
ದುಬೈ(ಸೆ.05): ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಜಿದ್ದಾಜಿದ್ದಿನ ಪೈಪೋಟಿಗೆ ದುಬೈ ಅಂತಾರಾಷ್ಟ್ರೀಯ ಮೈದಾನ ಸಾಕ್ಷಿಯಾಗಿತ್ತು. ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಎರಡನೇ ಪಂದ್ಯದ ಟಾಸ್ ವೇಳೆ ವೀಕ್ಷಕ ವಿವರಣೆಗಾರಿಕೆ ನೀಡುತ್ತಿದ್ದ ರವಿಶಾಸ್ತ್ರಿ ಮಾಡಿದ ಯಡವಟ್ಟು ತಡವಾಗಿ ಬೆಳಕಿಗೆ ಬಂದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ. ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗಿದ್ದಾಗ ಸಾಕಷ್ಟು ಬಾರಿ ಟ್ರೋಲ್ ಆಗಿದ್ದರು. ಇದೀಗ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ವೀಕ್ಷಕ ವಿವರಣೆಗಾರಿಕೆ ವೇಳೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲರ್ಸ್‌ಗೆ ಆಹಾರವಾಗಿದ್ದಾರೆ.
ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ ಎದುರು ಪಾಕಿಸ್ತಾನ ಕ್ರಿಕೆಟ್ ತಂಡವು 5 ವಿಕೆಟ್‌ಗಳ ರೋಚಕ ಸೋಲು ಅನುಭವಿಸಿತ್ತು. ಹೀಗಾಗಿ ಸೂಪರ್ 4 ಹಂತದಲ್ಲಿ ಭಾರತಕ್ಕೆ ತಿರುಗೇಟು ನೀಡುವ ಲೆಕ್ಕಾಚಾರದೊಂದಿಗೆ ಬಾಬರ್ ಅಜಂ ಪಡೆ ಕಣಕ್ಕಿಳಿದಿತ್ತು. ಟಾಸ್ ಸಂದರ್ಭದಲ್ಲಿ ಕೊಂಚ ಗೊಂದಲದ ಸನ್ನಿವೇಷಕ್ಕೆ ಸಾಕ್ಷಿಯಾಯಿತು. ಟಾಸ್ ಸಂದರ್ಭದಲ್ಲಿ ರವಿಶಾಸ್ತ್ರಿ ಪಾಕಿಸ್ತಾನ ನಾಯಕ ಬಾಬರ್ ಅಜಂ ಹೆಡ್ ಎಂದು ಹೇಳಿದರು ಎಂದರು. ಆದರೆ ಬಾಬರ್ ಅಜಂ ಟೇಲ್ ಎಂದು ಹೇಳಿದ್ದರು. ಟಾಸ್ ನಡೆಸುವ ಸಂದರ್ಭದಲ್ಲಿ ಮೈದಾನದಲ್ಲಿ ಹಾಜರಿದ್ದ ಮ್ಯಾಚ್ ರೆಫ್ರಿ ಆಂಡಿ ಪೈಕ್ರಾಫ್ಟ್ ಕೂಡಾ ಬಾಬರ್ ಅಜಂ ಟೇಲ್ ಎಂದರು ಎನ್ನುವುದನ್ನು ಖಚಿತಪಡಿಸಿದರು.
ಇನ್ನು ಟಾಸ್ ಗೆದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ತಾವು ಮೊದಲು ಬೌಲಿಂಗ್ ಮಾಡುವುದಾಗಿ ತಿಳಿಸಿದರು. ಎರಡನೇ ಇನಿಂಗ್ಸ್ ವೇಳೆ ಇಬ್ಬನಿ ಬೀಳುವ ಸಾಧ್ಯತೆಯಿರುವುದರಿಂದಾಗಿ ತಾವು ಚೇಸಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿಸಿದರು. ಭಾರತ ವಿರುದ್ದದ ಕಳೆದ ಪಂದ್ಯದಲ್ಲಿ ತಾವು ಪಾಠ ಕಲಿತಿದ್ದೇವೆ. ಈ ಪಂದ್ಯದಲ್ಲಿ ತಾವು ಧನಾತ್ಮಕ ಆಟ ಆಡುವುದಾಗಿ ತಿಳಿಸಿದರು. ನಂತರದಲ್ಲಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಶೆಹನವಾಜ್ ದಹಾನಿ ಬದಲಿಗೆ ಹೊಸನೈನ್ ಪಾಕಿಸ್ತಾನ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.
Asia Cup T20: ಭಾರತದ ಸೋಲಿನ ನಂತರ ಪಾಕ್‌ನಿಂದ ಸಿಖ್ಖರನ್ನು ಕೆರಳಿಸುವ ಪ್ರಯತ್ನ..!
ಇನ್ನು ಖ್ಯಾತ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಮಾಡಿದ ಯಡವಟ್ಟಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ಗಳು ವ್ಯಕ್ತವಾಗಿದೆ.
ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ಉಪನಾಯಕ ಕೆ ಎಲ್ ರಾಹುಲ್ ಕೇವಲ 5.1 ಓವರ್‌ಗಳಲ್ಲಿ 53 ರನ್‌ಗಳ ಜತೆಯಾಟ ನಿಭಾಯಿಸಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಪ್ರದರ್ಶನ ತೋರಲು ವಿಫಲವಾದರು. ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 60 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.
ಇನ್ನು ಗೆಲ್ಲಲು 182 ರನ್‌ಗಳ ಗುರಿ ಪಡೆದ ಪಾಕಿಸ್ತಾನ ತಂಡವು ಆರಂಭದಲ್ಲೇ ನಾಯಕ ಬಾಬರ್ ಅಜಂ ವಿಕೆಟ್ ಕಳೆದುಕೊಂಡಿತು. ಆದರೆ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್(71), ಮೊಹಮ್ಮದ್ ನವಾಜ್(40) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ ಪಾಕಿಸ್ತಾನ ತಂಡವು 5 ವಿಕೆಟ್‌ಗಳ ಅಂತರದ ಗೆಲುವಿನ ನಗೆ ಬೀರಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.