ಮೂರೂ ಮಾದರಿಯಲ್ಲೂ ಶಫಾಲಿಗೆ ಉತ್ತಮ ಭವಿಷ್ಯವಿದೆ: ಮಿಥಾಲಿ ರಾಜ್

By Suvarna NewsFirst Published Jun 21, 2021, 3:46 PM IST
Highlights

* ಚೊಚ್ಚಲ ಟೆಸ್ಟ್‌ ಪಂದ್ಯದಲ್ಲೇ ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಶಫಾಲಿ ವರ್ಮಾ

* ಮೊದಲ ಟೆಸ್ಟ್‌ನಲ್ಲೇ 2 ಅರ್ಧಶತಕ ಚಚ್ಚಿದ ಶಫಾಲಿ ವರ್ಮಾ

* ಮೂರೂ ಮಾದರಿಯಲ್ಲೂ ಶಫಾಲಿ ಮಿಂಚಬಹುದು ಎಂದು ಮಿಥಾಲಿ ರಾಜ್

ಬ್ರಿಸ್ಟಲ್(ಜೂ.21)‌: ಭಾರತ ಮಹಿಳಾ ತಂಡದ 17 ವರ್ಷದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾಗೆ ಎಲ್ಲಾ ಮೂರೂ ಮಾದರಿಯಲ್ಲಿ ಉತ್ತಮ ಭವಿಷ್ಯವಿದೆ. ಮೂರೂ ಮಾದರಿಯಲ್ಲಿ ಶಫಾಲಿ ತಂಡದ ಪ್ರಮುಖ ಆಟಗಾರ್ತಿಯಾಗಿ ಬೆಳೆಯುತ್ತಿದ್ದಾರೆ ಎಂದು ಏಕದಿನ, ಟೆಸ್ಟ್‌ ನಾಯಕಿ ಮಿಥಾಲಿ ರಾಜ್‌ ಹೇಳಿದ್ದಾರೆ. 

ಇಂಗ್ಲೆಂಡ್‌ ವಿರುದ್ಧ ಶನಿವಾರ ಮುಕ್ತಾಯಗೊಂಡ ಏಕೈಕ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ ಶಫಾಲಿ ಬಗ್ಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಶಫಾಲಿ ಎಲ್ಲಾ ಮೂರು ಮಾದರಿಯಲ್ಲಿ ಭಾರತೀಯ ಬ್ಯಾಟಿಂಗ್‌ ಪಡೆಯ ಬಹಳ, ಬಹಳ ಪ್ರಮುಖ ಆಟಗಾರ್ತಿ ಆಗಲಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ತಮ್ಮ ಆಟದ ಶೈಲಿಯನ್ನು ಬದಲಿಸಿಕೊಳ್ಳುವ ಕೌಶಲ್ಯ ಅವರಲ್ಲಿದೆ’ ಎಂದು ಮಿಥಾಲಿ ಹೇಳಿದ್ದಾರೆ.

ಭಾರತ ವಿರುದ್ದದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 9 ವಿಕೆಟ್ ಕಳೆದುಕೊಂಡು 396 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಮೊದಲ ವಿಕೆಟ್‌ಗೆ 167 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟಿತು. ಆದರೆ ಈ ಇಬ್ಬರು ಆಟಗಾರ್ತಿಯರ ವಿಕೆಟ್ ಪತನದ ಬಳಿಕ ದಿಢೀರ್ ಕುಸಿತ ಕಂಡ ಮಿಥಾಲಿ ಪಡೆ 231 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಫಾಲೋ ಆನ್‌ಗೆ ಸಿಲುಕಿತು. ಎರಡನೇ ಇನಿಂಗ್ಸ್‌ನಲ್ಲಿ ಶಫಾಲಿ, ದೀಪ್ತಿ ಶರ್ಮಾ, ಸ್ನೆಹ್ ರಾಣಾ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಪಂದ್ಯ ಡ್ರಾ ಆಗುವಂತೆ ಮಾಡುವಲ್ಲಿ ಯಶಸ್ವಿಯಾದರು.

ಭಾರತದ ಟೋಕಿಯೋ ಒಲಿಂಪಿಕ್ಸ್ ಅಭಿಯಾನಕ್ಕೆ ಬಿಸಿಸಿಐ 10 ಕೋಟಿ ರೂ ನೆರವು!

ಟೆಸ್ಟ್‌ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಭಾರತ ಮಹಿಳಾ ತಂಡವು 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇಂಗ್ಲೆಂಡ್ ವಿರುದ್ದದ ಸೀಮಿತ ಓವರ್‌ಗಳ ಸರಣಿ ಜೂನ್ 27ರಿಂದ ಆರಂಭವಾಗಲಿದೆ.

click me!