ಲಂಕಾದಲ್ಲಿ 18 ವರ್ಷ ಸೋಲದ ಭಾರತಕ್ಕೆ ಈ ಬಾರಿ ಅಗ್ನಿಪರೀಕ್ಷೆ!

Kannadaprabha News   | Kannada Prabha
Published : Aug 11, 2026, 08:45 AM IST
rishabh pant test cricket

ಸಾರಾಂಶ

9 ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಆಡಲಿರುವ ಭಾರತ, ಅಲ್ಲಿ ಉತ್ತಮ ದಾಖಲೆ ಹೊಂದಿದೆ. ಆದರೆ, ಇತ್ತೀಚೆಗೆ ಗೌತಮ್ ಗಂಭೀರ್ ಕೋಚಿಂಗ್ ಅವಧಿಯಲ್ಲಿ ಎದುರಾದ ಐತಿಹಾಸಿಕ ಸರಣಿ ಸೋಲುಗಳಿಂದಾಗಿ, ಈ ಪ್ರವಾಸವು ತಂಡಕ್ಕೆ ಕಠಿಣ ಅಗ್ನಿಪರೀಕ್ಷೆಯಾಗಿದೆ.

ಕೊಲಂಬೊ: ಭಾರತ ತಂಡ 9 ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ಟೆಸ್ಟ್‌ ಸರಣಿ ಆಡಲು ಸಜ್ಜಾಗುತ್ತಿದೆ. ಆಗಸ್ಟ್‌ 15ರಿಂದ 2 ಪಂದ್ಯಗಳ ಸರಣಿ ನಡೆಯಲಿದೆ. ಲಂಕಾ ವಿರುದ್ಧ ಭಾರತದ ದಾಖಲೆ, ಈಗಿನ ತಂಡದ ಸಾಮರ್ಥ್ಯ ಗಮನಿಸಿದರೆ ಭಾರತಕ್ಕೆ ಸರಣಿ ಗೆಲುವು ಸಾಧ್ಯವಿದೆ. ಆದರೆ ಕಳೆದ 2 ವರ್ಷಗಳಲ್ಲಿ ಎದುರಾಗಿರುವ 3 ಐತಿಹಾಸಿಕ ಸರಣಿ ಸೋಲುಗಳು, ಭಾರತಕ್ಕೆ ಲಂಕಾದಲ್ಲೂ ಸರಣಿ ಗೆಲುವು ಅಷ್ಟು ಸುಲಭವೇನಲ್ಲ ಎಂಬುದನ್ನು ಸೂಚಿಸುತ್ತಿದೆ.

ಭಾರತ-ಲಂಕಾ ತಂಡಗಳು 1982ರಿಂದಲೇ ಟೆಸ್ಟ್‌ ಸರಣಿ ಆಡುತ್ತಿವೆ. ಭಾರತ ಮೊದಲ ಬಾರಿ ಲಂಕಾದಲ್ಲಿ ಟೆಸ್ಟ್‌ ಆಡಿದ್ದು 1985ರಲ್ಲಿ. ಅದರಲ್ಲಿ ಲಂಕಾ ಗೆದ್ದಿತ್ತು. ಆ ಬಳಿಕ ಭಾರತ ತಂಡ ಲಂಕಾ ಪ್ರವಾಸ ಕೈಗೊಂಡಿದೆ. ಆದರೆ 2008ರ ಬಳಿಕ ಲಂಕಾದಲ್ಲಿ ಭಾರತ ತಂಡ ಟೆಸ್ಟ್‌ ಸರಣಿ ಸೋತಿಲ್ಲ. 2010ರಲ್ಲಿ ಸರಣಿ ಡ್ರಾಗೊಂಡಿದ್ದರೆ, 2015, 2017ರ ಸರಣಿಗಳಲ್ಲಿ ಭಾರತ ಗೆದ್ದಿತ್ತು. ಒಟ್ಟಾರೆ ಕಳೆದ 18 ವರ್ಷಗಳಲ್ಲಿ ಭಾರತ ತಂಡ ಲಂಕಾದಲ್ಲಿ ಟೆಸ್ಟ್‌ ಸರಣಿ ಸೋತಿಲ್ಲ. ಭಾರತ ಹಾಗೂ ಲಂಕಾ ಎರಡೂ ದೇಶಗಳಲ್ಲಿ 2008ರ ಬಳಿಕ ನಡೆದ ಒಟ್ಟು 6 ಟೆಸ್ಟ್‌ ಸರಣಿಗಳಲ್ಲಿ ಭಾರತ ಅಜೇಯವಾಗಿದೆ. 5 ಸರಣಿಗಳಲ್ಲಿ ಟೀಂ ಇಂಡಿಯಾ ಗೆದ್ದಿದ್ದು, 1 ಸರಣಿ ಡ್ರಾದಲ್ಲಿ ಅಂತ್ಯಗೊಂಡಿದೆ. ಕಳೆದ 10 ಟೆಸ್ಟ್‌ ಪಂದ್ಯಗಳಲ್ಲೂ ಭಾರತ ಅಜೇಯವಾಗಿದ್ದು, ಈ ಗೆಲುವಿನ ಓಟವನ್ನು ಈ ಬಾರಿಯೂ ಮುಂದುವರಿಸುವ ನಿರೀಕ್ಷೆಯಲ್ಲಿದೆ.

ಸತತ ಸೋಲಿನ ಶಾಕ್‌:

ಲಂಕಾ ವಿರುದ್ಧ ಭಾರತದ ದಾಖಲೆ ಅತ್ಯುತ್ತಮವಾಗಿದೆ. ಆದರೆ ಟೆಸ್ಟ್‌ ಸರಣಿಗಳಲ್ಲಿ ಭಾರತದ ಇತ್ತೀಚಿನ ಪ್ರದರ್ಶನ ತೃಪ್ತಿಕರವಾಗಿಲ್ಲ. ಅದರಲ್ಲೂ ಗೌತಮ್ ಗಂಭೀರ್ ಕೋಚಿಂಗ್‌ ಅವಧಿಯಲ್ಲಿ ತಂಡಕ್ಕೆ 3 ಐತಿಹಾಸಿಕ ಸರಣಿ ಸೋಲು ಎದುರಾಗಿದೆ. ಹೀಗಾಗಿಯೇ ಲಂಕಾ ಸರಣಿಯಲ್ಲಿ ಭಾರತಕ್ಕೆ ಅಗ್ನಿಪರೀಕ್ಷೆ ಎದುರಾಗುವುದು ಖಚಿತ.

2024ರ ಅಕ್ಟೋಬರ್‌-ನವೆಂಬರ್‌ನಲ್ಲಿ ಭಾರತ ತಂಡ ತವರಿನಲ್ಲೇ ನ್ಯೂಜಿಲೆಂಡ್‌ ವಿರುದ್ಧ 0-3 ಅಂತರದಲ್ಲಿ ಹೀನಾಯವಾಗಿ ಸರಣಿ ಸೋತಿತ್ತು. ಅದು ಭಾರತಕ್ಕೆ ತವರಿನಲ್ಲಿ 12 ವರ್ಷಗಳಲ್ಲೇ ಎದುರಾದ ಮೊದಲ ಸರಣಿ ಸೋಲು. ಅದೇ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ 5 ಪಂದ್ಯಗಳ ಸರಣಿಯನ್ನು 1-3 ಅಂತರದಲ್ಲಿ ಕಳೆದುಕೊಂಡಿತ್ತು. ಅದು ಆಸ್ಟ್ರೇಲಿಯಾ ವಿರುದ್ಧ 10 ವರ್ಷಗಳ ಬಳಿಕ ಭಾರತಕ್ಕೆ ಎದುರಾಗಿದ್ದ ಸೋಲು. ಕಳೆದ ವರ್ಷ ನವೆಂಬರ್‌ನಲ್ಲಿ ಭಾರತಕ್ಕೆ ಆಗಮಿಸಿದ್ದ ದಕ್ಷಿಣ ಆಫ್ರಿಕಾ ತಂಡ, 2 ಪಂದ್ಯಗಳ ಸರಣಿಯನ್ನು 0-2 ಅಂತರದಲ್ಲಿ ಕೈವಶಪಡಿಸಿಕೊಂಡಿತ್ತು. ಈ ಮೂಲಕ ಭಾರತ ತಂಡ ಬರೋಬ್ಬರಿ 25 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಟೆಸ್ಟ್‌ ಸರಣಿ ಸೋತಿತ್ತು.

ಅಭ್ಯಾಸ ಪಂದ್ಯದಲ್ಲಿ ಹೋರಾಡಿ ಗೆದ್ದಿರುವ ಭಾರತ

ಇನ್ನು, ಇತ್ತೀಚೆಗಷ್ಟೇ ಲಂಕಾದಲ್ಲಿ ಅಲ್ಲಿನ ಕ್ರಿಕೆಟ್‌ ಇಲೆವೆನ್‌ ತಂಡದ ವಿರುದ್ಧ ಅಭ್ಯಾಸ ಪಂದ್ಯವಾಡಿದ್ದ ಭಾರತ ದೊಡ್ಡ ಅಂತರದಲ್ಲಿ ಗೆಲುವೇನೂ ಸಾಧಿಸಿಲ್ಲ. ಬೌಲಿಂಗ್‌ನಲ್ಲಿ ಚಚ್ಚಿಸಿಕೊಂಡಿದ್ದ ತಂಡ, ಕೊನೆ ಕ್ಷಣದ ಮ್ಯಾಜಿಕ್‌ನಿಂದಾಗಿ ರೋಚಕ ಜಯಗಳಿಸಿತ್ತು. ಹೀಗಾಗಿಯೇ ಲಂಕಾ ಸರಣಿಯಲ್ಲಿ ತಂಡಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರೋರಾತ್ರಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಟೀಮ್‌ ಇಂಡಿಯಾ ಮಾಜಿ ನಾಯಕ ಸೌರವ್‌ ಗಂಗೂಲಿ, ಆಗಿದ್ದೇನು?
ಬೆಂಗಳೂರಲ್ಲಿ ಇತ್ತು 40 ಎಕರೆ ಬಂಜರು ಭೂಮಿ.. ಜೈ ಶಾ, VVS ಜೋಡೆತ್ತುಗಳಾಗಿ 'ಕ್ರಿಕೆಟ್ ಅರಮನೆ' ಕಟ್ಟಿದ ರೋಚಕ ಸ್ಟೋರಿ