ಇಂದು ಇಂಡೋ-ವಿಂಡೀಸ್‌ 4ನೇ ಟಿ20 ಫೈಟ್‌; ಗೆದ್ದರಷ್ಟೇ ಭಾರತದ ಸರಣಿ ಕೈವಶ ಕನಸು ಜೀವಂತ..!

By Naveen Kodase  |  First Published Aug 12, 2023, 10:41 AM IST

ಇಂದು ಭಾರತ-ವೆಸ್ಟ್ ಇಂಡೀಸ್ 4ನೇ ಟಿ20 ಪಂದ್ಯ
2-1 ಅಂತರದಲ್ಲಿ ಮುನ್ನಡೆಯಲ್ಲಿರುವ ಆತಿಥೇಯ ವೆಸ್ಟ್ ಇಂಡೀಸ್
ಅಮೆರಿಕದ ಲಾಡರ್‌ಹಿಲ್‌ನಲ್ಲಿ ನಡೆಯಲಿರುವ ಪಂದ್ಯ


ಲಾಡರ್‌ಹಿಲ್‌(ಅಮೆರಿಕ): ಸತತ 11 ದ್ವಿಪಕ್ಷೀಯ ಟಿ20 ಸರಣಿ ಗೆಲುವುಗಳ ದಾಖಲೆ ಹೊಂದಿರುವ ಭಾರತ, ತನ್ನ ಜಯದ ನಾಗಾಲೋಟವನ್ನು ಮುಂದುವರಿಸಲು ಕಾತರಿಸುತ್ತಿದ್ದು, ವಿಂಡೀಸ್‌ ವಿರುದ್ಧ ಭಾನುವಾರ 4ನೇ ಟಿ20 ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಲು ಎದುರು ನೋಡುತ್ತಿದೆ. ಮೊದಲೆರಡು ಪಂದ್ಯಗಳನ್ನು ಸೋತಿದ್ದ ಭಾರತ, 3ನೇ ಟಿ20ಯಲ್ಲಿ ಜಯಭೇರಿ ಬಾರಿಸಿ ಸರಣಿ ಜಯದ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಬಾಕಿ ಇರುವ 2 ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವುದು ಹಾರ್ದಿಕ್‌ ಪಡೆ ಮುಂದಿರುವ ಗುರಿ.

ಯಶಸ್ವಿ ಜೈಸ್ವಾಲ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ಮೂರೂ ಪಂದ್ಯಗಳಲ್ಲಿ ಒಂದಂಕಿ ಮೊತ್ತಕ್ಕೆ ಔಟ್‌ ಆಗಿರುವ ಶುಭ್‌ಮನ್‌ ಗಿಲ್‌ ಮೇಲೆ ಒತ್ತಡವಿದೆ. ಇನ್ನು ಏಕದಿನ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಬಹುದು ಎನ್ನಲಾಗುತ್ತಿರುವ ತಿಲಕ್‌ ವರ್ಮಾ ಆಕರ್ಷಕ ಆಟ ಮುಂದುವರಿಸಲು ಕಾಯುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಭಾರತ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು.

Latest Videos

undefined

ವಿರಾಟ್ ಕೊಹ್ಲಿ ಬಳಿಯಿರುವ ಟಾಪ್ 10 ಕಾಸ್ಟ್ಲಿ ವಾಚ್‌ಗಳಿವು..! ಒಂದು ವಾಚ್‌ ಬೆಲೆ 100 ಕುಟುಂಬಗಳ ವರ್ಷದ ಆದಾಯ..!

ಭಾರತ ತಂಡದ ಪರ ಶುಭ್‌ಮನ್‌ ಗಿಲ್ ಫಾರ್ಮ್‌ಗೆ ಮರಳಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಇನ್ನು ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ. ಸ್ಯಾಮ್ಸನ್, ಏಕದಿನ ಕ್ರಿಕೆಟ್‌ನಲ್ಲಿ ತೋರುವ ಪ್ರದರ್ಶನ ಟಿ20 ಕ್ರಿಕೆಟ್‌ನಲ್ಲಿ ಮೂಡಿ ಬಂದಿಲ್ಲ. ಕಳೆದ ಪಂದ್ಯದಲ್ಲಿ ಸಂಜುಗೆ ಬ್ಯಾಟ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇಂದಾದರೂ ಸಂಜುಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗುತ್ತಾ ಕಾದು ನೋಡಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಆರ್ಶದೀಪ್ ಸಿಂಗ್ ಕೊಂಚ ದುಬಾರಿ ಯಾಗುತ್ತಿರುವುದು ತಂಡದ ತಲೆನೋವು ಹೆಚ್ಚುವಂತೆ ಮಾಡಿದೆ. ಕುಲ್ಚಾ ಜೋಡಿ ವಿಂಡೀಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಜ್ಜಾಗಿದ್ಧಾರೆ. 

ಮತ್ತೊಂದೆಡೆ ವಿಂಡೀಸ್‌, ರೋವ್ಮನ್‌ ಪೋವೆಲ್‌ರ ನಾಯಕತ್ವದಲ್ಲಿ ತನ್ನ ಟಿ20 ತಂಡವನ್ನು ಹೊಸದಾಗಿ ಕಟ್ಟಲು ಕಸರತ್ತು ನಡೆಸುತ್ತಿದೆ. ಜೊತೆಗೆ 2017ರ ಬಳಿಕ ಮೊದಲ ಬಾರಿಗೆ ಸತತ 2 ಟಿ20 ಸರಣಿಗಳನ್ನು ಗೆಲ್ಲಲು ಹಪಹಪಿಸುತ್ತಿದೆ. ಈ ವರ್ಷ ಮಾರ್ಚ್‌ನಲ್ಲಿ ವಿಂಡೀಸ್‌, ದ.ಆಫ್ರಿಕಾದಲ್ಲಿ 2-1ರಲ್ಲಿ ಸರಣಿ ಗೆದ್ದಿತ್ತು. ವಿಂಡೀಸ್‌ ತಂಡದಲ್ಲಿ ಕೆಲ ಬದಲಾವಣೆ ನಿರೀಕ್ಷೆ ಮಾಡಲಾಗಿದೆ. ನಿಕೋಲಸ್ ಪೂರನ್ ಅವರನ್ನು ಆದಷ್ಟು ಬೇಗ ಕಟ್ಟಿಹಾಕಿದರಷ್ಟೇ ಟೀಂ ಇಂಡಿಯಾಗೆ ಗೆಲುವು ಸುಲಭವಾಗಲಿದೆ.

ಸಿಕ್ಕ ಅವಕಾಶಗಳನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ ಸಂಜು ಸ್ಯಾಮ್ಸನ್‌..!

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಯಶಸ್ವಿ ಜೈಸ್ವಾಲ್‌, ಶುಭ್‌ಮನ್‌ ಗಿಲ್‌, ಸೂರ್ಯಕುಮಾರ್ ಯಾದವ್, ತಿಲಕ್‌ ವರ್ಮಾ, ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ(ನಾಯಕ), ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ಅರ್ಶ್‌ದೀಪ್‌ ಸಿಂಗ್, ಮುಕೇಶ್‌ ಕುಮಾರ್, ಯುಜುವೇಂದ್ರ ಚಹಲ್‌.

ವಿಂಡೀಸ್‌: ಕೈಲ್ ಮೇಯರ್ಸ್‌, ಬ್ರೆಂಡನ್ ಕಿಂಗ್‌, ಜಾನ್ಸನ್‌ ಚಾರ್ಲ್ಸ್‌, ನಿಕೋಲಸ್ ಪೂರನ್‌, ರೋವ್ಮನ್ ಪೋವೆಲ್‌(ನಾಯಕ), ಶಿಮ್ರೊನ್ ಹೆಟ್ಮೇಯರ್‌, ಜೇಸನ್ ಹೋಲ್ಡರ್‌/ರೋಸ್ಟನ್ ಚೇಸ್‌, ರೊಮ್ಯಾರಿಯೊ ಶೆಫರ್ಡ್‌, ಅಕೇಲ್ ಹೊಸೈನ್‌, ಅಲ್ಜಾರಿ ಜೋಸೆಫ್‌, ಒಬೆಡ್ ಮೆಕಾಯ್‌.

ಪಂದ್ಯ: ರಾತ್ರಿ 8ಕ್ಕೆ
ನೇರ ಪ್ರಸಾರ: ಜಿಯೋ ಸಿನಿಮಾ, ಡಿಡಿ ಚಂದನ, ಡಿಡಿ ಸ್ಪೋರ್ಟ್ಸ್

ಪಿಚ್‌ ರಿಪೋರ್ಟ್‌

ಇಲ್ಲಿ ತಾನಾಡಿದ ಕೊನೆಯ 2 ಟಿ20 ಪಂದ್ಯಗಳಲ್ಲಿ ಭಾರತ ಮೊದಲು ಬ್ಯಾಟ್‌ ಮಾಡಿ ಕ್ರಮವಾಗಿ 191, 188 ರನ್‌ ಕಲೆಹಾಕಿತ್ತು. ಎರಡೂ ಪಂದ್ಯಗಳಲ್ಲಿ ಜಯಿಸಿತ್ತು. ಇಲ್ಲಿ ನಡೆದಿರುವ ಒಟ್ಟು 13 ಅಂ.ರಾ. ಟಿ20 ಪಂದ್ಯಗಳಲ್ಲಿ 11ರಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿದೆ. ಆದರೆ ಶನಿವಾರ ಮಳೆ ಬೀಳುವ ಸಾಧ್ಯತೆ ಇರುವ ಕಾರಣ, ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡಲು ನಿರ್ಧರಿಸಬಹುದು.

click me!