ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲೇ ಭಾರತ ಆರಂಭಿಕ ಆಘಾತ ಅನುಭವಿಸಿದೆ. ಕೊಹ್ಲಿ, ಪೂಜಾರ ಪೆವಿಲಿಯನ್ ಸೇರಿದರೆ, ಮಯಾಂಕ್ ಅಗರ್‌ವಾಲ್ ಅರ್ಧಶತಕ ಬಾರಿಸಿದ್ದು, ಇನ್ನೊಂದು ಶತಕದತ್ತ ಮುನ್ನುಗ್ಗುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಇಂದೋರ್[ನ.15]: ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತಕ್ಕೆ ಬಿಗ್ ಶಾಕ್ ಎದುರಾಗಿದ್ದು, ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಚೇತೇಶ್ವರ್ ಪೂಜಾರ ಅರ್ಧಶತಕ ಬಾರಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದಾರೆ.
INDvBAN ಇಂದೋರ್ ಟೆಸ್ಟ್; ಮೊದಲ ದಿನ ಭಾರತಕ್ಕೆ ಭರ್ಜರಿ ಮೈಲುಗೈ!
ಹೌದು, ಒಂದು ವಿಕೆಟ್ ಕಳೆದುಕೊಂಡು 86 ರನ್’ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತಕ್ಕೆ ಪೂಜಾರ 2 ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಬಾರಿಸಿದರು. ಇದಾದ ಕೆಲ ಹೊತ್ತಿನಲ್ಲೇ ಅಬು ಜಾಯೆದ್ ಬೌಲಿಂಗ್’ನಲ್ಲಿ ಸೈಫ್ ಹುಸೇನ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಪೂಜಾರ 72 ಎಸೆತಗಳಲ್ಲಿ 9 ಬೌಂಡರಿ ಸಹಿತ 54 ರನ್ ಬಾರಿಸಿದರು. ಇನ್ನು ಇದರ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಶೂನ್ಯ ಸುತ್ತಿ ವಿಕೆಟ್ ಒಪ್ಪಿಸಿದರು. ಅಬು ಜಾಯೆದ್ ಭಾರತಕ್ಕೆ ಎರಡನೇ ಆಘಾತ ನೀಡುವಲ್ಲಿ ಸಫಲರಾದರು. ಇದರೊಂದಿಗೆ ಕೊಹ್ಲಿ ತವರಿನಲ್ಲಿ ಮೂರನೇ ಬಾರಿಗೆ ರನ್ ಗಳಿಸದೇ ವಿಕೆಟ್ ಒಪ್ಪಿಸಿದಂತಾಗಿದೆ. ಈ ಮೊದಲು 2019-17ರಲ್ಲಿ ಆಸ್ಟ್ರೇಲಿಯಾ ಹಾಗೂ 2017-18ರಲ್ಲಿ ಶ್ರೀಲಂಕಾ ವಿರುದ್ದ ಶೂನ್ಯ ಸುತ್ತಿದ್ದರು.
ಮಯಾಂಕ್ ಅರ್ಧಶತಕ: ಇನ್ನು ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್’ಮನ್ ಕನ್ನಡಿಗ ಮಯಾಂಕ್ ಅಗರ್ ವಾಲ್ ಮತ್ತೊಂದು ಅರ್ಧಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. 98 ಎಸೆತಗಳನ್ನು ಎದುರಿಸಿ ಅಗರ್’ವಾಲ್ 4ನೇ ಅರ್ಧಶತಕ ಪೂರೈಸಿದರು. ಈ ಮೂಲಕ ವೆಸ್ಟ್ ಇಂಡೀಸ್ ವಿರುದ್ಧ ನಾರ್ಥ್ ಸೌಂಡ್[5] ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿ[10] ಹೊರತುಪಡಿಸಿ ಆಡಿದ ಉಳಿದೆಲ್ಲಾ ಮೊದಲ ಇನಿಂಗ್ಸ್’ನಲ್ಲಿ 50+ ರನ್ ಬಾರಿಸಿದ ಸಾಧನೆ ಮಯಾಂಕ್ ಪಾಲಾಗಿದೆ.
ಇದೀಗ ಟೀಂ ಇಂಡಿಯಾ 36 ಓವರ್ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 134 ರನ್ ಬಾರಿಸಿದ್ದು, ಮಯಾಂಕ್ 58 ಹಾಗೂ ಅಜಿಂಕ್ಯ ರಹಾನೆ 14 ರನ್ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.