ಧರ್ಮಶಾಲಾದಲ್ಲಿಂದು ಇಂಡೋ-ಆಫ್ರಿಕಾ ಮೊದಲ ಒನ್ ಡೇ ಮ್ಯಾಚ್

By Suvarna NewsFirst Published Mar 12, 2020, 9:57 AM IST
Highlights

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಧರ್ಮಶಾಲಾ ಆತಿಥ್ಯ ವಹಿಸಿದೆ. ಕಿವೀಸ್ ಎದುರು ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದ್ದ ಭಾರತ ಗೆಲುವಿನ ಹಳಿಗೆ ಮರಳು ಎದುರು ನೋಡುತ್ತಿದೆ. ಇನ್ನು ಹರಿಣಗಳ ಪಡೆ ಆಸೀಸ್ ಎದುರು ಕ್ಲೀನ್ ಸ್ವೀಪ್ ಸಾಧಿಸಿದ್ದು, ಇದೀಗ ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ಧರ್ಮಶಾಲಾ(ಮಾ.12): ನ್ಯೂಜಿಲೆಂಡ್‌ನಲ್ಲಿ ಅನಿರೀಕ್ಷಿತ ವೈಟ್‌ವಾಷ್‌ ಮುಖಭಂಗಕ್ಕೆ ಗುರಿಯಾಗಿದ್ದ ಟೀಂ ಇಂಡಿಯಾ, ಗುರುವಾರದಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಗೆದ್ದು ಪುಟಿದೇಳುವ ವಿಶ್ವಾಸದಲ್ಲಿದೆ. ಮೊದಲ ಪಂದ್ಯಕ್ಕೆ ಇಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣ ಆತಿಥ್ಯ ನೀಡಲಿದ್ದು, ಭಾರತ ತಂಡ ಶುಭಾರಂಭ ಮಾಡಲು ಎದುರು ನೋಡುತ್ತಿದೆ.

ಭಾರತ-ಸೌತ್ ಆಫ್ರಿಕಾ 1ನೇ ಏಕದಿನ; ಇಲ್ಲಿದೆ ಸಂಭವನೀಯ ತಂಡ!

ಕೊರೋನಾ ಸೋಂಕಿನ ಭೀತಿ ಹಾಗೂ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕದ ನಡುವೆಯೇ ಹಾರ್ದಿಕ್‌ ಪಾಂಡ್ಯ, ಶಿಖರ್‌ ಧವನ್‌ ಹಾಗೂ ಭುವನೇಶ್ವರ್‌ ಕುಮಾರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಲು ಕಾತರಿಸುತ್ತಿದ್ದಾರೆ. ಆಲ್ರೌಂಡರ್‌ ಹಾರ್ದಿಕ್‌ ವಾಪಸಾಗುತ್ತಿರುವುದು ನಾಯಕ ವಿರಾಟ್‌ ಕೊಹ್ಲಿಗೆ ಖುಷಿ ನೀಡಿದ್ದು, ನ್ಯೂಜಿಲೆಂಡ್‌ ಪ್ರವಾಸದ ಕಹಿ ನೆನಪುಗಳನ್ನು ಮರೆಯುವ ಉತ್ಸಾಹದಲ್ಲಿದ್ದಾರೆ.

ಹಾರ್ದಿಕ್‌ ಕೊನೆ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದು ಕಳೆದ ವರ್ಷ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ. ದ.ಆಫ್ರಿಕಾ ವಿರುದ್ಧ ಕಳೆದ ಸೆಪ್ಟೆಂಬರ್‌ನಲ್ಲಿ ಆಡಿದ ಟಿ20 ಪಂದ್ಯದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಹಾರ್ದಿಕ್‌, ಗಾಯದಿಂದ ಗುಣಮುಖರಾಗಿದ್ದು ಇತ್ತೀಚೆಗೆ ನಡೆದ ಡಿ.ವೈ.ಪಾಟೀಲ್‌ ಟಿ20 ಟೂರ್ನಿಯಲ್ಲಿ ಸ್ಫೋಟಕ ಆಟವಾಡಿ ತಂಡಕ್ಕೆ ಮರಳಿದ್ದಾರೆ.

ಆಫ್ರಿಕಾ ವಿರುದ್ಧವಾದ್ರೂ ಫಾರ್ಮ್‌ಗೆ ಬರ್ತಾರಾ ವಿರಾಟ್ ಕೊಹ್ಲಿ..?

ಒತ್ತಡದಲ್ಲಿ ಕೊಹ್ಲಿ: ನ್ಯೂಜಿಲೆಂಡ್‌ ವಿರುದ್ಧ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಕಳಪೆ ಪ್ರದರ್ಶನ ತೋರಿದರು. ಕೇವಲ 75 ರನ್‌ ಕಲೆಹಾಕಿದ ವಿರಾಟ್‌, ಹರಿಣಗಳ ಮೇಲೆ ಸವಾರಿ ಮಾಡಲು ಎದುರು ನೋಡುತ್ತಿದ್ದಾರೆ. ಟಿ20 ವಿಶ್ವಕಪ್‌ ವರ್ಷದಲ್ಲಿ ಏಕದಿನ ಸರಣಿಗಳಿಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ ಎಂದು ಕೊಹ್ಲಿ ಹೇಳಿದ್ದರೂ, ಲಯಕ್ಕೆ ಮರಳಲು ಕೊಹ್ಲಿ ಈ ಸರಣಿಯನ್ನು ಉತ್ತಮವಾಗಿ ಬಳಸಿಕೊಳ್ಳಬೇಕಿದೆ.

ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಧವನ್‌ ಜತೆ ಪೃಥ್ವಿ ಶಾ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಕೇದಾರ್‌ ಜಾಧವ್‌ ತಂಡದಿಂದ ಹೊರಬಿದ್ದಿರುವ ಕಾರಣ ಮನೀಶ್‌ ಪಾಂಡೆಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಕೆ.ಎಲ್‌.ರಾಹುಲ್‌ ವಿಕೆಟ್‌ ಕೀಪರ್‌ ಜವಾಬ್ದಾರಿ ನಿಭಾಯಿಸಲಿದ್ದಾರೆ. ಇಲ್ಲಿನ ಪಿಚ್‌ ವೇಗಿಗಳಿಗೆ ನೆರವಾಗಲಿರುವ ಕಾರಣ, ರವೀಂದ್ರ ಜಡೇಜಾ ಏಕೈಕ ಸ್ಪಿನ್ನರ್‌ ಆಗಿ ಆಡಬಹುದು. ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ರನ್ನೂ ಆಡಿಸಿದರೆ, ಪಾಂಡೆ ತಮ್ಮ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ.

ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬೂಮ್ರಾ, ನವ್‌ದೀಪ್‌ ಸೈನಿ ವೇಗದ ಬೌಲಿಂಗ್‌ ಹೊಣೆ ಹೊರಲಿದ್ದಾರೆ. ಶುಭ್‌ಮನ್‌ ಗಿಲ್‌ ಈ ಸರಣಿಯಲ್ಲೂ ಬೆಂಚ್‌ ಕಾಯ್ದರೆ ಅಚ್ಚರಿಯಿಲ್ಲ.

ಆತ್ಮವಿಶ್ವಾಸದಲ್ಲಿ ದ.ಆಫ್ರಿಕಾ: ಆಸ್ಪ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿ ಭಾರತಕ್ಕೆ ಆಗಮಿಸಿರುವ ದಕ್ಷಿಣ ಆಫ್ರಿಕಾ, ಮತ್ತೊಂದು ಸರಣಿ ಜಯದ ವಿಶ್ವಾಸದಲ್ಲಿದೆ. ಕ್ವಿಂಟನ್‌ ಡಿ ಕಾಕ್‌, ಫಾಫ್‌ ಡು ಪ್ಲೆಸಿ, ಡೇವಿಡ್‌ ಮಿಲ್ಲರ್‌ರಂತಹ ಅನುಭವಿ ಆಟಗಾರರ ಜತೆ ಜನ್ನೆಮಾನ್‌ ಮಲಾನ್‌, ರಾಸಿ ವಾನ್‌ ಡರ್‌ ಡುಸ್ಸೆನ್‌, ಹೆನ್ರಿಚ್‌ ಕ್ಲಾಸೆನ್‌ರಂತಹ ಯುವ ಆಟಗಾರರು ಭರವಸೆ ಮೂಡಿಸಿದ್ದಾರೆ. ದ.ಆಫ್ರಿಕಾ ಸಹ ಟಿ20 ವಿಶ್ವಕಪ್‌ಗೆ ಸದೃಢ ತಂಡ ಕಟ್ಟಲು ಈ ಸರಣಿಯನ್ನು ಉಪಯೋಗಿಸಿಕೊಳ್ಳಲಿದೆ.

ಪಿಚ್‌ ರಿಪೋರ್ಟ್‌

ಧರ್ಮಶಾಲಾ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, 2ನೇ ಇನ್ನಿಂಗ್ಸಲ್ಲಿ ಬ್ಯಾಟ್‌ ಮಾಡುವ ತಂಡಕ್ಕೆ ಹೆಚ್ಚಿನ ನೆರವು ದೊರೆಯಲಿದೆ. ಇಲ್ಲಿ 4 ಏಕದಿನ ಪಂದ್ಯಗಳು ನಡೆದಿದ್ದು, 3ರಲ್ಲಿ ಮೊದಲು ಫೀಲ್ಡ್‌ ಮಾಡಿದ ತಂಡ ಗೆದ್ದಿದೆ. ವೇಗಿಗಳಿಗೆ ಸಹಕಾರ ಸಿಗಲಿದ್ದು, ಒಬ್ಬ ಸ್ಪಿನ್ನರ್‌ನನ್ನು ಆಡಿಸುವ ಸಾಧ್ಯತೆ ಹೆಚ್ಚು.

ಸಂಭವನೀಯರ ಪಟ್ಟಿ

ಭಾರತ: ಶಿಖರ್‌ ಧವನ್‌, ಪೃಥ್ವಿ ಶಾ, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ಕೆ.ಎಲ್‌.ರಾಹುಲ್‌, ಮನೀಶ್‌ ಪಾಂಡೆ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌, ನವ್‌ದೀಪ್‌ ಸೈನಿ, ಜಸ್‌ಪ್ರೀತ್‌ ಬೂಮ್ರಾ.

ದ.ಆಫ್ರಿಕಾ: ಕ್ವಿಂಟನ್‌ ಡಿ ಕಾಕ್‌(ನಾಯಕ), ಮಲಾನ್‌/ಬವುಮಾ/ಸ್ಮಟ್ಸ್‌, ವಾನ್‌ ಡರ್‌ ಡುಸ್ಸೆನ್‌, ಫಾಫ್‌ ಡು ಪ್ಲೆಸಿ, ಹೆನ್ರಿಚ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌, ಆ್ಯಂಡಿಲೆ ಫೆಲುಕ್ವಾಯೋ, ಕೇಶವ್‌ ಮಹಾರಾಜ್‌, ಹೆಂಡ್ರಿಕ್ಸ್‌/ಲಿಂಡೆ, ನೋಕಿಯೋ, ಎನ್‌ಗಿಡಿ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

click me!