
ಅಹಮದಾಬಾದ್: 2026ರ ಟಿ20 ವಿಶ್ವಕಪ್‌ನ ಸೂಪರ್ 8 ಹಂತದಲ್ಲಿ ಭಾರತ ಇಂದು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಹವಾಮಾನ ವರದಿ ಒಂದು ಖುಷಿ ಸುದ್ದಿ ನೀಡಿದೆ. ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಂಜೆ 7 ಗಂಟೆಗೆ ಶುರುವಾಗಲಿರುವ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ.
ಹವಾಮಾನ ಇಲಾಖೆಯ ಪ್ರಕಾರ, ಪಂದ್ಯದ ವೇಳೆ ಅಥವಾ ಅದಕ್ಕೂ ಮುನ್ನ ಮಳೆ ಬರುವ ಯಾವುದೇ ಲಕ್ಷಣಗಳಿಲ್ಲ. ವಾತಾವರಣದ ಉಷ್ಣಾಂಶ 24 ರಿಂದ 29 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ. ಆದರೆ, ವಾತಾವರಣದಲ್ಲಿ ಶೇ. 40ಕ್ಕಿಂತ ಹೆಚ್ಚು ತೇವಾಂಶ ಇರುವುದರಿಂದ, ರಾತ್ರಿ ವೇಳೆ ಬೌಲರ್‌ಗಳಿಗೆ ಚೆಂಡು ಹಿಡಿತಕ್ಕೆ ಸಿಗದೆ ಕಷ್ಟವಾಗಬಹುದು.
ನಿನ್ನೆ ಕೊಲಂಬೊದಲ್ಲಿ ನಡೆಯಬೇಕಿದ್ದ ನ್ಯೂಜಿಲೆಂಡ್-ಪಾಕಿಸ್ತಾನ ನಡುವಿನ ಪಂದ್ಯ ಒಂದೂ ಎಸೆತ ಕಾಣದೆ ಮಳೆಯಿಂದ ರದ್ದಾಗಿತ್ತು. ಸೂಪರ್ 8 ಹಂತದಲ್ಲಿ ಪ್ರತಿ ತಂಡ ಕೇವಲ ಮೂರು ಪಂದ್ಯಗಳನ್ನು ಆಡುವುದರಿಂದ, ಮಳೆಯಿಂದ ಪಂದ್ಯ ರದ್ದಾಗಿ ಪಾಯಿಂಟ್ ಹಂಚಿಕೆಯಾದರೆ, ಅದು ತಂಡಗಳ ಸೆಮಿಫೈನಲ್ ಕನಸಿಗೆ ದೊಡ್ಡ ಹೊಡೆತ ನೀಡಲಿದೆ. ತಲಾ ನಾಲ್ಕು ತಂಡಗಳಿರುವ ಎರಡು ಗುಂಪುಗಳಿಂದ, ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಮಾತ್ರ ಸೆಮಿಫೈನಲ್‌ಗೆ ಹೋಗುತ್ತವೆ.
ಗ್ರೂಪ್ ಹಂತದಲ್ಲಿ ಪಾಕಿಸ್ತಾನ, ಯುಎಸ್‌ಎ, ನಮೀಬಿಯಾ ಮತ್ತು ನೆದರ್ಲೆಂಡ್ಸ್ ತಂಡಗಳನ್ನು ಸೋಲಿಸಿದ ಆತ್ಮವಿಶ್ವಾಸದಲ್ಲಿ ಸೂರ್ಯಕುಮಾರ್ ಯಾದವ್ ಪಡೆ ಇದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು 3-1 ಅಂತರದಿಂದ ಸೋಲಿಸಿದ ಇತಿಹಾಸವೂ ಭಾರತದ ಬಲ ಹೆಚ್ಚಿಸಿದೆ. ಇದಷ್ಟೇ ಅಲ್ಲದೇ ಕಳೆದ ಟಿ20 ವಿಶ್ವಕಪ್ ಫೈನಲ್‌ನಲ್ಲೂ ಹರಿಣಗಳಿಗೆ ಶಾಕ್ ನೀಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿತ್ತು
ಸತತ ಮೂರು ಬಾರಿ ಡಕೌಟ್ ಆಗಿ ನಿರಾಸೆ ಮೂಡಿಸಿರುವ ಯುವ ಆಟಗಾರ ಅಭಿಷೇಕ್ ಶರ್ಮಾಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎನ್ನುವಂತಿದೆ. ಸಂಜು ಸ್ಯಾಮ್ಸನ್ ಅವಕಾಶಕ್ಕಾಗಿ ಕಾಯುತ್ತಿರುವುದರಿಂದ, ಅಭಿಷೇಕ್ ಇಂದು ಮಿಂಚಲೇಬೇಕಾದ ಒತ್ತಡದಲ್ಲಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ ಇಶಾನ್ ಕಿಶನ್ ನೀಡುವ ಸ್ಫೋಟಕ ಆರಂಭ ಭಾರತದ ದೊಡ್ಡ ಶಕ್ತಿ.
ಇತ್ತ, 2024ರ ರನ್ನರ್-ಅಪ್ ದಕ್ಷಿಣ ಆಫ್ರಿಕಾ ಕೂಡ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದು, ಭಾರತ ಎದುರು ನಿರೀಕ್ಷೆಯಲ್ಲಿದೆ. ಕ್ವಿಂಟನ್ ಡಿ ಕಾಕ್ ಮತ್ತು ಏಡನ್ ಮಾರ್ಕ್ರಮ್ ಹಾಕಿಕೊಡುವ ಭದ್ರ ಬುನಾದಿಯ ಮೇಲೆ ಡೇವಿಡ್ ಮಿಲ್ಲರ್, ಡೆವಾಲ್ಡ್ ಬ್ರೆವಿಸ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಅಬ್ಬರಿಸುವ ನಿರೀಕ್ಷೆಯಲ್ಲಿ ಪ್ರೋಟೀಸ್ ಪಡೆ ಇದೆ.
ದಕ್ಷಿಣ ಆಫ್ರಿಕಾ ತಂಡವು ಕಳೆದ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಬಲಾಢ್ಯ ತಂಡಗಳನ್ನೆಲ್ಲಾ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಇನ್ನು ಫೈನಲ್‌ನಲ್ಲೂ ಹರಿಣಗಳ ಪಡೆ ಅಮೋಘ ಪ್ರದರ್ಶನ ನೀಡುವ ಮೂಲಕ ಗೆಲುವಿನ ಹೊಸ್ತಿಲಲ್ಲಿ ಬಂದು ನಿಂತಿತ್ತು. ಆದರೆ ಕೊನೆಯ ಹಂತದಲ್ಲಿ ಒತ್ತಡವನ್ನು ನಿಭಾಯಿಸಲಾರದೇ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಹೀಗಾಗಿ ಇದೀಗ 2024ರ ಟಿ20 ವಿಶ್ವಕಪ್ ಫೈನಲ್ ಸೋಲಿಗೆ 2026ರ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಮುಖಾಮುಖಿಯಲ್ಲಿ ಭಾರತವನ್ನು ಸೋಲಿಸಿ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಗ್ರೂಪ್ ಹಂತದಲ್ಲಿ ಹರಿಣಗಳ ಪಡೆ ಸಂಘಟಿತ ಪ್ರದರ್ಶನ ತೋರಿದ್ದು, ಸೂಪರ್-8 ಹಂತದಲ್ಲೂ ಅದೇ ರೀತಿಯ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.