
ಅಹಮದಾಬಾದ್: ಈ ಬಾರಿ ಐಸಿಸಿ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿ ಎಲ್ಲಾ ಪಂದ್ಯಗಳಲ್ಲೂ ಗೆದ್ದು ಅಜೇಯವಾಗಿರುವ ಹಾಲಿ ಚಾಂಪಿಯನ್ ಭಾರತ ತಂಡಕ್ಕೆ ನಿಜವಾದ ಸವಾಲು ಎದುರಾಗುವ ಸಮಯ ಬಂದಿದೆ. ಭಾನುವಾರ ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದ್ದು, ಗೆದ್ದು ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.
ಈ ಬಾರಿ ತವರಿನಲ್ಲಿ ಟೂರ್ನಿ ನಡೆಯುತ್ತಿದ್ದರೂ ಭಾರತ ತಾನಾಡಿದ 4 ಪಂದ್ಯಗಳ ಪೈಕಿ ಸಂಪೂರ್ಣ ಅಧಿಪತ್ಯ ಸಾಧಿಸಿ ಗೆದ್ದಿದ್ದು ಪಾಕಿಸ್ತಾನ ವಿರುದ್ಧ ಮಾತ್ರ. ಆ ಪಂದ್ಯ ಶ್ರೀಲಂಕಾದ ಕೊಲಂಬೊದಲ್ಲಿ ನಡೆದಿತ್ತು. ಉಳಿದ 3 ಪಂದ್ಯಗಳು ತನ್ನ ತವರಿನಲ್ಲೇ ನಡೆದಿದ್ದರೂ ಭಾರತಕ್ಕೆ ಸುಲಭದಲ್ಲಿ ಗೆಲುವು ಸಿಕ್ಕಿರಲಿಲ್ಲ. ನಮೀಬಿಯಾ ವಿರುದ್ಧ 93 ರನ್ ಗಳಿಂದ ಗೆದ್ದಿದ್ದರೂ, ಭಾರತ ಬ್ಯಾಟಿಂಗ್‌ನಲ್ಲಿ 9 ವಿಕೆಟ್ ಕಳೆದುಕೊಂಡಿತ್ತು ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿಯೇ ಸೂಪರ್-8 ಹಂತದಲ್ಲಿ ಭಾರತಕ್ಕೆ ಎಲ್ಲಾ 3 ತಂಡಗಳಿಂದಲೂ ಭಾರೀ ಪೈಪೋಟಿ ಎದುರಾಗುವ ಸಾಧ್ಯತೆ ಹೆಚ್ಚು. ಭಾರತದ ಎದುರಾಳಿ 3 ತಂಡಗಳು(ದ.ಆಫ್ರಿಕಾ, ವೆಸ್ಟ್‌ಇಂಡೀಸ್, ಜಿಂಬಾಬ್ವೆ) ಕೂಡಾ ಗುಂಪು ಹಂತದಲ್ಲಿ ಅಜೇಯವಾಗಿದ್ದವು ಎಂಬುದು ಗಮನಾರ್ಹ.
ಭಾರತ 4 ಪಂದ್ಯಗಳಲ್ಲಿ ಗೆದ್ದಿದ್ದರೂ ತಂಡದಲ್ಲಿ ಕೆಲ ಸಮಸ್ಯೆಗಳಿವೆ. ಪ್ರಮುಖವಾಗಿ, ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ತಾವಾಡಿದ 3 ಪಂದ್ಯದಲ್ಲೂ ಸೊನ್ನೆ ಸುತ್ತಿದ್ದಾರೆ. ಅವರು ಈ ಪಂದ್ಯದಲ್ಲಾದರೂ ಅಬ್ಬರಿಸಬೇಕಿದೆ. ತಿಲಕ್ ವರ್ಮಾ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದ್ದು, ಹಾರ್ದಿಕ್ ಪಾಂಡ್ಯ ಅವರಿಂದಲೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಅಗತ್ಯವಿದೆ. ನಾಯಕ ಸೂರ್ಯಕುಮಾರ್, ಇಶಾನ್ ಕಿಶನ್, ಶಿವಂ ದುಬೆ ತಮ್ಮ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.
ತಂಡದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಆಗಬಹುದು. ಅರ್ಶ್‌ದೀಪ್ ಸಿಂಗ್ ಬದಲು ಕುಲ್ದೀಪ್ ಯಾದವ್ ಹಾಗೂ ವಾಷಿಂಗ್ಟನ್ ಸುಂದರ್ ಬದಲು ಅಕ್ಷರ್ ಪಟೇಲ್ ಆಡುವ 11ರ ಬಳಗದಲ್ಲಿ ಕಾಣಸಿಕೊಳ್ಳಬಹುದು.
ಕಳೆದ ಬಾರಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ವಿರುದ್ಧ ದ.ಆಫ್ರಿಕಾ ವೀರೋಚಿತ ಸೋಲು ಕಂಡಿತ್ತು. ಈ ಬಾರಿ ಉಭಯ ತಂಡಗಳು ಸೂಪರ್-8ನಲ್ಲೇ ಮುಖಾಮುಖಿಯಾಗುತ್ತಿದ್ದು, ಭಾರತ ವಿರುದ್ಧ ಗೆದ್ದು ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಈ ವಿಶ್ವಕಪ್‌ಗೂ ಮುನ್ನ ನಡೆದಿದ್ದ ಟಿ20 ಸರಣಿಯಲ್ಲಿ ಭಾರತ 3-1ರಿಂದ ಗೆದ್ದಿತ್ತು.
ಪಂದ್ಯ ಆರಂಭ: ಸಂಜೆ 7 ಗಂಟೆಗೆ
ಒಟ್ಟು ಮುಖಾಮುಖಿ: 35
ಭಾರತ: 21
ದ.ಆಫ್ರಿಕಾ: 13
ರದ್ದು: 01
ಭಾನುವಾರ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾಗೆ ಇಂಗ್ಲೆಂಡ್ ಸವಾಲು ಎದುರಾಗಲಿದೆ. ಗುಂಪು ಹಂತದಲ್ಲಿ ಉಭಯ ತಂಡಗಳು ತಲಾ 4 ಪಂದ್ಯಗಳನ್ನಾಡಿದ್ದು, 3ರಲ್ಲಿ ಗೆದ್ದಿದ್ದವು. ಇಂಗ್ಲೆಂಡ್ ತಂಡ ನೇಪಾಳ ವಿರುದ್ಧ ಸೋಲಿನ ಆಘಾತದಿಂದ ಪಾರಾಗಿ ಗೆದ್ದಿದ್ದರೆ, ಲಂಕಾ ತಂಡ ಜಿಂಬಾಬ್ವೆ ವಿರುದ್ಧ ಸೋತಿತ್ತು.
ಪಂದ್ಯ: ಮಧ್ಯಾಹ್ನ 3 ಗಂಟೆಗೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.