Ind vs SA: 8000 ಟೆಸ್ಟ್ ರನ್ ಹೊಸ್ತಿಲಲ್ಲಿ ಕೊಹ್ಲಿ, ಸೆಹ್ವಾಗ್ ದಾಖಲೆ ಸರಿಗಟ್ಟುತ್ತಾರಾ ವಿರಾಟ್..?

By Suvarna NewsFirst Published Dec 24, 2021, 10:14 AM IST
Highlights

* ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ಕ್ಷಣಗಣನೆ

* ಉಭಯ ತಂಡಗಳ ನಡುವಿನ ಟೆಸ್ಟ್ ಸರಣಿ ಡಿಸೆಂಬರ್ 26ರಿಂದ ಆರಂಭ

* ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಲು ಸಜ್ಜಾದ ಕಿಂಗ್ ಕೊಹ್ಲಿ

ಸೆಂಚೂರಿಯನ್(ಡಿ.24)‌: ಕಳೆದ 2 ವರ್ಷದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸದ ಭಾರತ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ (Virat Kohli), ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರನ್‌ ಮಳೆ ಸುರಿಸಲು ಕಾತರಿಸುತ್ತಿದ್ದಾರೆ. 3 ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಕೆಲ ಮಹತ್ವದ ಮೈಲಿಗಲ್ಲುಗಳನ್ನು ತಲುಪಲು ಎದುರು ನೋಡುತ್ತಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 8000 ರನ್‌ ಮೈಲಿಗಲ್ಲು ತಲುಪಲು ವಿರಾಟ್‌ಗೆ ಇನ್ನು 199 ರನ್‌ ಬೇಕಿದೆ. ಅವರು ಸದ್ಯ 7801 ರನ್‌ ಗಳಿಸಿದ್ದಾರೆ. 

ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಇನ್ನು ಕೇವಲ 199 ರನ್‌ ಬಾರಿಸಿದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ 8,000 ರನ್ ಬಾರಿಸಿದ ಭಾರತದ ಆರನೇ ಬ್ಯಾಟರ್ ಎನ್ನುವ ಕೀರ್ತಿಗೂ ಭಾಜನರಾಗಲಿದ್ದಾರೆ. ಈಗಾಗಲೇ ಸುನಿಲ್ ಗವಾಸ್ಕರ್ (Sunil Gavaskar), ಸಚಿನ್ ತೆಂಡುಲ್ಕರ್(Sachin Tendulkar), ರಾಹುಲ್ ದ್ರಾವಿಡ್(Rahul Dravid), ವಿರೇಂದ್ರ ಸೆಹ್ವಾಗ್(Virender Sehwag) ಹಾಗೂ ವಿವಿಎಸ್‌ ಲಕ್ಷ್ಮಣ್(VVS Laxman) ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 8,000+ ರನ್ ಬಾರಿಸಿದ್ದಾರೆ. 33 ವರ್ಷದ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಸೆಂಚುರಿ ಬಾರಿಸಿಲ್ಲ. ಒಂದು ವೇಳೆ ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲೇ ಕೊಹ್ಲಿ 199 ರನ್‌ ಬಾರಿಸಿದರೆ, ಭಾರತ ಪರ ಅತಿವೇಗವಾಗಿ 8 ಸಾವಿರ ರನ್‌ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರೇಂದ್ರ ಸೆಹ್ವಾಗ್ ಜತೆ ಜಂಟಿ ಮೂರನೇ ಸ್ಥಾನ ಹಂಚಿಕೊಳ್ಳಲಿದ್ದಾರೆ. ಸಚಿನ್ ತೆಂಡುಲ್ಕರ್ 154 ಇನಿಂಗ್ಸ್‌ಗಳಲ್ಲಿ 8 ಸಾವಿರ ರನ್ ಬಾರಿಸಿದ್ದರೆ, ರಾಹುಲ್ ದ್ರಾವಿಡ್ 158 ಇನಿಂಗ್ಸ್‌ಗಳಲ್ಲಿ 8,000 ರನ್ ಬಾರಿಸಿದ್ದರು. ಇನ್ನು ಸೆಹ್ವಾಗ್ 160 ಇನಿಂಗ್ಸ್‌ಗಳಲ್ಲಿ 8 ಸಾವಿರ ರನ್ ಬಾರಿಸಿದ್ದರು.

ಇನ್ನು ಸರಣಿಯಲ್ಲಿ ಮೂರೂ ಪಂದ್ಯಗಳನ್ನು ಆಡಿದರೆ ತಮ್ಮ ವೃತ್ತಿಬದುಕಿನಲ್ಲಿ ವಿರಾಟ್‌ 100 ಟೆಸ್ಟ್‌ಗಳನ್ನು ಪೂರೈಸಿದ ಸಾಧನೆ ಮಾಡಲಿದ್ದಾರೆ. ಸದ್ಯ 97 ಟೆಸ್ಟ್‌ಗಳನ್ನು ಆಡಿರುವ ಕೊಹ್ಲಿಗೆ ಸರಣಿಯ 3ನೇ ಪಂದ್ಯ 100ನೇ ಆಗಲಿದೆ. ಸರಣಿಯಲ್ಲಿ ಒಂದು ಶತಕ ಬಾರಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್‌(71) ಜೊತೆ ಜಂಟಿ 2ನೇ ಸ್ಥಾನಕ್ಕೇರಲಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ನಾಯಕ ಎನ್ನುವ ದಾಖಲೆ ಬರೆಯಲಿದ್ದಾರೆ. ಸದ್ಯ ಕೊಹ್ಲಿ ನಾಯಕನಾಗಿ 41 ಶತಕ ಬಾರಿಸಿದ್ದು, ಪಾಂಟಿಂಗ್‌ (41) ಜೊತೆ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ.

Ind vs SA Test Series: ಕೊಹ್ಲಿ-ರಹಾನೆವರೆಗೆ 5 ದಾಖಲೆ ಬರೆಯಲು ಸಜ್ಜಾಗಿದ್ದಾರೆ ಈ ಕ್ರಿಕೆಟಿಗರು..!

ಕೊಹ್ಲಿ ಬ್ಯಾಟಿಂಗ್ ರೀತಿಯೇ ಫೀಲ್ಡಿಂಗ್‌ನಲ್ಲೂ ಶತಕ ಪೂರೈಸಲು ಸಜ್ಜಾಗಿದ್ದಾರೆ. ವಿರಾಟ್ ಫೀಲ್ಡಿಂಗ್‌ನಲ್ಲಿ ಇನ್ನು ನಾಲ್ಕು ಕ್ಯಾಚ್ ಹಿಡಿದರೆ, ಕ್ಯಾಚ್‌ನಲ್ಲಿ ಸೆಂಚುರಿ ಬಾರಿಸಿದಂತಾಗುತ್ತದೆ. ಕೊಹ್ಲಿ ಹಾಗೂ ರಹಾನೆ ಇಬ್ಬರಲ್ಲಿ ಯಾರು ಮೊದಲು ಕ್ಯಾಚ್‌ನಲ್ಲಿ ಸೆಂಚುರಿ ಬಾರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಅಜಿಂಕ್ಯ ರಹಾನೆ(Ajinkya Rahane) ಕ್ಯಾಚ್‌ನಲ್ಲಿ ಶತಕ ಪೂರೈಸಲು ಇನ್ನು ಮೂರು ಬಲಿ ಪಡೆಯಬೇಕಿದೆ.

ಎಲ್ಲಕ್ಕಿಂತ ಮುಖ್ಯವಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದರೆ ಈ ಸಾಧನೆ ಮಾಡಿದ ಭಾರತದ ಮೊದಲ ನಾಯಕ ಎನ್ನುವ ದಾಖಲೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. 2018ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಮೊದಲ ನಾಯಕ ಎನಿಸಿಕೊಂಡಿದ್ದ ವಿರಾಟ್ ಕೊಹ್ಲಿ ಇದೀಗ ಹರಿಣಗಳ ನಾಡಿನಲ್ಲಿ ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದ್ದಾರೆ.

click me!