ಕೊಲಂಬೊ ಟೆಸ್ಟ್‌ನಲ್ಲಿ ಭಾರತಕ್ಕೆ ಭರ್ಜರಿ ಗೆಲುವಿನ ನಿರೀಕ್ಷೆ: ಫಾಲೋಆನ್ ಬಳಿಕವೂ ಸಂಕಷ್ಟದಲ್ಲಿ ಲಂಕಾ

Kannadaprabha News   | Kannada Prabha
Published : Aug 27, 2026, 07:44 AM IST
Team India vs Sri Lanka 2nd Test

ಸಾರಾಂಶ

ಭಾರತದ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 290 ರನ್‌ಗಳಿಗೆ ಆಲೌಟಾದ ಶ್ರೀಲಂಕಾ ಫಾಲೋ-ಆನ್‌ಗೆ ತುತ್ತಾಯಿತು. ಎರಡನೇ ಇನ್ನಿಂಗ್ಸ್‌ನಲ್ಲೂ ಹೋರಾಟ ನಡೆಸಿದರೂ, ನಾಲ್ಕನೇ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದ್ದು, ಅಂತಿಮ ದಿನದಂದು ಭಾರತ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.

ಕೊಲಂಬೊ: ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡ 2ನೇ ಟೆಸ್ಟ್‌ ಪಂದ್ಯದಲ್ಲಿ ಫಾಲೋ-ಅನ್‌ಗೆ ತುತ್ತಾಗಿದೆ. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ತಂಡ ಹೋರಾಟ ಪ್ರದರ್ಶಿಸುತ್ತಿದ್ದರೂ ಭಾರತ ವಿರುದ್ಧ ಸೋಲುವ ಹಂತದಲ್ಲಿದೆ. ಇದರೊಂದಿಗೆ ಭಾರತ ತಂಡ ಸರಣಿ ಗೆಲುವಿನ ವಿಶ್ವಾಸದಲ್ಲಿದ್ದು, ಪಂದ್ಯದಲ್ಲಿ ಗುರುವಾರದ ಕ್ಲೈಮ್ಯಾಕ್ಸ್‌ ಮಾತ್ರ ಬಾಕಿಯಿದೆ.

ಭಾರತ 9 ವಿಕೆಟ್‌ಗೆ 503 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 3ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 265 ರನ್‌ ಗಳಿಸಿ, ಇನ್ನೂ 238 ರನ್‌ ಹಿನ್ನಡೆಯಲ್ಲಿತ್ತು. ಪಂದ್ಯದ 4ನೇ ದಿನವಾದ ಬುಧವಾರ ಮತ್ತೆ ಬ್ಯಾಟಿಂಗ್‌ ಆರಂಭಿಸಿದ ಲಂಕಾ ತಂಡ 290 ರನ್‌ಗೆ ಆಲೌಟಾಯಿತು. ಸೋನಲ್‌ ದಿನುಶಾ(103 ರನ್‌) ಶತಕ ಪೂರೈಸಿದರೂ, ತಂಡವನ್ನು ಫಾಲೋ ಆನ್‌ನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. ಲಂಕಾ ಕೇವಲ 13 ರನ್‌ ಹೆಚ್ಚುವರಿ ಗಳಿಸಿದ್ದರೆ ಫಾಲೋಆನ್‌ನಿಂದ ಪಾರಾಗಬಹುದಿತ್ತು. ಪ್ರಸಿದ್ಧ್‌ ಕೃಷ್ಣ ಹಾಗೂ ಮಾನವ್‌ ಸುಥಾರ್‌ ತಲಾ 3 ವಿಕೆಟ್‌ ಪಡೆದರು.

ಭಾರತಕ್ಕೆ ಭಾರೀ ಮುನ್ನಡೆ; ಲಂಕಾ ಮೇಲೆ ಫಾಲೋ ಆನ್ ಹೇರಿದ ಗಿಲ್ ಪಡೆ

ಮೊದಲ ಇನ್ನಿಂಗ್ಸ್‌ನಲ್ಲಿ 213 ರನ್‌ ಮುನ್ನಡೆ ಪಡೆದ ಭಾರತ ತಂಡ, ಲಂಕಾ ಮೇಲೆ ಫಾಲೋ ಆನ್‌ ಹೇರಿ ಆತಿಥೇಯರನ್ನು ಮತ್ತೆ ಬ್ಯಾಟಿಂಗ್‌ಗೆ ಆಹ್ವಾನಿಸಿತು. ತಂಡದ ಮೊತ್ತ 5 ರನ್‌ ಆಗುವಷ್ಟರಲ್ಲೇ ಸಿರಾಜ್ ಆಘಾತ ನೀಡಿದರು. ಬಳಿಕ ಲಂಕಾ ಚೇತರಿಕೆಯ ಆಟವಾಡಿತು. ಕಮಿಲ್‌ ಮಿಶಾರಾ(32) ಹಾಗೂ ಪಸಿಂದು ಸೂರ್ಯಬಂಡಾರ 2ನೇ ವಿಕೆಟ್‌ಗೆ 58 ರನ್‌ ಜೊತೆಯಾಟವಾಡಿದರು. 3ನೇ ವಿಕೆಟ್‌ಗೆ ಕಮಿಂಡು ಮೆಂಡಿಸ್‌ ಜೊತೆಗೂಡಿ ಪಸಿಂದು 115 ರನ್‌ ಸೇರಿಸಿದರು.

ತಂಡದ ಮೊತ್ತ 178 ಆಗಿದ್ದಾಗ ಕಮಿಂಡು ವಿಕೆಟ್‌ ಬಿತ್ತು. ಅಲ್ಲಿಂದ 40 ರನ್‌ ಸೇರಿಸುವಷ್ಟರಲ್ಲಿ ತಂಡದ ಪ್ರಮುಖ 4 ವಿಕೆಟ್‌ ಉರುಳಿದವು. 218 ರನ್‌ಗೆ ತಂಡ 6 ವಿಕೆಟ್‌ ಕಳೆದುಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್‌ ಬಾರಿಸಿದ್ದ ಪಸಿಂದು ಈ ಬಾರಿ ಶತಕ ಪೂರೈಸುವ ನಿರೀಕ್ಷೆಯಲ್ಲಿದ್ದರೂ, 92 ರನ್‌ ಗಳಿಸಿದ್ದಾಗ ಸುಥಾರ್‌ಗೆ ವಿಕೆಟ್‌ ಒಪ್ಪಿಸಿದರು.

ಸದ್ಯ ತಂಡ 6 ವಿಕೆಟ್‌ ನಷ್ಟದಲ್ಲಿ 229 ರನ್‌ ಗಳಿಸಿದ್ದು, ಕೇವಲ 16 ರನ್‌ ಮುನ್ನಡೆಯಲ್ಲಿದೆ. ಸೋನಲ್‌ ದಿನುಶಾ ಹಾಗೂ ಕೆಶಾರ ನುವಾಂಥ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಗುರುವಾರ ಪಂದ್ಯದ ಕೊನೆ ದಿನವಾಗಿದ್ದು, ಲಂಕಾವನ್ನು ಬೇಗನೇ ಆಲೌಟ್‌ ಮಾಡಿ, ಸುಲಭ ಗುರಿ ಪಡೆದು ಪಂದ್ಯ ಗೆಲ್ಲುವ ವಿಶ್ವಾಸ ಭಾರತಕ್ಕಿದೆ. ಕೊನೆ ಕ್ಷಣದ ಹೋರಾಟ ಪ್ರದರ್ಶಿಸಿ, ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿ ಗೆಲ್ಲಲು ಶ್ರೀಲಂಕಾ ಅಸಾಧಾರಣ ಆಟವಾಡಬೇಕಾಗಿದೆ.

ಸ್ಕೋರ್: ಭಾರತ 503/9 ಡಿಕ್ಲೇರ್‌, ಶ್ರೀಲಂಕಾ ಮೊದಲ ಇನ್ನಿಂಗ್ಸ್‌ 290/10 (ಸೋನಲ್‌ 103, ಪ್ರಸಿದ್ಧ್‌ 3-52, ಮಾನವ್‌ 3-85) ಮತ್ತು ಎರಡನೇ ಇನ್ನಿಂಗ್ಸ್‌ 229/6 (4ನೇ ದಿನದಂತ್ಯಕ್ಕೆ) (ಪಸಿಂದು 92, ಕಮಿಂಡು 55, ಕಮಿಲ್‌ 32, ಮಾನವ್‌ 2-81, ಸಿರಾಜ್‌ 1-11)

ಭಾರತ ಸ್ಪಿನ್ನರ್ 10 ನೋ ಬಾಲ್‌!

ಈ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್‌ಗಳು 10 ನೋಬಾಲ್‌ ಎಸೆದಿದ್ದಾರೆ. ಇದು ಕಳೆದ 5 ವರ್ಷಗಳಲ್ಲೇ ಭಾರತೀಯ ಸ್ಪಿನ್ನರ್‌ಗಳ ಗರಿಷ್ಠ ನೋಬಾಲ್‌. 2021ರಲ್ಲಿ ಇಂಗ್ಲೆಂಡ್‌ ವಿರುದ್ಧ ಚೆನ್ನೈ ಟೆಸ್ಟ್‌ನಲ್ಲಿ ಭಾರತೀಯ ಸ್ಪಿನ್ನರ್ಸ್‌ 14 ನೋಬಾಲ್ ಎಸೆದಿದ್ದರು. 2023ರಲ್ಲಿ ಮೀರ್ಪುರದಲ್ಲಿ ಬಾಂಗ್ಲಾ ವಿರುದ್ಧ ಅಫ್ಘಾನಿಸ್ತಾನ ಸ್ಪಿನ್ನರ್‌ಗಳು 15 ನೋಬಾಲ್‌ ಎಸೆದಿದ್ದು ದಾಖಲೆ.

88 ನೋಬಾಲ್

ಜಡೇಜಾ 2021ರಿಂದ ಟೆಸ್ಟ್‌ ಕ್ರಿಕೆಟ್‌ನಲ್ಲಿ 88 ನೋಬಾಲ್‌ ಎಸೆದಿದ್ದಾರೆ. ಸ್ಪಿನ್ನರ್‌ಗಳ ಪೈಕಿ ಇದು ಗರಿಷ್ಠ. ಪಾಕ್‌ನ ನೋಮಾನ್‌ ಅಲಿ(44 ನೋಬಾಲ್‌) 2ನೇ ಸ್ಥಾನದಲ್ಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: ಅಂದು ಕೋಟಿ ಅಭಿಮಾನಿಗಳ ಚಪ್ಪಾಳೆ, ಇಂದು ಸಣ್ಣ ನೌಕರಿ; ಬದುಕಿನ ಬಂಡಿ ಎಳೆಯಲು ಸಾಮಾನ್ಯ ಕೆಲಸಕ್ಕೆ ಇಳಿದ 5 ಕ್ರಿಕೆಟ್ ದಿಗ್ಗಜರು!
200 ಟೆಸ್ಟ್‌ ಮ್ಯಾಚ್‌ನಲ್ಲಿ ಸಚಿನ್‌ ಒಮ್ಮೆ ಮಾತ್ರ ಸ್ಟಂಪ್‌ ಔಟ್‌ ಆಗಿದ್ದಕ್ಕೆ ಕಾರಣ ನಾನೇ.. ಫನ್ನಿ ಸ್ಟೋರಿ ರಿವಿಲ್‌ ಮಾಡಿದ ಸೆಹ್ವಾಗ್‌