ಇಂದಿನಿಂದ ಭಾರತ vs ದ.ಆಫ್ರಿಕಾ ಟಿ20 ಕದನ; ಟಿ20 ವಿಶ್ವಕಪ್ ಫೈನಲ್‌ ಬಳಿಕ ಮೊದಲ ಬಾರಿ ಮುಖಾಮುಖಿ

By Naveen Kodase  |  First Published Nov 8, 2024, 9:15 AM IST

ಐಸಿಸಿ ಟಿ20 ವಿಶ್ವಕಪ್ ಫೈನಲ್ ಬಳಿಕ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇಂದು ಡರ್ಬನ್‌ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಡರ್ಬನ್: 2026ರ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ದೃಷ್ಟಿಯಿಂದ ಮಹತ್ವ ಪಡೆದಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ನಾಲ್ಕು ಪಂದ್ಯಗಳ ಟಿ20 ಸರಣಿಗೆ ಶುಕ್ರವಾರ ಚಾಲನೆ ಸಿಗಲಿದೆ. 4 ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಡರ್ಬನ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಟಿ20 ವಿಶ್ವಕಪ್ ಫೈನಲ್ ಬಳಿಕ ಉಭಯ ತಂಡಗಳು ಮೊದಲ ಬಾರಿ ಟಿ20ಯಲ್ಲಿ ಮುಖಾಮುಖಿಯಾಗುತ್ತಿದ್ದು, ಕುತೂಹಲ ಹೆಚ್ಚಿಸಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ತಂಡದಲ್ಲಿ ತಜ್ಞ ಟಿ20 ಆಟಗಾರರು ಇದ್ದಾರೆ. ಹೀಗಾಗಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಮತ್ತು ಸಿಕ್ಕ ಸ್ಥಾನ ಗಟ್ಟಿಗೊಳಿಸಲು ಪೈಪೋಟಿ ಹೆಚ್ಚಿದೆ. ಟಿ20ಯ ಹೊಸ ಆರಂಭಿಕ ಜೋಡಿಯಾಗಿರುವ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮನ್ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಲಿದ್ದಾರೆ ಎನ್ನುವ ಕುತೂಹಲವಿದೆ. ಅಭಿಷೇಕ್ ಜುಲೈನಲ್ಲಿ ಜಿಂಬಾಬೈ ವಿರುದ್ಧ 47 ಎಸೆತಕ್ಕೆ ಶತಕ ಬಾರಿಸಿದ್ದರು. ಆದರೆ ಬಳಿಕ 6 ಇನ್ನಿಂಗ್ಸ್‌ಗಳಲ್ಲಿ 59 ರನ್ ಮಾತ್ರ ಗಳಿಸಿದ್ದಾರೆ.  ಮತ್ತೊಂದೆಡೆ ಸಂಜು ಸ್ಥಿರ ಪ್ರದರ್ಶನ ನೀಡಲು ಕಾಯುತ್ತಿದ್ದಾರೆ. ನಾಯಕ ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ಅಕ್ಷರ್ ಪಟೇಲ್ ಕೂಡಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. 

Latest Videos

ಹಠ ಕೈಬಿಟ್ಟ ಪಿಸಿಬಿ: ಹೈಬ್ರಿಡ್ ಮಾದರಿ ಚಾಂಪಿಯನ್ಸ್ ಟ್ರೋಫಿಗೆ ಪಾಕ್ ಒಪ್ಪಿಗೆ?

ವೈಶಾಖ್‌ಗೆ ಸಿಗುತ್ತಾ ಚಾನ್ಸ್: ಕರ್ನಾಟಕದ ಯುವ ವೇಗಿ ವೈಶಾಖ್ ವಿಜಯ್‌ಕುಮಾರ್ ಕೂಡಾ ಸರಣಿಗೆ ಆಯ್ಕೆಯಾಗಿದ್ದು, ಅವಕಾಶದ ನಿರೀಕ್ಷೆಯಲ್ಲಿದ್ದಾರೆ.  ತಂಡದಲ್ಲಿರುವ 15 ಆಟಗಾರರ ಪೈಕಿ ವೈಶಾಖ್ ಜೊತೆಗೆ ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್ ಹಾಗೂ ಜಿತೇಶ್ ಶರ್ಮಾ ರಿಟೈನ್ ಆಗಿಲ್ಲ. ಹೀಗಾಗಿ ಐಪಿಎಲ್ ಹರಾಜಿಗೂ ಮುನ್ನ ತಮ್ಮ ಸಾಮರ್ಥ್ಯ ಮತ್ತೊಮ್ಮೆ ಸಾಬೀತು ಪಡಿಸುವ ಕಾತರದಲ್ಲಿದ್ದಾರೆ. 

ಸೇಡಿನ ಕದನ: ಮತ್ತೊಂದೆಡೆ ದ.ಆಫ್ರಿಕಾ ತಂಡ ಮಾರ್ಕರಮ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದ್ದು, ಟಿ20 ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ. ಡೇವಿಡ್ ಮಿಲ್ಲರ್, ಕ್ಲಾಸೆನ್, ಯಾನ್ಸನ್, ಟ್ರಿಸ್ಟಿನ್ ಸ್ಟಬ್ಸ್‌ ಸೇರಿ ಪ್ರಮುಖರು ತಂಡದಲ್ಲಿದ್ದಾರೆ.

ಭಾರತ 46ಕ್ಕೆ ಆಲೌಟಾಗಿದ್ದ ಬೆಂಗಳೂರು ಪಿಚ್‌ಗೆ ಅಚ್ಚರಿ ರೇಟಿಂಗ್ ನೀಡಿದ ಐಸಿಸಿ!

ಸಂಭವನೀಯ ಆಟಗಾರರ ಪಟ್ಟಿ:

ಭಾರತ: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ರಮಣ್‌ದೀಪ್ ಸಿಂಗ್, ಅಕ್ಷರ್ ಪಟೇಲ್, ಆವೇಶ್ ಖಾನ್, ಆರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ. 

ದ.ಆಫ್ರಿಕಾ: ರೀಜಾ ಹೆಂಡ್ರಿಕ್ಸ್, ರಿಕೆಲ್ಟನ್, ಏಯ್ಡನ್ ಮಾರ್ಕರಮ್ (ನಾಯಕ), ಟ್ರಿಸ್ಟಿನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸನ್/ ಗೆರಾಲ್ಡ್‌ ಕೋಟ್ಜೀ, ಸಿಮೆಲೇನ್, ಪೀಟರ್, ಕೇಶವ್ ಮಹರಾಜ್, ಬಾರ್ಟ್‌ಮನ್.

ಪಂದ್ಯ: ರಾತ್ರಿ 8.30ಕ್ಕೆ,
ಪ್ರಸಾರ: ಸ್ಪೋರ್ಟ್ಸ್ 18 ಚಾನೆಲ್, ಜಿಯೋ ಸಿನಿಮಾ.

ಪಿಚ್ ರಿಪೋರ್ಟ್: ಡರ್ಬನ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಹೆಚ್ಚು. ಇಲ್ಲಿ ಕಳೆದ 7 ಟಿ20 ಪಂದ್ಯಗಳ ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ 184. ಹೀಗಾಗಿ ಟಾಸ್ ಗೆಲ್ಲುವ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಇಲ್ಲಿ ಶುಕ್ರವಾರ ಮಳೆ ಬೀಳುವ ಸಾಧ್ಯತೆಯಿದೆ.

click me!