆದುಕೊಂಡು ಆತಂಕದಲ್ಲಿ ಮುಳುಗಿತು.

ಚೆನ್ನೈ ಸೂಪರ್ ಕಿಂಗ್ಸ್ 3 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಉರುಳಿ ಬಿತ್ತು. ಡುಪ್ಲೆಸಿಸ್ ಕೇವಲ 1 ರನ್ ಸಿಡಿಸಿ ಔಟಾದರು. ಆದರೆ ರುತುರಾಜ್ ಗಾಯಕ್ವಾಡ್(Ruturaj Gaikwad) ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ(Robin Uthappa) ಜೊತೆಯಾಟ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನೆರವಾಯಿತು. 

IPL 2021: ನಿನಗಿದು ಬೇಕಿತ್ತಾ ಮಗನೇ..? ಆವೇಶ್ ಖಾನ್ ಫುಲ್ ಟ್ರೋಲ್‌..!

ರುತುರಾಜ್ ಎಂದಿನ ಶೈಲಿಯಲ್ಲಿ ಬ್ಯಾಟ್ ಬೀಸಿದರೆ, ಕಳೆಪೆ ಫಾರ್ಮ್, ಅವಕಾಶದ ಕೊರತೆಯಲ್ಲಿದ್ದ ರಾಬಿನ್ ಉತ್ತಪ್ಪ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದರು. 35 ಎಸೆತದಲ್ಲಿ ಉತ್ತಪ್ಪ ಹಾಫ್ ಸೆಂಚುರಿ ಪೂರೈಸಿದರು. ಅರ್ಧಶತಕದ ಬಳಿಕವೂ ಉತ್ತಪ್ಪ ಅಬ್ಬರ ಮುಂದುವರಿಯಿತು.

ರಾಬಿನ್ ಉತ್ತಪ್ಪ 44 ಎಸೆತದಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 63 ರನ್ ಸಿಡಿಸಿ ಔಟಾದರು. ಈ ಮೂಲಕ 110 ರನ್‌ಗಳ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು. 

2018ರ ಬಳಿಕ ಐಪಿಎಲ್ ಟೂರ್ನಿಯಲ್ಲಿ ಉತ್ತಪ್ಪ 50+ ಸ್ಕೋರ್
54(35) ಕೆಕೆಆರ್ v ಮುಂಬೈ ಇಂಡಿಯನ್ಸ್, ಮುಂಬೈ
67*(50)ಕೆಕೆಆರ್ v ಪಂಜಾಬ್ ಕಿಂಗ್ಸ್, ಕೋಲ್ಕತಾ
63(35) ಸಿಎಸ್‌ಕೆ v ಡೆಲ್ಲಿ ಕ್ಯಾಪಿಟಲ್ಸ್ ,ದುಬೈ

ಇತ್ತ ರುತುರಾಜ್ ಗಾಯಕ್ವಾಡ್ 37 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದರು.  ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೇಲೆ ಒತ್ತಡ ಹೆಚ್ಚಾಯಿತು. ಉತ್ತಪ್ಪ ವಿಕೆಟ್ ಪತನದ ಬೆನ್ನಲ್ಲೇ ಚೆನ್ನೈ ದಿಢೀರ್ ವಿಕೆಟ್ ಕಳೆದುಕೊಂಡಿತು. ಶಾರ್ದೂಲ್ ಠಾಕೂರ್ ಡಕೌಟ್ ಆದರು. 

IPL 2021: ಆರ್‌ಸಿಬಿ ಕಪ್ ಗೆಲ್ಲುವ ಕಾಲ ಕೊನೆಗೂ ಸನ್ನಿಹಿತವಾಗಿವಾಗಿದೆ ಎಂದ ಕ್ಲೂಸ್ನರ್

ಅಂಬಾಟಿ ರಾಯುಡು 1 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ರುತುರಾಜ್ ಕ್ರೀಸ್ ಕಚ್ಚಿ ನಿಂತಿರುವುದು ಚೆನ್ನೈ ತಂಡಕ್ಕೆ ಕೊಂಚ ಸಮಾಧಾನ ತಂದಿತು. ಚೆನ್ನೈ ತಂಡದ ಗೆಲುವಿಗೆ ಅಂತಿಮ 24 ಎಸೆತಕ್ಕೆ 44 ರನ್ ಅವಶ್ಯಕತೆ ಇತ್ತು. ರುತುರಾಜ್ ಹಾಗೂ ಮೊಯಿನ್ ಆಲಿ ದಿಟ್ಟ ಹೋರಾಟ ಪಂದ್ಯದ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿತು.

ಒತ್ತಡ ಹೆಚ್ಚಾಗುತ್ತಿದ್ದಂತೆ ರುತುರಾಜ್ ಗಾಯಕ್ವಾಡ್ ವಿಕೆಟ್ ಪತನಗೊಂಡಿತು. ರುತುರಾಜ್ 70 ರನ್ ಸಿಡಿಸಿ ಔಟಾದರು. ಮೊಯಿನ್ ಆಲಿ ಜೊತೆ ನಾಯಕ ಎಂ.ಎಸ್.ಧೋನಿ(MS Dhoni) ಸೇರಿಕೊಂಡರು. ಅಂತಿಮ 10 ಎಸೆತದಲ್ಲಿ ಚೆನ್ನೈ ಗೆಲುವಿಗೆ 20 ರನ್ ಬೇಕಿತ್ತು. 

ಭರ್ಜರಿ  ಸಿಕ್ಸರ್ ಸಿಡಿಸಿದ ಧೋನಿ, ಚೆನ್ನೈ ಕನಸಿಗೆ ಮತ್ತಷ್ಟು ಪುಷ್ಠಿ ನೀಡಿದರು. 6 ಎಸೆತದಲ್ಲಿ 13 ರನ್ ಬೇಕಿದೆ. ಈ ವೇಳೆ ಮೊಯಿನ್ ಆಲಿ ಔಟಾದರು. ಸತತ 3 ಬೌಂಡರಿ ಸಿಡಿಸಿದ ಧೋನಿ, ಚೆನ್ನೈ ತಂಡಕ್ಕೆ 4 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು. ಈ ಮೂಲಕ ಧೋನಿ ಹಲವು ದಿನಗಳ ಬಳಿಕ ಪಂದ್ಯ ಫಿನೀಶ್ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು. ಧೋನಿ 6 ಎಸೆತದಲ್ಲಿ 18 ರನ್ ಸಿಡಿಸಿದರು. 

ಚೆನ್ನೈ ಸೂಪರ್ ಕಿಂಗ್ಸ್ ನೇರವಾಗಿ ಫೈನಲ್ ಪ್ರವೇಶ ಮಾಡಿದೆ. ಇದು ಐಪಿಎಲ್ ಇತಿಹಾಸದಲ್ಲಿ 9ನೇ ಫೈನಲ್ ಪ್ರವೇಶವಾಗಿದೆ. 
 

click me!