
ಬೆಂಗಳೂರು: ಹುಬ್ಬಳ್ಳಿಯಲ್ಲಿ ಇದೇ ಫೆಬ್ರವರಿ 24ರಿಂದ ಆರಂಭವಾಗಲಿರುವ ಜಮ್ಮು ಮತ್ತೆ ಕಾಶ್ಮೀರ ವಿರುದ್ದದ ರಣಜಿ ಟ್ರೋಫಿ ಫೈನಲ್ ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ಕರ್ನಾಟಕ ತಂಡ ಪ್ರಕಟಿಸಲಾಗಿದ್ದು, ಹಲವು ತಾರಾ ಆಟಗಾರರು ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಸೆಮಿಫೈನಲ್‌ನಲ್ಲಿ ಉತ್ತರಖಂಡ ಎದುರು ಆಡಿದ ತಂಡವನ್ನೇ ಫೈನಲ್‌ಗೂ ಆಯ್ಕೆ ಮಾಡಿಕೊಳ್ಳಲಾಗಿದೆ.
ಕ್ವಾರ್ಟರ್ ಫೈನಲ್‌ನಿಂದ ದೇವದತ್ ಪಡಿಕ್ಕಲ್ ನಾಯಕನಾಗಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿದ್ದು, ಟೀಂ ಇಂಡಿಯಾ ಕ್ರಿಕೆಟಿಗರಾದ ಕೆ ಎಲ್ ರಾಹುಲ್, ಕರುಣ್ ನಾಯರ್, ಪ್ರಸಿದ್ದ್ ಕೃಷ್ಣ, ಮಯಾಂಕ್ ಅಗರ್‌ವಾಲ್, ಅನುಭವಿ ಕ್ರಿಕೆಟಿಗರಾದ ಶ್ರೇಯಸ್ ಗೋಪಾಲ್, ವಿದ್ವತ್ ಕಾವೇರಪ್ಪ, ವೈಶಾಖ್ ವಿಜಯ್ ಕುಮಾರ್ ಸೇರಿದಂತೆ ಹಲವು ಸ್ಟಾರ್ ಆಟಗಾರರು ಸ್ಥಾನ ಪಡೆದಿದ್ದಾರೆ.
ಮಯಾಂಕ್ ಅಗರ್‌ವಾಲ್, ಕೆ ಎಲ್ ರಾಹುಲ್, ಅನೀಶ್ ಕೆ.ವಿ, ದೇವದತ್ ಪಡಿಕ್ಕಲ್(ನಾಯಕ), ಕರುಣ್ ನಾಯರ್, ಆರ್ ಸ್ಮರಣ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ, ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ್, ಪ್ರಸಿದ್ದ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಶ್ರೀಜಿತ್ ಕೆ ಎಲ್, ವೈಶಾಖ್ ವಿಜಯ್‌ಕುಮಾರ್
ಈ ಬಾರಿ ಟೂರ್ನಿಯ ಫೈನಲ್ ಪಂದ್ಯ ಫೆ.24ರಿಂದ ಹುಬ್ಬಳ್ಳಿ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜ್ಯ ತಂಡಕ್ಕೆ ಜಮ್ಮು ಮತ್ತು ಕಾಶ್ಮೀರ ತಂಡದ ಸವಾಲು ಎದುರಾಗಲಿದೆ. ಜಮ್ಮು-ಕಾಶ್ಮೀರ 67 ವರ್ಷಗಳಲ್ಲೇ ಮೊದಲ ಬಾರಿ ರಣಜಿ ಫೈನಲ್‌ಗೇರಿದೆ. ಸೆಮಿಫೈನಲ್‌ನಲ್ಲಿ ಜಮ್ಮು & ಕಾಶ್ಮೀರ ತಂಡವು ಪಶ್ಚಿಮ ಬಂಗಾಳ ಎದುರು ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.
ಹೌದು, ಕಳೆದೊಂದು ದಶಕದಿಂದ ಕರ್ನಾಟಕ ತಂಡವು ರಣಜಿ ಟ್ರೋಫಿ ಫೈನಲ್‌ಗೇರಲು ಪದೇ ಪದೇ ವಿಫಲವಾಗುತ್ತಾ ಬಂದಿತ್ತು. 2015-15ರಲ್ಲಿ ಕೊನೆಯ ಬಾರಿಗೆ ಫೈನಲ್ ಪ್ರವೇಶಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಕರ್ನಾಟಕ ತಂಡವು, ಇದಾದ ಬಳಿಕ ಒಮ್ಮೆಯೂ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿರಲಿಲ್ಲ. ಇದೀಗ ಟೂರ್ನಿಯುದ್ದಕ್ಕೂ ಅತ್ಯದ್ಭುತ ಹಾಗೂ ಅವಿಸ್ಮರಣೀಯ ಪ್ರದರ್ಶನ ತೋರುವ ಮೂಲಕ 11 ವರ್ಷಗಳ ಬಳಿಕ ರಣಜಿ ಟ್ರೋಫಿ ಫೈನಲ್‌ಗೆ ಕರ್ನಾಟಕ ಲಗ್ಗೆಯಿಟ್ಟಿದೆ.
ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡವು ಉತ್ತರಖಂಡ ಎದುರು ಡ್ರಾ ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿತ್ತು. ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 736 ರನ್ ಬಾರಿಸಿ ಆಲೌಟ್ ಆಗಿತ್ತು. ಕಠಿಣ ಸವಾಲು ಬೆನ್ನತ್ತಿದ ಉತ್ತರಖಂಡ ತಂಡವು ಕರ್ನಾಟಕದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 233 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಕರ್ನಾಟಕ ತಂಡವು 503 ರನ್‌ಗಳ ಬೃಹತ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಿತು.
ಇನ್ನು ಉತ್ತರಖಂಡ ಮೇಲೆ ಫಾಲೋ ಆನ್ ಹೇರುವ ಅವಕಾಶವಿದ್ದರೂ ಕರ್ನಾಟಕ ತಂಡವು ಹಾಗೆ ಮಾಡದೇ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಮರಣ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಕರ್ನಾಟಕ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ 323 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಉತ್ತರಖಂಡ್‌ಗೆ ಗೆಲ್ಲಲು 827 ರನ್‌ಗಳ ಕಠಿಣ ಟಾರ್ಗೆಟ್ ನೀಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತರಖಂಡ ತಂಡವು ಆರು ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.