
ನವದೆಹಲಿ (ಆ.10): ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ (BCCI) ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಜೀವ ಬೆದರಿಕೆ ಕರೆ ಹಾಗೂ ಬೆದರಿಕೆ ಪತ್ರ ಬಂದಿದೆ. ಈ ಸಂಬಂಧ ಗಂಗೂಲಿ ಕುಟುಂಬಸ್ಥರು ಕೋಲ್ಕತ್ತಾದ ಠಾಕೂರ್‌ಪುಕುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಸೌರವ್ ಗಂಗೂಲಿ ಅವರ ಖಾಸಗಿ ಸಹಾಯಕರು ನೀಡಿದ ಮಾಹಿತಿಯಂತೆ, ಸೋಮವಾರ ಗಂಗೂಲಿ ಅವರ ಕಚೇರಿಗೆ ಅಂಚೆ/ಕೊರಿಯರ್ ಮೂಲಕ ಬಂದಿದ್ದ ಪತ್ರವೊಂದನ್ನು ತೆರೆದು ನೋಡಿದಾಗ ಬೆದರಿಕೆ ವಿಚಾರ ಬೆಳಕಿಗೆ ಬಂದಿದೆ. ಇಂಗ್ಲಿಷ್‌ನಲ್ಲಿ ಬರೆಯಲಾಗಿದ್ದ ಆ ಪತ್ರದಲ್ಲಿ, ಗಂಗೂಲಿ ಹಾಗೂ ಅವರ ಕುಟುಂಬವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಲಾಗಿತ್ತು.
ಕುಟುಂಬದ ಮೂಲಗಳ ಪ್ರಕಾರ, ಕಳೆದ ಆರು ತಿಂಗಳುಗಳಿಂದ ಈ ರೀತಿಯ ಬೆದರಿಕೆ ಪತ್ರಗಳು ಬರುತ್ತಿದ್ದವು. ಯಾರೋ ಪುಂಡರು ಅಥವಾ ಕಿಡಿಗೇಡಿಗಳು ಮಾಡುತ್ತಿರುವ ತರಲೆ ಇರಬಹುದು ಎಂದು ಭಾವಿಸಿ ಆರಂಭದಲ್ಲಿ ಇದನ್ನು ನಿರ್ಲಕ್ಷಿಸಲಾಗಿತ್ತು. ಆದರೆ, ನಿರಂತರವಾಗಿ ಪತ್ರಗಳು ಬರಲು ಪ್ರಾರಂಭಿಸಿದಾಗ ಅನುಮಾನಗೊಂಡು, ಇತ್ತೀಚಿನ ಪತ್ರಗಳಲ್ಲಿ ಅತ್ಯಂತ ಹಿಂಸಾತ್ಮಕ ಭಾಷೆಯನ್ನು ಬಳಸಿರುವುದನ್ನು ಕಂಡು ಕೊನೆಗೆ ಪೊಲೀಸ್ ದೂರು ನೀಡಲು ನಿರ್ಧರಿಸಿದ್ದಾರೆ.
ಗಂಗೂಲಿ ಕುಟುಂಬಸ್ಥರು ಠಾಕೂರ್‌ಪುಕುರ್ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದು, ರಾಜ್ಯ ಭದ್ರತಾ ವಿಭಾಗಕ್ಕೂ (State Security Department) ಈ ಕುರಿತು ಮಾಹಿತಿ ನೀಡಿದ್ದಾರೆ. ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿರುವ ಪೊಲೀಸರಿಗೆ, ಈ ಪತ್ರ ಕೊರಿಯರ್ ಮೂಲಕ ಗಂಗೂಲಿ ಅವರ ಮನೆಗೆ ತಲುಪಿರುವುದು ಗೊತ್ತಾಗಿದೆ. ಪತ್ರದ ಕವರ್ ಮೇಲೆ 'ಅರುಣ್ ಕುಮಾರ್' ಎಂಬ ಹೆಸರು ಹಾಗೂ ಬೆಳಗರಿಯಾ ಪ್ರದೇಶದ ವಿಳಾಸವನ್ನು ನಮೂದಿಸಲಾಗಿತ್ತು.
ತನಿಖಾಧಿಕಾರಿಗಳು ಪತ್ರದಲ್ಲಿದ್ದ ಫೋನ್ ಸಂಖ್ಯೆಯನ್ನು ಪರಿಶೀಲಿಸಿದ್ದು, ಟ್ರೂಕಾಲರ್‌ನಲ್ಲೂ (Truecaller) ಅದೇ 'ಅರುಣ್ ಕುಮಾರ್' ಎಂಬ ಹೆಸರೇ ಕಾಣಿಸಿಕೊಂಡಿದೆ. ಪ್ರಸ್ತುತ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ನಿಜವಾಗಿಯೂ ಅರುಣ್ ಕುಮಾರ್ ಎಂಬ ವ್ಯಕ್ತಿಯೇ ಈ ಕೃತ್ಯ ಎಸಗಿದ್ದಾನೆಯೇ ಅಥವಾ ಆತನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಯಾರಾದರೂ ಕಿಡಿಗೇಡಿತನ ಮಾಡಿದ್ದಾರೆಯೇ ಎಂಬುದನ್ನು ಪತ್ತೆಹಚ್ಚುತ್ತಿದ್ದಾರೆ.
ಸೌರವ್ ಗಂಗೂಲಿ ಅವರಿಗೆ ಇಂತಹ ಜೀವ ಬೆದರಿಕೆ ಪತ್ರಗಳು ಬರುತ್ತಿರುವುದು ಇದೇ ಮೊದಲೇನಲ್ಲ. ಹಿಂದೆ 2017 ರಲ್ಲೂ ಅವರಿಗೆ ಬೆದರಿಕೆ ಪತ್ರ ಬಂದಿತ್ತು. ಆಗ ತನಿಖೆ ನಡೆಸಿದ್ದ ಪೊಲೀಸರು ಪಶ್ಚಿಮ ಮಿಡ್ನಾಪುರ ಜಿಲ್ಲೆಯ ವೃದ್ಧನೊಬ್ಬನನ್ನು ಬಂಧಿಸಿದ್ದರು. ಅಂದು ಗಂಗೂಲಿ ಅವರ ತಾಯಿಯ ಹೆಸರಿಗೆ ಬಂದಿದ್ದ ಬೆನಾಮಿ ಪತ್ರದಲ್ಲಿ, ಮಿಡ್ನಾಪುರ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಗಂಗೂಲಿ ಭಾಗವಹಿಸಬಾರದು ಎಂದು ಬೆದರಿಕೆ ಹಾಕಲಾಗಿತ್ತು. ಅದಕ್ಕೂ ಮುನ್ನ, 2008 ರಲ್ಲೂ ಗಂಗೂಲಿ ಅವರಿಗೆ ಬೆದರಿಕೆ ಪತ್ರ ಬಂದಿತ್ತು. ಈಗ ಮತ್ತೆ ನಿರಂತರವಾಗಿ ಬೆದರಿಕೆ ಪತ್ರಗಳು ಬರಲಾರಂಭಿಸಿರುವುದರಿಂದ ಗಂಗೂಲಿ ಕುಟುಂಬದ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪತ್ರ ರವಾನಿಸಿದ ಕಿಡಿಗೇಡಿಯನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.